Advertisement
ಇದು ಸಮ್ಮಿಶ್ರ ಸರಕಾರದಿಂದ ಜಿಲ್ಲೆಗೆ ಸಿಕ್ಕಿರುವ ಹೊಸ ಯೋಜನೆ. ಮೇಲಾಗಿ ಇಸ್ರೇಲ್ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಹನಿ ನೀರಾವರಿ ಪದ್ಧತಿಯ ಮೂಲಕ ಜಾರಿಯಾಗುತ್ತಿರುವ ಮೊದಲ ಜಿಲ್ಲೆ. ಇದರಿಂದ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಮಲಪ್ರಭಾ ನದಿ ತೀರ ವ್ಯಾಪ್ತಿಯ 39 ಗ್ರಾಮಗಳ ರೈತರು ಲಾಭ ಪಡೆಯಲಿದ್ದಾರೆ.
Related Articles
Advertisement
ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಮಾಡಿರುವುದು ಸಂತಸ ತಂದಿದೆ. ಇದಕ್ಕೆ ಅನುಗುಣವಾಗಿ ಶೀಘ್ರದಲ್ಲೇ ತಮ್ಮ ಕ್ಷೇತ್ರ ವ್ಯಾಪ್ತಿಯ 39 ಹಳ್ಳಿಗಳಲ್ಲಿ ರೈತರ ಸಮಿತಿ ರಚನೆ ಮಾಡಿ ಇದರ ಬಗ್ಗೆ ಮಾಹಿತಿ ನೀಡಿ ಅದರ ಬಳಕೆ ಮಾಡಿಕೊಳ್ಳಲು ತಿಳಿವಳಿಕೆ ನೀಡಲಾಗುವುದು. ಒಮ್ಮೆ ಈ ಯೋಜನೆ ಅನುಷ್ಠಾನಕ್ಕೆ ಬಂದರೆ ನದಿ ತೀರದಲ್ಲಿ ಕೃಷಿ ಪಂಪ್‌ಸೆಟ್‌ಗಳು ಕಾಣುವುದಿಲ್ಲ. ವಿದ್ಯುತ್ ಅವಘಡಗಳಿಂದ ಸಾವು ಸಂಭವಿಸುವುದಿಲ್ಲ ಎನ್ನುತ್ತಾರೆ ಶಾಸಕ ಮಹಾಂತೇಶ ಕೌಜಲಗಿ.
ಯೋಜನೆಯ ಘೋಷಣೆ ಬಗ್ಗೆ ರೈತರಲ್ಲಿ ಸಂತಸ ವ್ಯಕ್ತವಾಗಿದೆ. ಆದರೆ ಅದರ ಅನುಷ್ಠಾನ ಹಾಗೂ ಯಶಸ್ಸಿನ ಬಗ್ಗೆ ಅನುಮಾನ ಕಾಣುತ್ತಿದೆ. ಇದಕ್ಕೆ ಕಾರಣ ಈ ಭಾಗದ ರೈತರಲ್ಲಿ ಹನಿ ನೀರಾವರಿ ವ್ಯವಸ್ಥೆ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೇ ಇರುವುದು. ಇದರ ಜೊತೆಗೆ ಇಸ್ರೇಲ್ ಮಾದರಿ ಇಲ್ಲಿಯ ರೈತರಿಗೆ ಸಂಪೂರ್ಣ ಹೊಸದು. ಅದಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಬೇಕು. ಇಸ್ರೇಲ್ ಮಾದರಿಯ ಹನಿ ನೀರಾವರಿ ವ್ಯವಸ್ಥೆಗೆ ಬೇಕಾಗುವ ವಾತಾವರಣ ನಮ್ಮ ಭಾಗದಲ್ಲಿ ಇಲ್ಲ ಎಂಬುದು ರೈತರ ಅಭಿಪ್ರಾಯ.
