Advertisement

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

12:09 PM Apr 15, 2024 | Team Udayavani |

ಕಲಬುರಗಿ: ಹತ್ತು ವರ್ಷ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಗ್ಯಾರಂಟಿ ನೀಡದೆ ಈಗ ಗ್ಯಾರಂಟಿ ಎನ್ನುತ್ತಿದ್ದು, ಇದಕ್ಕೆ ಯಾವುದೇ ವಾರಂಟಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

Advertisement

ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು, ವಿದೇಶದಲ್ಲಿನ ಕಪ್ಪು ಹಣ ತರುವುದು ಸೇರಿದಂತೆ ಇತರ ಗ್ಯಾರಂಟಿಗಳು ಏನಾದವು. ಹೀಗಾಗಿ ಮೋದಿ ಗ್ಯಾರಂಟಿ ಪ್ರಚಾರಕ್ಕೆ ಮಾತ್ರ ಸೀಮಿತ. ಕಾಂಗ್ರೆಸ್ ಗ್ಯಾರಂಟಿಗೆ ವಾರಂಟಿ ಇದೆ.‌ ಇದಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿಗಳೇ ಸಾಕ್ಷಿ. ‌ಅದೇ ರೀತಿ ಎಐಸಿಸಿ ಪ್ರಕಟಿಸಿದ 25 ಗ್ಯಾರಂಟಿಗಳ ಬಗ್ಗೆ ದೇಶದ ಜನತೆಗೆ ವಿಶ್ವಾಸ ಬಂದಿದ್ದರಿಂದ ಅಬ್ ಕಿ ಬಾರ್ ಬಿಜೆಪಿ ಸಂಸತ್ ಸೇ ಬಾಹರ್ ಆಗಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನೇ ಬಿಜೆಪಿ ನಕಲು ಮಾಡಿದ್ದು, ಆದರೆ ಜನರಿಗೆ ಬಿಜೆಪಿ ಗ್ಯಾರಂಟಿ ಬಗ್ಗೆ ವಿಶ್ವಾಸವಿಲ್ಲ. ಕಾಲಕ್ಕೆ ತಕ್ಕಂತೆ ಬರೀ ಹೊಸ ಸ್ಲೋಗನ್ ಸೇರಿಸುತ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಪ್ರಣಾಳಿಕೆ ಅಲ್ಲ ಪಿಎಂ ಫೋಟೋ ಅಲ್ಬಂ: ಲೋಕಸಭಾ ಚುನಾವಣೆಗೆ ಘೋಷಣೆ ಮಾಡಿರುವ ಬಿಜೆಪಿ ಪ್ರಣಾಳಿಕೆಯು ಮೋದಿ‌ ಫೋಟೊ ಅಲ್ಬಂ‌ನಂತಿದೆ, ಯಾವುದೆ ಸ್ಪಷ್ಟತೆ ಇಲ್ಲ.  ಅವರ ಪಿಕ್ ನಿಕ್ ವಿಭಿನ್ನ ಫೋಟೋಗಳು ಬಿಟ್ಟರೆ ಯುವಕರಿಗೆ,‌ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಶ್ರಮಿಕರಿಗೆ, ನಿರ್ಗತಿಕರಿಗೆ ಉಪಯೋಗವಾಗುವಂತ ಯಾವುದೇ ಅಂಶಗಳಿಲ್ಲ ಎಂದು ಟೀಕಿಸಿದರು.

ದುರಂತವೆಂದರೆ ಪ್ರಣಾಳಿಕೆಯಲ್ಲಿ ಕೇಂದ್ರ ಸರ್ಕಾರ ಅಧೀನದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತಾಗಿ ಚಕಾರವೆತ್ತಿಲ್ಲ ಎಂದು ಸಚಿವ ಖರ್ಗೆ ಆಕ್ಷೇಪಿಸಿದರು.

