Advertisement

ಅತೀರಾ ಭತ್ತಕ್ಕೆ ಬೆಂಬಲ ಬೆಲೆಯಿಲ್ಲ: ರೈತ ಕಂಗಾಲು

11:54 AM Dec 26, 2018 | Team Udayavani |

ಮಡಿಕೇರಿ: ರಾಜ್ಯ ಸರಕಾರ 1750 ರೂ. ಬೆಂಬಲ ಬೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ರೈತರಿಂದ ಭತ್ತ ಖರೀದಿಸಲು ಮುಂದಾಗಿದೆ. ಆದರೆ ಅತೀರಾ ಎಂಬ ಕೆಂಪು ಅಕ್ಕಿಯ ಭತ್ತವನ್ನು ಬೆಂಬಲ ಬೆಲೆಯಿಂದ ಹೊರಗಿಟ್ಟಿರುವುದು ಅತೀರಾ ಭತ್ತ ಬೆಳೆದಿರುವ ರೈತರನ್ನು ಕಂಗಾಲಾಗಿಸಿದೆ. 

Advertisement

ಕೊಡಗಿನ ವಿರಾಜಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ರೈತರು ಅತೀರಾ ಭತ್ತದ ಬೆಳೆ ಬೆಳೆದಿದ್ದು ಇದೀಗ ಬೆಲೆಯಿಲ್ಲದೆ ತತ್ತರಿಸುತ್ತಿದ್ದಾರೆ. ಅತೀರಾ ಬೆಳೆಯ ಕಟಾವು ಕಾರ್ಯ ಮುಕ್ತಾಯವಾಗಿದ್ದು, ಭತ್ತ ರೈತರ ಕಣಜಗಳಲ್ಲೇ ಉಳಿದುಕೊಂಡಿದೆ. ಅತಿವೃಷ್ಟಿಯಿಂದ ತೋಟಗಾರಿಕಾ ಬೆಳೆಗಳೂ ನೆಲಕ್ಕಚ್ಚಿದ್ದು ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಕೊಂಡಿದ್ದಾರೆ.  

ಬೇಡಿಕೆಯೂ ಇಲ್ಲ
ಅತೀರಾ ಭತ್ತಕ್ಕೆ  ಈ ಬಾರಿ ಹಿಂದಿನಂತೆ ಬೇಡಿಕೆ ಕಂಡು ಬರುತ್ತಿಲ್ಲ. ಇನ್ನು, ವರ್ತಕರು 1 ಕ್ವಿಂಟಾಲ್‌ ಭತ್ತಕ್ಕೆ  1 ಸಾವಿರದಿಂದ 1300 ರೂ. ಮಾತ್ರ ದರ ನೀಡುತ್ತಿರುವುದು ರೈತರನ್ನು ಮತ್ತಷ್ಟು  ಸಂಕಷ್ಟಕ್ಕೆ ತಳ್ಳಿದೆ. ಅತೀರಾ ಭತ್ತಕ್ಕೆ ವಿರಾಜಪೇಟೆ ತಾಲೂಕಿನಿಂದ ಅತೀ ಹೆಚ್ಚು ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮೂಲಕ 908 ಕ್ಟಿಂಟಾಲ್‌ ಅತೀರಾ ತಳಿಯ ಭತ್ತದ ಬಿತ್ತನೆ ಬೀಜ ಪೂರೈಕೆ ಮಾಡಲಾಗಿತ್ತು.1 ಎಕರೆಗೆ 25 ಕೆ.ಜಿ.ಯಂತೆ ಭಿತ್ತಲಾದ ಭತ್ತದಿಂದ ಒಟ್ಟು 3650 ಎಕರೆಯಲ್ಲಿ ಫ‌ಸಲು ಬಂದಿದೆ. ಅದರೊಂದಿಗೆ ಕೆಲವು ರೈತರು ಖಾಸಗಿಯಾಗಿ ಅತೀರಾ ತಳಿಯ ಭತ್ತದ ಭಿತ್ತನೆ ಮಾಡಿದ್ದು, ಭತ್ತವನ್ನು ಕೇಳುವವರೇ ಇಲ್ಲವಾಗಿದೆ. 

ಜಿಲ್ಲೆಯ 3 ತಾಲೂಕುಗಳಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವ ಕೇಂದ್ರ ತೆರೆಯಲಾಗಿದೆ. ಆದರೆ ಕೇವಲ 11 ಮಂದಿ ರೈತರು ಮಾತ್ರ ಭತ್ತ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ 33 ರೈಸ್‌ಮಿಲ್‌ಗ‌ಳಿದ್ದು, ಈ ಪೈಕಿ ಕೇವಲ 2 ಮಿಲ್‌ಗ‌ಳು ಮಾತ್ರ ಭತ್ತ ಖರೀದಿಗೆ ಮುಂದೆ ಬಂದಿದೆ. ಸಾಮಾನ್ಯ ಭತ್ತಕ್ಕೆ 1750 ರೂ. ಮತ್ತು ಎ ಗ್ರೇಡ್‌ ಭತ್ತಕ್ಕೆ 1770 ರೂ. ದರ ನಿಗದಿ ಮಾಡಲಾಗಿದೆ. ರೈತ ಸರಕಾರದ ಇಂತಹ ದ್ವಂದ್ವ ನಿಲುವುಗಳಿಂದ ಕಂಗಾಲಾಗಿದ್ದಾನೆ.

ನಾನು 8 ಎಕರೆ ಪ್ರದೇಶದಲ್ಲಿ ಅತೀರಾ ಭತ್ತ ಬೆಳೆದಿದ್ದೇನೆ. 1 ಎಕರೆಗೆ 30 ಸಾವಿರ ರೂ. ಖರ್ಚು ತಗುಲಿದೆ. ಇದೀಗ ಬೆಂಬಲ ಬೆಲೆಯಿಂದ ಅತೀರಾ ಭತ್ತವನ್ನು ಹೊರಗಿಡಲಾಗಿದ್ದು, ದರವೂ ಕುಸಿದಿದೆ. ಹಾಗಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕೆ?
ಸಿ.ಕೆ.ಬೋಪಣ್ಣ,  ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ 

Advertisement

ಕೃಷಿ ಇಲಾಖೆ ವತಿಯಿಂದ ಅತೀರಾ ಭತ್ತದ ಬೀಜ ಪೂರೈಸಲಾಗಿದೆ. ಅದರಂತೆ ದ. ಕೊಡಗಿನ ರೈತರು ಭತ್ತದ ಬೆಳೆದಿದ್ದಾರೆ. ಇದೀಗ ಅತೀರಾ ಭತ್ತವನ್ನು ಬೆಂಬಲ ಬೆಲೆಗೆ ಖರೀದಿಸಲು ಸರಕಾರ ಮುಂದಾಗದಿರುವುದು ಸರಿಯಲ್ಲ.
ಕಿರಣ್‌, ಜಿ.ಪಂ.ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next