Advertisement

ಕೋವಿಡ್ ಎಫೆಕ್ಟ್ ನಿಂದಾಗಿ ಪ್ರವಾಸಿಗರಿಲ್ಲದೇ ಸೊರಗುತ್ತಿದೆ ಕಾಪು ಬೀಚ್

04:27 PM Jun 15, 2020 | keerthan |

ಕಾಪು: ಕರಾವಳಿಯ ಆಕರ್ಷಣೀಯ ಪ್ರವಾಸಿ ತಾಣಗಳಲ್ಲೊಂದಾಗಿರುವ ಕಾಪು ಬೀಚ್ ಕೋವಿಡ್-19 ಎಫೆಕ್ಟ್ ನಿಂದಾಗಿ ಬಸವಳಿದು ಹೋಗಿದ್ದು, ಬೀಚ್ ಗೆ ಬರುವ ಪ್ರವಾಸಿಗರನ್ನೇ ನಂಬಿ ವ್ಯವಹಾರವನ್ನು ನಡೆಸುತ್ತಿರುವ ಹತ್ತಾರು ಕುಟುಂಬಗಳು ಕಂಗೆಟ್ಟು ಹೋಗಿವೆ.

Advertisement

ರಜಾ ದಿನ, ರಜಾ ಕಾಲ, ಹಬ್ಬ ಹರಿದಿನಗಳು, ವೀಕೆಂಡ್ ಬಂತೆಂದರೆ ಸಾಕು ಕಾಪು ಲೈಟ್‌ ಹೌಸ್ ಮತ್ತು ಬೀಚ್ ನ ಪ್ರವಾಸಿ ತಾಣದಲ್ಲಿ ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯರು ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ. ಆದರೆ ಈ ಬಾರಿ ಕೋವಿಡ್ ಮತ್ತು ಲಾಕ್ ಡೌನ್ ನ ಕಾರಣದಿಂದಾಗಿ ಪ್ರವಾಸಿಗರಿಲ್ಲದೇ ಕಾಪು ಬೀಚ್ ಸಂಪೂರ್ಣ ಸ್ತಬ್ಧವಾಗಿದೆ.

ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಕಾಪು ಬೀಚ್ ಕರ್ನಾಟಕದಲ್ಲೇ ಹೆಚ್ಚು ಪ್ರೇಕ್ಷಣೀಯವಾದ ಬೀಚ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂರಾರು ಸಿನಿಮಾಗಳಿಗೆ ಇಲ್ಲಿ ರೂಪ ತುಂಬಲಾಗಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಸ್ವಚ್ಚ ಮತ್ತು ಶುದ್ದ ಬಿಳಿ ಮರಳಿನಿಂದ ಕಂಗೊಳಿಸುವ ಇಲ್ಲಿನ ಸಮುದ್ರ ತೀರದಲ್ಲಿ ಸಮುದ್ರಮಟ್ಟದಿಂದ 27 ಮೀ ಎತ್ತರದ ಬಂಡೆಯೊಂದರ ಮೇಲೆ ಬ್ರಿಟಿಷರ ಕಾಲದಲ್ಲಿ (1901) ನಿರ್ಮಿಸಲ್ಪಟ್ಟ ದೀಪಸ್ಥಂಭವು ಕಾಪು ಬೀಚ್ ಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ದಿಯನ್ನು ತಂದೊದಗಿಸಿದೆ‌. ಸಮುದ್ರ ತೀರದ ಬಂಡೆಯ ಮೇಲೆ ನಿಂತಿರುವ ದೀಪಸ್ಥಂಭವನ್ನು ವೀಕ್ಷಿಸಲೆಂದು ಪ್ರತೀ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ಮಳೆಗಾಲದ ಸಹಜ ಪ್ರಕ್ರಿಯೆ ಎಂಬಂತೆ ಸಾಗರವು ಭೋರ್ಗರೆಯುತ್ತಿದ್ದರೂ ಕೋವಿಡ್-19 ಕಾರಣದಿಂದ ಪ್ರವಾಸಿಗರ ಭೇಟಿಯಿಲ್ಲದೇ ಬಿಕೋ ಎನ್ನುತ್ತಿದೆ. ಬೀಚ್ ನುದ್ದಕ್ಕೂ ಮೌನ ಮನೆ ಮಾಡಿದೆ.

Advertisement

ಕೋವಿಡ್ ಕಾರಣದ ಲಾಕ್ ಡೌನ್ ನಿಂದಾಗಿ ದಡ ಸೇರಿರುವ ಪ್ರವಾಸಿ ಬೋಟುಗಳು ದಡದಲ್ಲೇ ಲಂಗರು ಹಾಕಿ ಬಿಟ್ಟಿವೆ. ಲಾಕ್ ಡೌನ್ ಪರಿಣಾಮ ಮುಚ್ಚಲ್ಪಟ್ಟಿರುವ ಕಾಪು ಬೀಚ್ ಪರಿಸರದಲ್ಲಿರುವ ಅಂಗಡಿಗಳು ಮುಚ್ಚಿ ಮೂರು ತಿಂಗಳುಗಳು ಕಳೆದರೂ ಇನ್ನೂ ತೆರೆಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಅಂಗಡಿ ವ್ಯಾಪಾರಿಗಳು ವ್ಯಾಪಾರ ಆರಂಭಿಸಲು ಪ್ರವಾಸಿಗರ ದಾರಿ ನೋಡುತ್ತಿದ್ದಾರೆ.

ಒಮ್ಮೆ ಮುಚ್ಚಿದ ಬೀಚ್ ಮತ್ತು ಇಲ್ಲಿನ ಪ್ರವಾಸೋದ್ಯಮವು ಮತ್ತೆ ಪ್ರಸಿದ್ದಿ ಪಡೆಯಬೇಕಾದರೆ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಪ್ರವಾಸಿಗರನ್ನು ಸೆಳೆಯುವ ಉತ್ತೇಜನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾದ ಅಗತ್ಯತೆಯಿದೆ.

ಕಾಪು ಬೀಚ್ ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತಾಗ ಬೇಕಾದರೆ ಜನರಲ್ಲಿರುವ ಸೋಂಕು ಭಯ ದೂರವಾಗಿ, ಕೋವಿಡ್ ಕುರಿತಾದ ಜಾಗೃತಿ ಮೂಡಬೇಕಿದೆ. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳು ನಡೆಯಬೇಕಿವೆ ಎನ್ನುತ್ತಾರೆ ಬೀಚ್ ಬದಿ ವ್ಯಾಪಾರಿ ಚಂದ್ರಶೇಖರ ಕೋಟ್ಯಾನ್ ಮತ್ತು ಲೈಫ್ ಗಾರ್ಡ್ ರಮೇಶ್ ಕೋಟ್ಯಾನ್.

Advertisement

Udayavani is now on Telegram. Click here to join our channel and stay updated with the latest news.

Next