ಈ ವಿಷಯ ಯಶ್ ಅವರ ಅಭಿಮಾನಿಗಳಿಗೆ ಬೇಸರ ತರಿಸಬಹುದು. ಆದರೂ ಇದು ಸತ್ಯ. ಈಗಿನ ಸುದ್ದಿಯ ಪ್ರಕಾರ, ಯಶ್ ಅಭಿನಯದ “ಕೆ.ಜಿ.ಎಫ್’ ಚಿತ್ರದ ಬಿಡುಗಡೆ ಸ್ವಲ್ಪ ಮುಂದಕ್ಕೆ ಹೋಗಿದೆ. ಹಾಗಾಗಿ ಈ ವರ್ಷ ಯಶ್ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗದಿರುವುದು ಅವರ ಅಭಿಮಾನಿಗಳಿಗೆ ಖಂಡಿತಾ ಬೇಸರ ತರಿಸಬಹುದು.
ಈ ವರ್ಷದ ಆರಂಭದಲ್ಲಿ ಆರಂಭವಾದ “ಕೆ.ಜಿ.ಎಫ್’ ಚಿತ್ರವು ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗೆಯಾಗಲಿದೆ ಎಂದು ಹೇಳಲಾಗಿತ್ತು. ಸ್ವತಃ ಯಶ್, ಚಿತ್ರವು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದ್ದರು. ಆದರೆ, “ಕೆ.ಜಿ.ಎಫ್’ ಚಿತ್ರವು ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿರುವುದರಿಂದ, ಚಿತ್ರವು ಸ್ವಲ್ಪ ನಿಧಾನವಾಗುತ್ತಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಬೇಕಿತ್ತು. ಆದರೆ, ಮೂಲಗಳ ಪ್ರಕಾರ ಚಿತ್ರದ ಚಿತ್ರೀಕರಣ ಇನ್ನೂ ಸಂಪೂರ್ಣವಾಗಿಲ್ಲ. ಎಲ್ಲವೂ ಮುಗಿದು, ಚಿತ್ರ ಬಿಡುಗಡೆಯಾಗುವುದಕ್ಕೆ ಇನ್ನೂ ನಾಲ್ಕು ತಿಂಗಳಾದರೂ ಬೇಕಂತೆ. ಹಾಗಾಗಿ ಚಿತ್ರದ ಬಿಡುಗಡೆ ಏನಿದ್ದರೂ 2018ರ ಫೆಬ್ರವರಿ ಅಥವಾ ಮಾರ್ಚ್ ಎಂದು ಹೇಳಲಾಗುತ್ತಿದೆ.
ಯಶ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಒಂದು ವರ್ಷವಾಗಿದೆ. ಅವರ ಕೊನೆಯ ಚಿತ್ರ “ಸಂತು ಸ್ಟ್ರೇಟ್ ಫಾರ್ವರ್ಡ್’ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು. ಸುಮಾರು ಒಂದು ವರ್ಷದಿಂದ ಯಶ್ ಅಭಿನಯದ ಚಿತ್ರವೊಂದಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದು, ಡಿಸೆಂಬರ್‌ನಲ್ಲಿ “ಕೆ.ಜಿ.ಎಫ್’ ಬಿಡುಗಡೆಗಾಗಿ ಕಾಯುತ್ತಿದ್ದರು. ಈಗ ಚಿತ್ರವು ಮುಂದಕ್ಕೆ ಹೋಗಿರುವುದರಿಂದ, ನಿರಾಸೆಯ ಜೊತೆಗೆ ಚಿತ್ರದ ಬಗೆಗಿನ ನಿರೀಕ್ಷೆ ಮತ್ತು ಕುತೂಹಲಗಳು ಸಹ ಹೆಚ್ಚಾಗಿದೆ.