Advertisement

ಪರ್ರೀಕರ್ ಗೋವಾ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ;16ಕ್ಕೆ ಬಹುಮತ ಸಾಬೀತು

12:27 PM Mar 14, 2017 | udayavani editorial |

ಪಣಜಿ: ಕಾಂಗ್ರೆಸ್ ಪಕ್ಷದ ತೀವ್ರ ವಿರೋಧದ ನಡುವೆಯೇ ಸುಪ್ರೀಂಕೋರ್ಟ್ ಆದೇಶದನ್ವಯ ಮನೋಹರ್ ಪರ್ರೀಕರ್ ಮಂಗಳವಾರ ಸಂಜೆ ಗೋವಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ಪರ್ರೀಕರ್ 4ನೇ ಬಾರಿ ಗೋವಾ ಸಿಎಂ ಗದ್ದುಗೆ ಏರಿದಂತಾಗಿದೆ.

Advertisement

ರಾಜ್ಯಪಾಲ ಮೃದುಲಾ ಸಿನ್ನಾ ಅವರು ಪರ್ರೀಕರ್ ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪರ್ರೀಕರ್ ಜೊತೆಗೆ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಲ್ಲದೇ ಗುರುವಾರ(ಮಾ.16) ಬೆಳಗ್ಗೆ 1ಗಂಟೆಗೆ ಮನೋಹರ್ ಪರ್ರೀಕರ್ ಬಹುಮತ ಸಾಬೀತುಪಡಿಸಬೇಕಾಗಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ದು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪರ್ರೀಕರ್‌ ಪ್ರಮಾಣಕ್ಕೆ ಸುಪ್ರೀಂ ತಡೆ ಇಲ್ಲ; ಮಾರ್ಚ್‌ 16 ಸದನ ಬಲಾಬಲ

ಹೊಸದಿಲ್ಲಿ : ಗೋವೆಯ ರಾಜ್ಯಪಾಲರಾಗಿರುವ ಮೃದುಲಾ ಸಿನ್ಹಾ ಅವರು ಬಿಜೆಪಿ ನಾಯಕ ಮನೋಹರ್‌ ಪರ್ರೀಕರ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿಯನ್ನು ಇಂದು ಮಂಗಳವಾರ ವಿಚಾರಣೆಗೆ ಎತ್ತಿಕೊಂಡ ಸುಪ್ರೀಂ ಕೋರ್ಟ್‌, ಮಾರ್ಚ್‌ 16ರಂದು ಸದನ ಬಲಾಬಲ ಪರೀಕ್ಷೆಗೆ ಆದೇಶ ನೀಡಿದೆ. ಆದರೆ ಮನೋಹರ್‌ ಪರ್ರೀಕರ್‌ ಅವರ ಇಂದಿನ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಿಲ್ಲ. 

Advertisement

40 ಸದಸ್ಯ ಬಲದ ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 17 ಸ್ಥಾನ ಗೆದ್ದಿರುವ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. ಬಿಜೆಪಿಗೆ 13 ಸ್ಥಾನಗಳು ಸಿಕ್ಕಿದ್ದು ಸರಕಾರ ರಚನೆಗೆ ಅದಕ್ಕೆ ಎಂಜಿಪಿ ಮತ್ತು ಗೋವಾ ಫಾರ್ವರ್ಡ್‌ ಪಕ್ಷ ಬೆಂಬಲ ನೀಡಿದೆ. 

ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ತಮಗೆ ಸರಕಾರ ರಚಿಸಲು ಬಹುಮತ ಇದೆ ಎಂದು ಹೇಳಿಕೊಂಡಿವೆ. ಅಂತಿರುವಾಗ ಸದನ ಬಲಾಬಲ ಪರೀಕ್ಷೆಯಿಂದ ಯಾವ ಪಕ್ಷಕ್ಕೆ ಖಚಿತ ಬಹುಮತ ಇದೆ ಎಂಬುದು ಸಾಬೀತಾಗಲಿದೆ ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ. ಅದಕ್ಕಾಗಿ ಅದು ಅತ್ಯಂತ ಹಿರಿಯ ಶಾಸಕರೊಬ್ಬರನ್ನು ಪ್ರೋಟೆಮ್‌ (ತಾತ್ಕಾಲಿಕ) ಸ್ಪೀಕರ್‌ ಆಗಿ ನೇಮಿಸಲಿದೆ.

ಕಾಂಗ್ರೆಸ್‌ನ ಗೋವಾ ಶಾಸಂಕಾಂಗ ಪಕ್ಷದ ನಾಯಕ ಚಂದ್ರಕಾಂತ ಕಾವಳೇಕರ್‌ ಅವರು “ಮುಖ್ಯಮಂತ್ರಿಯಾಗಿ ಮನೋಹರ್‌ ಪರ್ರೀಕರ್‌ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಬೇಕು’ ಎಂದು ಕೋರಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿಸದ್ದರು. ಮಾತ್ರವಲ್ಲದೆ ರಾಜ್ಯಪಾಲರು ಪರ್ರೀಕರ್‌ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿ ಪ್ರಕಟಿಸಿರುವ ನಿರ್ಧಾರವನ್ನು ಕೂಡ ಅನೂರ್ಜಿತಗೊಳಿಸುವಂತೆ ಕೋರಿದ್ದರು. 

ವಿಚಾರಣೆ ವೇಳೆ ಕಾಂಗ್ರೆಸ್‌ ಪ್ರತಿನಿಧಿಸಿದ ಅಭಿಷೇಕ್‌ ಸಿಂಘವಿ ಅವರು “ಬಿಜೆಪಿಯು ಕುದುರೆ ವ್ಯಾಪಾರದಲ್ಲಿ ತೊಡಗಿದೆ ಮತ್ತು ಸಾಂವಿಧಾನಿಕ ಕ್ರಮಗಳ ಉಲ್ಲಂಘನೆ ಮಾಡುತ್ತಿದೆ’ ಎಂದು ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next