ಬೆಂಗಳೂರು: ಪಕ್ಷದ ಉಳಿವಿನ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸಖ್ಯ ಬೇಡ ಎಂದು ನಿರ್ಧರಿಸಿರುವ ಜೆಡಿಎಸ್, ಬೆಂಗಳೂರಿನಲ್ಲಿ ಜುಲೈ 17, 18ರಂದು ನಡೆಯಲಿರುವ ಮಹಾ ಘಟಬಂಧನ ಸಭೆಗೆ ಹಾಜರಾಗದೇ ಇರಲು ನಿರ್ಧರಿಸಿದೆ. ಆದರೆ 18ರಂದು ದಿಲ್ಲಿಯಲ್ಲಿ ನಡೆಯುವ ಎನ್‌ಡಿಎ ಮೈತ್ರಿಕೂಟದ ಸಭೆಗೆ ಹಾಜರಾಗುವ ಸಾಧ್ಯತೆ ದಟ್ಟವಾಗಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಶನಿವಾರ ಸಂಜೆ ದಿಲ್ಲಿಗೆ ತೆರಳುವ ಬಗ್ಗೆ ಈಗಾಗಲೇ ದಿನಾಂಕ ನಿಗದಿಯಾಗಿತ್ತು. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಚರ್ಚೆ ನಡೆಸಿದ ಬಳಿಕ ಕುಮಾರಸ್ವಾಮಿ ತಮ್ಮ ನಡೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಿ ಎಂದು ಬಿಜೆಪಿಯಿಂದ ಅಧಿಕೃತ ಆಹ್ವಾನ ಬಂದರೆ ಮಾತ್ರ ದಿಲ್ಲಿಗೆ ಹೋಗು ಎಂದು ದೇವೇಗೌಡರು ನೀಡಿದ ಸಲಹೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ದಿಲ್ಲಿ ಪ್ರವಾಸ ರದ್ದಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಬಿಜೆಪಿಯೇತರ ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದ ಜೆಡಿಎಸ್ ಎನ್‌ಡಿಎ ಮೈತ್ರಿಕೂಟದಿಂದ ದೂರವುಳಿದಿತ್ತು. ಆದರೆ ಈ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪರಿಸ್ಥಿತಿ ಬದಲಾಗಿದ್ದು, ಕಾಂಗ್ರೆಸ್ ಇರುವ ಮೈತ್ರಿಕೂಟದಲ್ಲಿ ಯಾವುದೇ ಕಾರಣಕ್ಕೂ ಗುರುತಿಸಿಕೊಳ್ಳಬಾರದೆಂದು ಜೆಡಿಎಸ್ ನಿರ್ಧರಿಸಿದೆ. ಹೀಗಾಗಿ ಮಮತಾ ಬ್ಯಾನರ್ಜಿ, ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮೊದಲಾದವರ ಸಾಂಗತ್ಯ ಮಹಾಘಟಬಂಧನಕ್ಕೆ ಇದ್ದರೂ ಜಾತ್ಯತೀತ ಜನತಾ ದಳ ದೂರವೇ ಉಳಿಯಲಿದೆ.
ಮಹಾಘಟಬಂಧನ ಸಭೆಗೆ ಹಾಜರಾಗುವಂತೆ ನಮಗೆ ಇದುವರೆಗೆ ಆಹ್ವಾನವೇ ಬಂದಿಲ್ಲ. ಹೀಗಾಗಿ ಹೋಗುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ತಮ್ಮ ಆಪ್ತರ ಜತೆ ಹೇಳಿಕೊಂಡಿದ್ದಾರೆ. ಆದರೆ ಎನ್‌ಡಿಎ ಮೈತ್ರಿಕೂಟದ ಸಭೆಯ ಅಧಿಕೃತ ಆಹ್ವಾನಕ್ಕೆ ಮಾತ್ರ ಜೆಡಿಎಸ್ ಇದಿರು ನೋಡುತ್ತಿದೆ. ಆದಾಗಿಯೂ ಮೈತ್ರಿ ಪ್ರಸ್ತಾಪದಿಂದ ಜೆಡಿಎಸ್ ಬಲವೃದ್ಧಿಗೆ ಅನುಕೂಲವಾಗುವುದಿದ್ದರೆ ಮಾತ್ರ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.
