Advertisement

ತೆರಿಗೆ ವಿನಾಯಿತಿ ಅವಧಿ ವಿಸ್ತರಣೆ ಇಲ್ಲ

06:30 AM May 05, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿರುವ ಬಿಬಿಎಂಪಿ, ಯಾವುದೇ ಕಾರಣಕ್ಕೂ ತೆರಿಗೆ ವಿನಾಯಿತಿ ಅವಧಿ ಮುಂದುವರಿಸದಿರಲು ತೀರ್ಮಾನಿಸಿದೆ.

Advertisement

ತೆರಿಗೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ಶೇ.5ರಷ್ಟು ವಿನಾಯಿತಿ ನೀಡಲಾಗುತ್ತದೆ. ಆದರೆ, ಹಿಂದೆ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಗೊಂದಲಗಳು ಉಂಟಾಗಿದ್ದರಿಂದ ಮೇ ತಿಂಗಳಲ್ಲೂ ವಿನಾಯಿತಿ ನೀಡಲಾಗಿತ್ತು. ಅದೇ ರೀತಿ ಈ ಬಾರಿಯೂ ಮೇ ತಿಂಗಳಲ್ಲಿ ವಿನಾಯಿತಿ ದೊರೆಯಬಹುದು ಎಂದು ಆಸ್ತಿ ಮಾಲೀಕರು ಭಾವಿಸಿದ್ದರು.

ಅದಕ್ಕೆ ಪೂರಕವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ಸಂಜೀವ್‌ ಕುಮಾರ್‌, ಆಸ್ತಿ ತೆರಿಗೆ ವಿನಾಯಿತಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸುತ್ತೇವೆ ಎಂದಿದ್ದರಿಂದ ಅವಧಿ ವಿಸ್ತರಣೆಯಾಗಬಹುದು ಎನ್ನಲಾಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಕಂದಾಯ ವಿಭಾಗದ ಅಧಿಕಾರಿಗಳು, ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸಿದವರಿಗೆ ಶೇ.5ರಷ್ಟು ವಿನಾಯಿತಿ ನೀಡಲಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ವಿನಾಯಿತಿ ಅವಧಿ ವಿಸ್ತರಿಸುವುದಿಲ್ಲ. ಜತೆಗೆ ವಿಸ್ತರಣೆ ಕುರಿತಂತೆ ಪಾಲಿಕೆ ಮುಂದೆ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಯಾವುದೇ ಆಡಳಿತಾತ್ಮಕ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ತೆರಿಗೆ ವಿನಾಯಿತಿ ಅವಧಿ ಮುಂದುವರಿಸಲು ಕೌನ್ಸಿಲ್‌ ಸಭೆಯ ಅನುಮೋದನೆ ಅಗತ್ಯ. ಪರಿಣಾಮ ಯಾವುದೇ ಕಾರಣಕ್ಕೂ ವಿನಾಯಿತಿ ಅವಧಿ ಮುಂದುವರಿಯುವುದಿಲ್ಲ ಎನ್ನಲಾಗಿದೆ.

Advertisement

ಹಿಂದೆ ಏಕೆ ವಿಸ್ತರಿಸಲಾಗಿತ್ತು?: ಪಾಲಿಕೆಯ ವ್ಯಾಪ್ತಿಯಲ್ಲಿ 2016ರಲ್ಲಿ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ಗೊಳಿಸಲಾಗಿತ್ತು. ಈ ವೇಳೆ ಆನ್‌ಲೈನ್‌ ತೆರಿಗೆ ಪಾವತಿಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿ ಆಸ್ತಿಮಾಲೀಕರು ತೊಂದರೆ ಅನುಭವಿಸಿದ್ದರು. ಆ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲೂ ಶೇ.5ರಷ್ಟು ವಿನಾಯಿತಿ ನೀಡಲಾಗಿತ್ತು.

ವಿನಾಯಿತಿ ನೀಡಿದರೆ ನಷ್ಟ: ತೆರಿಗೆ ಪಾವತಿದಾರರಿಗೆ ಎರಡು ತಿಂಗಳು ಶೇ.5ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡುವುದರಿಂದ ಪಾಲಿಕೆಯ ಬೊಕ್ಕಸಕ್ಕೆ ನಷ್ಟವಾಗಲಿದೆ. ಅದರಂತೆ ಈ ಸಾಲಿನ ಏಪ್ರಿಲ್‌ 1ರಿಂದ ಶುಕ್ರವಾರದವರೆಗೆ 1200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಆಸ್ತಿ ಮಾಲೀಕರಿಗೆ ಸುಮಾರು 60 ಕೋಟಿ ರೂ. ವಿನಾಯಿತಿ ನೀಡಲಾಗಿದೆ. ಇದೀಗ ಮತ್ತೆ ವಿನಾಯಿತಿ ಅವಧಿ ವಿಸ್ತರಿಸಿದರೆ ಮತ್ತಷ್ಟು ನಷ್ಟವಾಗುತ್ತದೆ.

1200 ಕೋಟಿ ರೂ. ತೆರಿಗೆ ಸಂಗ್ರಹ: 2019ರ ಏ.1ರಿಂದ ಶುಕ್ರವಾರದವರೆಗೆ 1200 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದ ಪರಿಣಾಮ ಮೊದಲ ಮೂರು ವಾರಗಳಲ್ಲಿ ಆಸ್ತಿ ಮಾಲೀಕರು ತೆರಿಗೆ ಪಾವತಿಸಲು ನಿರಾಸಕ್ತಿ ತೋರಿಸಿದ್ದರು. ಆದರೆ, ಪಾಲಿಕೆಯು ಯಾವುದೇ ಕಾರಣಕ್ಕೂ ಶೇ.5ರ ವಿನಾಯಿತಿ ವಿಸ್ತರಿಸುವುದಿಲ್ಲ ಎಂದು ಘೋಷಿಸಿದರಿಂದ ಕೊನೆಯ ವಾರದಲ್ಲಿ ಬರೋಬ್ಬರಿ 800 ಕೋಟಿ ರೂ. ಆಸ್ತಿ ತೆರಿಗೆ ಪಾವತಿಯಾಗಿದೆ.

ಆರ್ಥಿಕ ವರ್ಷದ ಆರಂಭದ ಮೊದಲ ತಿಂಗಳು ಮಾತ್ರ ಶೇ.5ರಷ್ಟು ತೆರಿಗೆ ವಿನಾಯಿತಿ ನೀಡಲು ಅವಕಾಶವಿದೆ. ಅವಧಿ ವಿಸ್ತರಿಸಲು ಕೌನ್ಸಿಲ್‌ ಅನುಮತಿ ಬೇಕು. ಜತೆಗೆ ಎರಡು ತಿಂಗಳು ವಿನಾಯಿತಿ ನೀಡಿದರೆ ಪಾಲಿಕೆಗೆ ನಷ್ಟವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವಧಿ ವಿಸ್ತರಿಸುವುದಿಲ್ಲ.
-ವೆಂಕಟಾಚಲಪತಿ, ಜಂಟಿ ಆಯುಕ್ತ (ಕಂದಾಯ)

Advertisement

Udayavani is now on Telegram. Click here to join our channel and stay updated with the latest news.

Next