Advertisement

ಯುವಕರ ಬಗ್ಗೆ ಮೋದಿಯ ಗ್ಯಾರಂಟಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಕಾಯಿದೆ ತರಲಾಗುವುದು ಎಂದಿದೆ. ಅವರದೇ ಪಕ್ಷ ಇಲ್ಲಿ ಅಧಿಕಾರದಲ್ಲಿದ್ದಾಗ ಪರೀಕ್ಷೆಗಳಲ್ಲಿ ಅವಾಂತರ ನಡೆದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಪರೀಕ್ಷೆಗಳ ಅಕ್ರಮ ತಡೆಗೆ ಬಿಲ್ ಪಾಸ್ ಮಾಡಿ ಅದನ್ನು ರಾಜ್ಯಪಾಲರ ಸಹಿಗೆ ಕಳಿಸಲಾಗುತ್ತು. ಆದರೆ, ಬಿಲ್ ವಾಪಸ್ ಬಂದಿದೆ ಎಂದರು.

ಕೇಂದ್ರದ ಅಂಕಿ ಅಂಶಗಳ ಪ್ರಕಾರ, ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಕೇಂದ್ರದ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 9.64 ಲಕ್ಷ ಹುದ್ದೆಗಳು ಹಣಕಾಸು ಇಲಾಖೆಯಲ್ಲಿ, 3 ಲಕ್ಷ ಹುದ್ದೆಗಳು ರೇಲ್ವೆ ಇಲಾಖೆಯಲ್ಲಿ, 2.2 ಲಕ್ಷ ಹುದ್ದೆಗಳು ಸೇನೆಯ ಸಿವಿಲ್ ವಿಭಾಗದಲ್ಲಿ, 1.20 ಲಕ್ಷ ಹುದ್ದೆಗಳು ಅಂಚೆ ಇಲಾಖೆಯಲಿ, 74,000 ಹುದ್ದೆಗಳು ಕಂದಾಯ ಇಲಾಖೆಯಲ್ಲಿ ಖಾಲಿ ಇವೆ. ಈ ಎಲ್ಲ ಹುದ್ದೆ ತುಂಬಲು ಯಾವ ಕ್ರಮ ಕೈಗೊಳ್ಳಲಾಗುವುದು ಎನ್ನುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಇಲ್ಲ. ICO ವರದಿ ಪ್ರಕಾರ 83% ಯುವಕರು ನಿರುದ್ಯೋಗಿಗಳಾಗಿದ್ದಾರೆ. ಲೋಕನೀತಿ ಸರ್ವೆ ಪ್ರಕಾರ, 79% ಯುವಕರಿಗೆ ಉದ್ಯೋಗ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಟೀಕಿಸಿದರು.

ಬಿಜೆಪಿಯವರು ಸ್ಕಿಲ್ ಇಂಡಿಯಾ ಯೋಜನೆಯಡಿಯಲ್ಲಿ 2022 ರ ಒಳಗಾಗಿ 40 ಕೋಟಿ ಯುವಕರಿಗೆ ತರಬೇತಿ ನೀಡುವುದಾಗಿ ಹೇಳಿದ್ದು ಈ ಗುರಿಯಲ್ಲಿ ಇದೂವರೆಗೆ ಕೇವಲ 3.51% (1.40 ಕೋಟಿ) ಜನರಿಗೆ ತರಬೇತಿ ನೀಡಿದ್ದಾರೆ ಹೊರತು ಉದ್ಯೋಗ ನೀಡಿಲ್ಲ. ಈ 3.51% ರಲ್ಲಿ 80% ಯುವಕರಿಗೆ ಉದ್ಯೋಗ ಸಿಕ್ಕಿಲ್ಲ 20% ಯುವಕರು ಈ ಯೋಜನೆ ಉಪಯೋಗ ಇಲ್ಲ ಎಂದು ಬಿಟ್ಟು ಹೋಗಿದ್ದಾರೆ ಎಂದು ಅಂಕಿ ಅಂಶ ನೀಡಿ ವಿವರಿಸಿದರು.

