Advertisement

ಶೂನ್ಯ ಫ‌ಲಿತಾಂಶದ ಶಾಲಾ, ಕಾಲೇಜು ವಿರುದ್ಧ ಕ್ರಮವಿಲ್ಲ!

11:35 AM Nov 08, 2017 | Team Udayavani |

ಬೆಂಗಳೂರು: ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೂನ್ಯ ಫ‌ಲಿತಾಂಶ ಪಡೆದ ಶಾಲಾ ಕಾಲೇಜುಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶೂನ್ಯ ಫ‌ಲಿತಾಂಶದ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಫ‌ಲಿತಾಂಶ ಪ್ರಕಟಣೆಯಂದು ಶಿಕ್ಷಣ ಸಚಿವರೇ ಘೋಷಣೆ ಮಾಡಿದ್ದರು.

Advertisement

2015-16 ಹಾಗೂ 2016-17ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುನಲ್ಲಿ ಶೂನ್ಯ ಫ‌ಲಿತಾಂಶ ಪಡೆದ ಕಾಲೇಜುಗಳಿಗೆ ನೋಟಿಸ್‌ ಜಾರಿ ಮಾಡಿರುವುದೇ ದೊಡ್ಡ ಸಾಧನೆ. ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಹಾಗೂ ನೀಡದೇ ಇರುವ ಯಾವುದೇ ಶಾಲಾ ಕಾಲೇಜು ಆಡಳಿತ ಮಂಡಳಿ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಂಡಿಲ್ಲ. ಮಾನ್ಯತೆಯನ್ನೂ ರದ್ದು ಮಾಡಿಲ್ಲ.

ಶೂನ್ಯ ಸಾಧನೆ: 2017ರ ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ 5 ಸರ್ಕಾರಿ, 4 ಅನುದಾನಿತ, 51 ಅನುದಾನ ರಹಿತ ಪ್ರೌಢಶಾಲೆ ಸೇರಿ 60 ಶಾಲೆಗಳು ಶೂನ್ಯ ಫ‌ಲಿತಾಂಶ ಸಂಪಾದಿಸಿವೆ. ದ್ವಿತೀಯ ಪಿಯು ಫ‌ಲಿತಾಂಶದಲ್ಲಿ 3 ಸರ್ಕಾರಿ, 1 ಅನುದಾನಿತ, 127 ಅನುದಾನ ರಹಿತ ಹಾಗೂ 1 ಸಂಯುಕ್ತ ಪಿಯು ಕಾಲೇಜು ಸೇರಿ 132 ಕಾಲೇಜುಗಳು ಶೂನ್ಯ ಸಂಪಾದನೆ ಮಾಡಿವೆ.
|
ಹಾಗೆಯೇ 2016ರಲ್ಲಿ  88 ಅನುದಾನ ರಹಿತ ಪ್ರೌಢಶಾಲೆ ಸೇರಿ 91 ಶಾಲೆಗಳು ಎಸ್ಸೆಸ್ಸೆಲ್ಸಿಯ ಮತ್ತು 43 ಅನುದಾನ ರಹಿತ ಕಾಲೇಜು ಸೇರಿ 52 ಕಾಲೇಜುಗಳು ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೂನ್ಯ ಫ‌ಲಿತಾಂಶ ಗಳಿಸಿವೆ.

ನೋಟಿಸ್‌ ಬಳಿಕ ಕ್ರಮವಿಲ್ಲ: ಶೂನ್ಯ ಸಂಪಾದನೆ, ಶೇ.10, ಶೇ.20, ಶೇ.40, ಶೇ.60 ಹಾಗೂ ನೂರಕ್ಕೆ ನೂರು ಫ‌ಲಿತಾಂಶ ಪಡೆದ  ಶಾಲೆಗಳ ವಿಶ್ಲೇಷಣಾತ್ಮಕ ಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸಲ್ಲಿಸಲಾಗಿದೆ. ಶೂನ್ಯ ಫ‌ಲಿತಾಂಶದ ಶಾಲೆಗೆ ನೋಟಿಸ್‌ ಜಾರಿಮಾಡಿದೆ.

ನೋಟಿಸ್‌ ನಂತರ ಏನು ಕ್ರಮ ಎಂದರೆ ಅಧಿಕಾರಿಗಳಲ್ಲಿ ಉತ್ತರ ಇಲ್ಲ. ಶೂನ್ಯ ಹಾಗೂ ಶೇ.30ಕ್ಕಿಂತ ಕಡಿಮೆ ಫ‌ಲಿತಾಂಶದ ಶಾಲಾ ಕಾಲೇಜುಗಳಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯು ಒಟ್ಟಾರೆ ಫ‌ಲಿತಾಂಶದ ಮೇಲೆ ಹೊಡೆತ ಬೀಳುತ್ತದೆ.  ಶೂನ್ಯ ಫ‌ಲಿತಾಂಶದ ಶಾಲಾ, ಕಾಲೇಜುಗಳ ಮಾನ್ಯತೆಯನ್ನು ಏಕಾಏಕಿ ರದ್ದು ಮಾಡಲು ಸಾಧ್ಯವಿಲ್ಲ.

Advertisement

ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಂಥ ಶಾಲೆಗಳಿಗೆ ಸೂಚನೆ ನೀಡುತ್ತೇವೆ. ಶೈಕ್ಷಣಿಕ ಉನ್ನತೀಕರಣಕ್ಕೆ ಬೇಕಾದ ಮಾರ್ಗದರ್ಶನವನ್ನೂ ಒದಗಿಸುತ್ತಿದ್ದೇವೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ಮಾಹಿತಿ ನೀಡಿದರು.

ಶುಲ್ಕ ಪಾವತಿಗೆ ಅವಕಾಶ: ಮಾರ್ಚ್‌ 2018ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿಗಳು ಶುಲ್ಕ ಸಂದಾಯ ಮಾಡಲು ನ.11ರ ತನಕ ಅವಕಾಶ ನೀಡಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಇಲಾಖೆ ವೆಬ್‌ಸೈಟ್‌ www.pue.kar.nic.in ನಲ್ಲಿ ಪಡೆಯಬಹುದು. ಶುಲ್ಕ ಪಾವತಿಸದ ಪುನರಾವರ್ತಿತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸಬೇಕು ಎಂದು ಪಿಯು ಇಲಾಖೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next