ವರ್ಷ ಮುಗಿಯುತ್ತಾ ಬಂತು.. ಉಳಿದಿರುವುದು ಕೇವಲ ಎರಡೇ ತಿಂಗಳು. ಅಭಿಮಾನಿಗಳು ಕಾಯುತ್ತಲೇ ಇದ್ದಾರೆ… ಅದು ಸ್ಟಾರ್ ಸಿನಿಮಾಗಳಿಗೆ. ಒಂದೆರಡು ವರ್ಷಗಳಿಂದ ಟೀಸರ್, ಫಸ್ಟ್‌ಲುಕ್, ಟೈಟಲ್ ಎನ್ನುತ್ತಾ ಸದ್ದು ಮಾಡಿದ ಸ್ಟಾರ್ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು. ಅತ್ತ ಕಡೆ ವಿಜಯ್ “ಭೀಮ’, ಇತ್ತ ಕಡೆ ದರ್ಶನ್ “ಕಾಟೇರ’ ಮತ್ತೂಂದು ಕಡೆ ಧ್ರುವ “ಮಾರ್ಟಿನ್’ ಇನ್ನೊಂದು ಕಡೆ ಉಪೇಂದ್ರ ಅವರ “ಬುದ್ಧಿವಂತ-2′, “ಯು-ಐ’… ಲೆಕ್ಕ ಹಾಕುತ್ತಾ ಹೋದರೆ ತೆರೆಗೆ ಬರಬೇಕಾದ ಸ್ಟಾರ್ ಸಿನಿಮಾಗಳ ಸಂಖ್ಯೆ ದೊಡ್ಡದಿದೆ. ಇನ್ನೇನು ವರ್ಷಾಂತ್ಯದಲ್ಲಿ ಸ್ಟಾರ್ ಸಿನಿಮಾಗಳು ದರ್ಶನ ನೀಡಬಹುದು ಎಂದು ನಿರೀಕ್ಷೆ ಇಟ್ಟು ಕಾದು ಕುಳಿತಿರುವ ಸಿನಿಮಾ ಪ್ರೇಮಿಗಳಿಗೆ ಈ ವರ್ಷದ ಭರವಸೆ ಕುಂದುತ್ತಾ ಬಂದಿದೆ. ಅದಕ್ಕೆ ಕಾರಣ ಸ್ಟಾರ್ ಸಿನಿಮಾಗಳ್ಯಾವುದು ಬಿಡುಗಡೆ ದಿನಾಂಕ ಘೋಷಣೆ ಮಾಡದೇ ಇರುವುದು.
ಚಿತ್ರರಂಗದ ಮೂಲಗಳ ಪ್ರಕಾರ, ಈ ವರ್ಷಾಂತ್ಯದಲ್ಲಿ ಒಂದೆರಡು ಸ್ಟಾರ್ ಸಿನಿಮಾವಾದರೂ ತೆರೆಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಅದರಲ್ಲೂ ಧ್ರುವ ಸರ್ಜಾ “ಮಾರ್ಟಿನ್’, ವಿಜಯ್ “ಭೀಮ’ ಚಿತ್ರಗಳು ಈ ವರ್ಷವೇ ತೆರೆ ಕಾಣಲಿವೆ ಎಂದೇ ಹೇಳಲಾಗಿತ್ತು. ಆದರೆ, ನವೆಂಬರ್ ಮೊದಲ ವಾರ ಬಂದರೂ ಈ ಚಿತ್ರಗಳು ಇನ್ನೂ ಡೇಟ್ ಅನೌನ್ಸ್ ಆಗಲಿ, ಪ್ರಮೋಶನ್ ಅಖಾಡಕ್ಕಾಗಲೀ ಇಳಿದಿಲ್ಲ. ಇದು ಸ್ಟಾರ್ ಸಿನಿಮಾ ಬಯಸುವ ಮಂದಿಗೆ ಕೊಂಚ ಬೇಸರ ತರಿಸಿದೆ ಎಂದರೆ ತಪ್ಪಲ್ಲ.