ಬೆಳಗಾವಿ ಜಿಲ್ಲೆಯಲ್ಲಿ ಈಗಲೂ ಶೇ.10 ರಷ್ಟು ಹನಿ ನೀರಾವರಿ ಪದ್ಧತಿ ಇಲ್ಲ. ಇಸೆ್ರೇಲ್ ಮಾದರಿ ಎಂದರೆ ಅದು ಸಂಪೂರ್ಣ ಸೆನ್ಸರ್ ವ್ಯವಸ್ಥೆಯ ಹನಿ ನೀರಾವರಿ ಪದ್ಧತಿ. ನಮ್ಮದು ಸಂಪೂರ್ಣ ಒಣಭೂಮಿ. ಇಸ್ರೇಲ್ ಹನಿ ನೀರಾವರಿ ಜಗತ್ತಿನಲ್ಲೇ ಅತ್ಯುನ್ನತವಾದ ತಂತ್ರಜ್ಞಾನದಿಂದ ರೂಪಿಸಲಾಗಿರುವಂಥದು. ಆದರೆ ಅಷ್ಟು ಸುಧಾರಣೆ ನಮ್ಮಲ್ಲಿ ಇಲ್ಲ. ಈ ಬಗ್ಗೆ ಸರಕಾರ ಆಲೋಚನೆ ಮಾಡಬೇಕು. ರೈತರಿಗೆ ಹನಿ ನೀರಾವರಿ ಬಗ್ಗೆ ಸಮಗ್ರ ತಿಳಿವಳಿಕೆ ನೀಡಬೇಕು ಎಂಬುದು ಭಾರತೀಯ ಕೃಷಿಕ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ್ ಅಭಿಪ್ರಾಯ.
ಸಿಎಂ ರಾಜ್ಯದಲ್ಲೇ ಮೊದಲ ಬಾರಿಗೆ ಇಸ್ರೇಲ್ ಮಾದರಿಯ ಹನಿ ನೀರಾವರಿ ಪದ್ಧತಿಯ ನೀರಾವರಿ ಯೋಜನೆಯನ್ನು ಜಿಲ್ಲೆಯಿಂದ ಆರಂಭಿಸುತ್ತಿದ್ದಾರೆ. ಅದೂ ಸಹ ಬೈಲಹೊಂಗಲದಿಂದ ಕಾರ್ಯರೂಪಕ್ಕೆ ತರುತ್ತಿರುವುದು ಹೆಮ್ಮೆಯ ಸಂಗತಿ. ಮಲಪ್ರಭಾ ನದಿಯಿಂದ ದೊಡ್ಡ ಕೆರೆಗಳಲ್ಲಿ ನೀರು ತುಂಬಿಸಿ ಅದರಿಂದ ಸಣ್ಣ ಸಣ್ಣ ಹೊಂಡಗಳಿಗೆ ನೀರು ಎತ್ತಲಾಗುತ್ತದೆ. ಆಲ್ಲಿಂದ ಹೊಲಗಳಿಗೆ ಹನಿ ನೀರಾವರಿ ಮೂಲಕ ನೀರು ಒದಗಿಸುವುದು ಯೋಜನೆಯ ಮುಖ್ಯ ಅಂಶ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ನೀರು ಉಳಿತಾಯವಾಗಲಿದೆ. ಸಾವು ನೋವುಗಳು ಸಹ ತಪ್ಪಲಿವೆ ಎನ್ನುತ್ತಾರೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ.
ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ 80 ಕೋಟಿ ನೀರಾವರಿ ಯೋಜನೆ ಬೈಲಹೊಂಗಲ ಕ್ಷೇತ್ರದ ರೈತರ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ. ಬಜೆಟ್ದಲ್ಲಿ ಹೇಳಿರುವಂತೆ ವಿಳಂಬ ಮಾಡದೇ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕೆ ರೈತರಿಗೆ ಎಲ್ಲ ಮಾಹಿತಿ ನೀಡಿ ಅವರ ಸಹಕಾರ ಪಡೆಯಲಾಗುವುದು.•ಮಹಾಂತೇಶ ಕೌಜಲಗಿ, ಶಾಸಕರು ಕೇಶವ ಆದಿ