ಬಿಜೆಪಿಯಿಂದ ಅಪಸ್ವರ : ಆದರೆ ರಾಜ್ಯ ಬಿಜೆಪಿ ನಾಯಕರು ಮಾತ್ರ ಮೈತ್ರಿ ವಿಚಾರದಲ್ಲಿ ತುಸು ಭಿನ್ನ ನಿಲುವು ಹೊಂದಿದ್ದಾರೆ. ಲೋಕಸಭಾ ದೃಷ್ಟಿಯಿಂದ ಜೆಡಿಎಸ್ ಜತೆಗೆ ಹೊಂದಾಣಿಕೆ ಅನುಕೂಲ ಸೃಷ್ಟಿಸಿದರೂ ರಾಜ್ಯ ರಾಜಕಾರಣದ ದೃಷ್ಟಿಯಿಂದ ಭವಿಷ್ಯದಲ್ಲಿ ಅದು ಬಿಜೆಪಿಗೆ ಅನನುಕೂಲ ಸೃಷ್ಟಿಸಲಿದೆ. ಈಗ ಸೋತು ಸೊರಗಿರುವ ಬಿಜೆಪಿಗೆ ಎನ್‌ಡಿಎ ಮೈತ್ರಿಯಿಂದ ಮುಂದಿನ ಐದು ವರ್ಷದಲ್ಲಿ ಬಲ ಲಭಿಸುತ್ತದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅತಂತ್ರ ಸೃಷ್ಟಿಯಾದರೆ ಆಗ ಜೆಡಿಎಸ್ ಬಣ್ಣ ಬದಲಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ರಾಜಕೀಯ “ಅನಿವಾರ್ಯತೆ’ಯಲ್ಲಿ ಸಿಲುಕಿರುವ ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗುವುದೇ ಸೂಕ್ತ ಎಂಬ ಪ್ರಸ್ತಾಪ ಮುಂದಿಡುವಂತೆ ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಕೊಡಬೇಕೆಂಬ ಚರ್ಚೆ ನಡೆಯುತ್ತಿದೆ.
ಆದರೆ ಇಂಥ ವಿಚಾರಗಳ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸುವ ಛಾತಿ ಇರುವ ನಾಯಕರು ಈಗ ರಾಜ್ಯ ಬಿಜೆಪಿಯಲ್ಲಿ ಇಲ್ಲ. ಮೈತ್ರಿ ವಿಚಾರಕ್ಕೆ ಸಂಬಂಧಪಟ್ಟಂತೆ ವರಿಷ್ಠರು ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಅಭಿಪ್ರಾಯಪಡೆಯುವ ಸಾಧ್ಯತೆ ಇಲ್ಲ. ಹೀಗಾಗಿ ಮೈತ್ರಿ ಅಥವಾ ವಿಲೀನ ಸಂಪೂರ್ಣವಾಗಿ ಕುಮಾರಸ್ವಾಮಿ ಹಾಗೂ ಬಿಜೆಪಿ ದಿಲ್ಲಿ ನಾಯಕರ ಮಧ್ಯೆ ನಡೆಯುವ ಕೊಡುಕೊಳ್ಳುವಿಕೆಯಾಗಲಿದೆ.
ಮಂಡ್ಯ, ಬೆಂ.ಗ್ರಾಮಾಂತರಕ್ಕೆ ಪಟ್ಟು
ಒಂದೊಮ್ಮೆ ಮೈತ್ರಿ ಏರ್ಪಟ್ಟರೆ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಅಧಿಕವಾಗಿದೆ. ಹಲವು ಕಾರಣಗಳಿಂದ ಈ ಎರಡು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಹಠ ಕುಮಾರಸ್ವಾಮಿ ಅವರನ್ನು ಆವರಿಸಿದೆ.