ಕಳೆದ ಸಲ ಬಂದಾಗ ಮೈಸೂರು, ಹಂಪಿ ಅಂಜನಾದ್ರಿ ಅಭಿವೃದ್ದಿ ಮಾಡುವುದಾಗಿ ಮೋದಿ ಹೇಳಿದ್ದರು ಅವೆಲ್ಲ ಏನಾಯ್ತು?. ಈಗ ಮತ್ತೆ ನಿನ್ನೆ ಅದೇ ಮಾತನ್ನೇ ಹೇಳಿದ್ದಾರೆ ಎಂದ ಖರ್ಗೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿದ್ದ ಬರ ಪರಿಹಾರ, ತೆರಿಗೆ ಪರಿಹಾರ ಕುರಿತು ಮಾತೇ ಆಡಿಲ್ಲ. ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಪಕ್ಕ ಕೂಡಿಸಿಕೊಂಡು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಚಾರ ಬಗ್ಗೆ ಮಾತನಾಡುತ್ತಾರೆ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂದು ತಾನೆ ಅವರನ್ನು ಸಿಎಂ ಸ್ಥಾನದಿಂದ‌ ಇಳಿಸಿದ್ದು? ಯಡಿಯೂರಪ್ಪ ವಿಜಯೇಂದ್ರ ಅವರದ್ದು ಕುಟುಂಬ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದರು.

ಮಹಿಳೆಯರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ ಶಕ್ತಿ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ನ‌ ಕುಮಾರಸ್ವಾಮಿ‌ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಈ ಬಗ್ಗೆ ಮೋದಿ, ವಿಜಯೇಂದ್ರ, ಅಶೋಕ ಸ್ಪಷ್ಟಿಕರಣ‌ ನೀಡಿಲಿ. ” ಕುಮಾರಸ್ವಾಮಿ ವೆಸ್ಟ ಎಂಡ್ ನಲ್ಲಿ ಹಾಗೂ ತೋಟದ ಮನೆಯಲ್ಲಿ ಇದ್ದರೆ ಜನರ ಕಷ್ಟ ಅರ್ಥವಾಗುವುದಿಲ್ಲ. ಹೊರಗಡೆ ಬಂದು ನೋಡಲಿ” ಎಂದು ತಿರುಗೇಟು ನೀಡಿದರು.

ಯುಪಿಎ ಸರ್ಕಾರ ಇದ್ದಾಗ 34% ಮಹಿಳೆಯರು ಉದ್ಯೋಗ ದಲ್ಲಿ ತೊಡಗಿಸಿಕೊಂಡಿದ್ದರೆ, ಈಗ ಕೇವಲ 24% ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅದಕ್ಕಾಗಿಯೇ, ರಾಜ್ಯದಲಿ ಇದೂವರೆಗೆ 4000 ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುರಿತು‌ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ನೀಡಿರುವ ಅವಹೇಳನಕಾರಿ ಹೇಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಇನ್ನೂ ಚಾತುರ್ವರ್ಣದಲ್ಲಿದ್ದಾರೆ. ಮಹಿಳೆಯರು ಮುಖ್ಯವಾಹಿನಿಗೆ ಬರುವುದು ಅವರಿಗೆ ಇಷ್ಟವಿಲ್ಲ ಎಂದರು.‌

ಕರ್ನಾಟಕದಿಂದ ನೂರು ಕೋಟಿ‌ಹಣ ದೇಶದ‌ ಚುನಾವಣೆಗೆ ಬಳಕೆಯಾಗುತ್ತಿದೆ ಎಂದು ಪ್ರಧಾನಿ‌ ಹೇಳಿರುವುದು ಹಾಸ್ಯಾಸ್ಪದ. ” ಕೇಂದ್ರದ ತನಿಖಾ‌ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಅವರಿಂದ ತನಿಖೆ‌ ನಡೆಸಲಿ ” ಎಂದು ಸಚಿವ ಖರ್ಗೆ ಸವಾಲು ಹಾಕಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಪಕ್ಷ ಸೇರ್ಪಡೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಗುತ್ತೇದಾರ ಅವರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಬಂದಿದ್ದಾರೆ. ಆದರೆ, ಅಂತಹ ಯಾವುದೇ ಪ್ರಸ್ತಾವನೆ ಸದ್ಯ ಪಕ್ಷದ ಮುಂದಿಲ್ಲ. ಆದರೂ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಕುಟುಂಬ ಬದ್ಧವಾಗಿರುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ನುಖಂಡರಾ್ ರಾಜಗೋಪಾಲರೆಡ್ಡಿ, ಡಾ ಕಿರಣ್ ದೇಶಮುಖ್, ಪ್ರವೀಣ್ ಹರವಾಳ, ಶಿವು ಹೊನಗುಂಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next