ಬೆಳ್ತಂಗಡಿ: ಮಂಗಳೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಮುಖ ಸಂಪರ್ಕವಾದ ನಿಡಿಗಲ್ ನೂತನ ಸೇತುವೆಯು ಉದ್ಘಾಟನೆಗೊಂಡು ವರ್ಷ ಪೂರ್ಣಗೊಳ್ಳುವ ಮುನ್ನ ಮೇಲ್ಪದರದಲ್ಲಿ ಹೊಂಡ ನಿರ್ಮಾಣವಾಗಿ ತೇಪೆ ಕಾರ್ಯ ನಡೆಸಿದರೂ ಇದೀಗ ಮೇಲ್ಪದರಕ್ಕೆ ಮತ್ತೆ ಹಾನಿಯಾಗಿರುವುದು ಕಂಡುಬಂದಿದೆ.
15 ಕೋಟಿ ರೂ. ವೆಚ್ಚದ ಸೇತುವೆ
2020 ನವೆಂಬರ್‌ನಲ್ಲಿ ಉದ್ಘಾಟನೆ ಗೊಂಡ ಬಳಿಕ 15 ಕೋಟಿ ರೂ. ವೆಚ್ಚದ ಸೇತುವೆಯ ಮೇಲ್ಪದರದ ಅಲ್ಲಲ್ಲಿ ಹಲವು ಬಿರುಕುಗಳು ಕಂಡುಬಂದಿದ್ದವು. ಪ್ರತಿಬಾರಿ ಬಿರುಕುಬಿಟ್ಟ ಸ್ಥಳಗಳಿಗೆ ಮೈಕ್ರೋ ಕಾಂಕ್ರೀಟ್ ಹಾಕಲಾಗುತ್ತಿತ್ತು. ಇದೀಗ ಈ ಹಿಂದೆ ಮೈಕ್ರೋ ಕಾಂಕ್ರೀಟ್ ಹಾಕಿದ ಸ್ಥಳದ ಸಮೀಪವೇ ಹೊಂಡ ನಿರ್ಮಾಣಗೊಂಡಿದೆ.
ಅಧಿಕ ವಾಹನ ಓಡಾಟ
ಚಿಕ್ಕಮಗಳೂರು, ಬೆಂಗಳೂರು, ಸಂಪರ್ಕಿಸುವ ಪ್ರಮುಖ ರಸ್ತೆಯಾಗಿ ರುವುದರಿಂದ ವಾಹನ ಓಡಾಟ ಅಧಿಕವಾಗಿರುತ್ತದೆ. ಆದರೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸದ ಬಳಿಕ ಭಾರೀ ಗಾತ್ರದ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದ ಕಾರಣ ಕೆಎಸ್‌ಆರ್‌ಟಿಸಿ ಬಸ್, ಲಾರಿ ಹಾಗೂ ಇತರ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಕೋವಿಡ್‌ನ ಎರಡು ವರ್ಷಗಳಲ್ಲಿ ವಾಹನಗಳ ಓಡಾಟವೂ ವಿರಳವೇ ಆಗಿತ್ತು. ಆದರೂ ಕಳೆದ ವರ್ಷದಿಂದ ಹಲವಾರು ಬಾರಿ ಸೇತುವೆಯ ಮೇಲ್ಪದರಕ್ಕೆ ಹಾನಿ ಉಂಟಾಗುತ್ತಿದೆ.
ಸೇತುವೆಯ ಮೇಲ್ಪದರ ಆಗಾಗ ಹಾನಿಗೊಳಗಾಗುವ ಕಾರಣ ಇದನ್ನು ತಪ್ಪಿಸಲು ಈ ಬಾರಿ ಬೇಸಗೆಯಲ್ಲಿ ಗುಣಮಟ್ಟದ ಡಾಮರೀಕರಣವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿತ್ತು. ಆದರೆ ಬೇಸಗೆ ಕಳೆದು ಇದೀಗ ಮಳೆಗಾಲದ ಆರಂಭದ ದಿನಗಳು ಸಮೀಪಿಸಿದರೂ ಈ ಕಾಮಗಾರಿ ನಡೆದಿಲ್ಲ. ಇದರಿಂದ ಮತ್ತಷ್ಟು ಕಾಂಕ್ರೀಟ್ ಮೇಲ್ಪದರಗಳು ಪುಡಿಪುಡಿಯಾಗಿ ಹೊರ ಬಂದು ಹೊಂಡಗಳು ಸೃಷ್ಟಿಯಾಗುತ್ತಿವೆ.
ಕರೆಗೆ ಸ್ಪಂದಿಸುತ್ತಿಲ್ಲ
ರಾ ಹೆ. ಇಲಾಖೆ ಎಇಇ ಮಾಹಿತಿ ಪಡೆಯಲು ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.