ಹೊಸದಿಲ್ಲಿ : ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಬೆಂಬಲ ಇರುತ್ತಿದ್ದರೆ ಎಪಿಜೆ ಅಬ್ದುಲ್ ಕಲಾಂ ಅವರು 2012ರಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲದಲ್ಲಿ ರಾಷ್ಟ್ರಪತಿ ಹುದ್ದೆಗೆ ಮರಳುವುದು ಸಾಧ್ಯವಿತ್ತು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಬೆಂಬಲ ಇಲ್ಲದಿದ್ದ ಕಾರಣಕ್ಕೆ ಕಲಾಂ ಅವರು ತಮ್ಮ ಉಮೇದ್ವಾರಿಕೆಯನ್ನು ಹಿಂಪಡೆದುಕೊಂಡರು ಎಂದು ಹೊಸ ಪುಸ್ತಕವೊಂದು ಹೇಳಿದೆ.
‘ಆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನೇತಾರ ಪ್ರಣಾಬ್ ಮುಖರ್ಜಿ ಅವರನ್ನು ದೇಶದ 13ನೇ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲಾಯಿತು ಮತ್ತು ಮುಖರ್ಜಿ ಅವರು ಪ್ರತಿಭಾ ಪಾಟೀಲ್ ಅವರ ಉತ್ತರಾಧಿಕಾರಿಯಾಗಿ ಐದು ವರ್ಷಗಳ ಅವಧಿಗೆ ರಾಷ್ಟ್ರಪತಿ ಭವನನಲ್ಲಿ ಸ್ಥಾಪಿತರಾದರು’ ಎಂದು ಪುಸ್ತಕವು ವಿವರಿಸಿದೆ.
”2007ರ ಕೊನೆಯಲ್ಲಿ ತಮ್ಮ ರಾಷ್ಟ್ರಪತಿ ಪದಭಾರ ಮುಗಿದಾಗ ಕಲಾಂ ಅವರು ಭಾರತದ ಸಾಂಸ್ಕೃತಿಕ ಸಿರಿವಂತಿಕೆ ಮತ್ತು ಹಿಂದೂ ಸಂಘಟನೆಗಳ ಕೆಲವು ಉದಾರವಾದಿ ಮತ್ತು ಪ್ರಗತಿಪರ ನಾಯಕರ ಬಗ್ಗೆ ಮೆಚ್ಚುಗೆಯನ್ನು ಹೊಂದಿದ್ದರು. ಅದನ್ನು ಅವರು ವಿವಿಧ ವೇದಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಹಾಗಾಗಿ ಕಲಾಂ ಅವರು ಹಿಂದು ಭಾರತದ ಅಚ್ಚುಮೆಚ್ಚಿನ ಮುಸ್ಲಿಂ ಆಗಿದ್ದರು” ಎಂದು ರಾಜಮೋಹನ್ ಗಾಂಧಿ ಅವರು ಬರೆದಿರುವ “ಮಾಡರ್ನ್ ಸೌತ್ ಇಂಡಿಯ : ಎ ಹಿಸ್ಟರಿ ಫ್ರಂ ದಿ ಸೆವೆಂಟೀಂತ್ ಸೆಂಚುರಿ ಟು ಅವರ್ ಟೈಮ್ಸ್ ‘ ಎನ್ನುವ ಪುಸ್ತಕದಲ್ಲಿ ಹೇಳಿದ್ದಾರೆ.
”2002ರಲ್ಲಿ ರಾಷ್ಟ್ರಪತಿಗಳಾಗಿದ್ದ ಕೆ ಆರ್ ನಾರಾಯಣನ್ ಅವರ ಉತ್ತರಾಧಿಕಾರಿಯಾಗಿ ಕಲಾಂ ಅವರನ್ನು ಅಂದಿನ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಹೆಸರಿಸಿದ್ದರು. ಎಚ್ ಡಿ ದೇವೇಗೌಡ ಮತ್ತು ಐ ಕೆ ಗುಜ್ರಾಲ್ ಅವರ ಸಚಿವ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಯಾದವ್ ಅವರು ಅಂದಿನ ಡಿಆರ್‌ಡಿಓ ಮುಖ್ಯಸ್ಥರಾಗಿದ್ದ ಕಲಾಂ ಅವರನ್ನು ಇಷ್ಟಪಟ್ಟಿದ್ದರು” ಎಂದು ರಾಜಮೋಹನ್ ಗಾಂಧಿ ಬರೆದಿದ್ದಾರೆ.