Advertisement
ಇದಕ್ಕೂ ಮೊದಲು ಎನ್.ಆರ್.ಸಿ.ಯನ್ನು ರಾಷ್ಟ್ರಾದ್ಯಂತ ಜಾರಿಗೊಳಿಸಿಯೇ ಸಿದ್ಧ ಎಂದು ಹೇಳುತ್ತಿದ್ದ ಅಮಿತ್ ಶಾ ಅವರು ಇಂದು ತನ್ನ ಹೇಳಿಕೆಯನ್ನು ಬದಲಿಸಿದ್ದಾರೆ. ಎನ್.ಆರ್.ಸಿ. ಜಾರಿ ಕುರಿತಾಗಿ ಸದ್ಯಕ್ಕೆ ಯಾವುದೇ ಚರ್ಚೆಯಾಗಿಲ್ಲದಿರುವ ಕಾರಣದಿಂದ ಈ ಕುರಿತಾಗಿ ಸದ್ಯಕ್ಕೆ ಮಾತುಕತೆಗಳನ್ನು ನಡೆಸುವುದು ಸಮಂಜಸವಲ್ಲ ಎಂದು ಅವರು ಎ.ಎನ್.ಐ. ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆದಿತ್ಯವಾರದಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಧನ್ಯವಾದ ಸಮಾವೇಶದಲ್ಲಿ ಮಾತನಾಡುತ್ತಾ ಎನ್.ಆರ್.ಸಿ. ಹಾಗೂ ಡಿಟೆನ್ಷನ್ ಕ್ಯಾಂಪ್ ಗಳ ಕುರಿತಾಗಿ ಪ್ರತಿಪಕ್ಷಗಳು ದೇಶದ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದವರಲ್ಲಿ ಅನಗತ್ಯ ಭೀತಿಯನ್ನು ಹುಟ್ಟುಹಾಕುತ್ತಿವೆ ಎಂದು ಕಿಡಿ ಕಾರಿದ್ದರು. ಮಾತ್ರವಲ್ಲದೇ ಸಿಎಎ ಮತ್ತು ಎನ್.ಆರ್.ಸಿ.ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಪ್ರಧಾನಿ ಅವರು ಈ ಸಮಾವೇಶದಲ್ಲಿ ಹೇಳಿದ್ದರು. ಪ್ರಧಾನಿ ಅವರ ಈ ಹೇಳಿಕೆಗೆ ಪ್ರತಿಪಕ್ಷಗಳು ಆಕ್ಷೇಪವನ್ನು ವ್ಯಕ್ತಪಡಿಸಿದ್ದವು. ಒಂದು ಕಡೆಯಲ್ಲಿ ಗೃಹಸಚಿವ ಅಮಿತ್ ಶಾ ಅವರು ದೇಶಾದ್ಯಂತ ಎನ್.ಆರ್.ಸಿ.ಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ತಮ್ಮ ಎಲ್ಲಾ ಭಾಷಣಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಹೇಳಿಕೊಂಡು ಬರುತ್ತಿದ್ದಾರೆ. ಮತ್ತು ಶಾ ಅವರು ಸಂಸತ್ತಿನಲ್ಲೂ ಈ ಕುರಿತು ಪ್ರಸ್ತಾಪಿಸಿದ್ದರು ಎಂದು ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.
Related Articles
Advertisement
ಇನ್ನು ನಾಗರಿಕರ ರಾಷ್ಟ್ರೀಯ ನೋಂದಣಿಗೂ (NRC), ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೂ (NPR) ಯಾವುದೇ ಸಂಬಂಧವಿಲ್ಲ ಎಂಬುದಾಗಿ ಅಮಿತ್ ಶಾ ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. 2020ರಲ್ಲಿ ಎನ್.ಪಿ.ಆರ್. ನಡೆಸುವುದಾಗಿ ಕೇಂದ್ರ ಸರಕಾರ ಇಂದು ಘೋಷಿಸಿದೆ.