ಈ ವರ್ಷ ಸ್ಟಾರ್ ಸಿನ್ಮಾ ಕಡಿಮೆ
ಪ್ರತಿ ವರ್ಷ ಎಲ್ಲಾ ಸ್ಟಾರ್‌ಗಳು ತೆರೆಮೇಲೆ ದರ್ಶನ ನೀಡಬೇಕು ಎಂಬ ಬಯಕೆ ಚಿತ್ರರಂಗದ್ದು. ಸ್ಟಾರ್‌ಗಳು ವರ್ಷಕ್ಕೆರಡು ಸಿನಿಮಾ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇರುತ್ತದೆ. ಆದರೆ, ಕಡೆ ಪಕ್ಷ ವರ್ಷಕ್ಕೊಂದು ಸ್ಟಾರ್ ಸಿನಿಮಾ ಬಿಡುಗಡೆಯಾದರೂ ಚಿತ್ರರಂಗಕ್ಕೆ ಎಲ್ಲಾ ರೀತಿಯಿಂದಲೂ ಪೂರಕ ಎಂಬ ಮಾತಿದೆ. ಅದರಂತೆ ಕೆಲ ವರ್ಷ ಎಲ್ಲಾ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ, ಈ ವರ್ಷ ತೆರೆಮೇಲೆ ದರ್ಶನ ನೀಡಿದ್ದು ಕೆಲವೇ ಕೆಲವು ಸ್ಟಾರ್ ಗಳು. ವರ್ಷಾರಂಭದಲ್ಲಿ ನಟ ದರ್ಶನ, ಆ ನಂತರ ಉಪೇಂದ್ರ, ಗಣೇಶ್, ಶಿವರಾಜ್‌ಕುಮಾರ್ ಬಿಟ್ಟರೆ ಮಿಕ್ಕಂತೆ ಈ ವರ್ಷ ಸುದೀಪ್, ವಿಜಯ್, ಧ್ರುವ, ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಮುಂಚೂಣಿ ನಟರ ಸಿನಿಮಾಗಳು ತೆರೆಕಂಡಿದ್ದು ಕಡಿಮೆ. ವರ್ಷಾಂತ್ಯದಲ್ಲಾದರೂ ಕೆಲವು ಸ್ಟಾರ್ ಚಿತ್ರಗಳು ಬರಬಹುದು ಎಂಬ ನಿರೀಕ್ಷೆಗೂ ಈಗ ಗಟ್ಟಿ “ಅಡಿಪಾಯ’ವಿಲ್ಲ.
ಬಿಝಿನೆಸ್ ಮಾತುಕತೆ ಜೋರು
ವರ್ಷದಿಂದ ವರ್ಷಕ್ಕೆ ಸಿನಿಮಾ ಬಜೆಟ್ ಹೆಚ್ಚಾಗುತ್ತಿದೆ. ಅದರಲ್ಲೂ ಈಗ ಸ್ಟಾರ್ ಸಿನಿಮಾಗಳ ಬಜೆಟ್ ಕೇಳಿದರೆ ಅಚ್ಚರಿಯಾಗುತ್ತದೆ. ಯಾವ ಭಾಷೆಗಳಿಗೂ ಕಡಿಮೆ ಇಲ್ಲದಂತೆ ಕನ್ನಡದಲ್ಲೂ ಸಿನಿಮಾ ತಯಾರಾಗುತ್ತಿರುವುದರಿಂದ ಸಹಜವಾಗಿಯೇ ಬಜೆಟ್ ಏರಿಕೆಯಾಗುತ್ತದೆ. ಹಾಗಾಗಿ, ನಿರ್ಮಾಪಕರು ಕೂಡಾ ಸಿನಿಮಾ ಬಿಡುಗಡೆಗೂ ಮುಂಚೆ ಸೇಫ್ ಆಗಲು ನೋಡುತ್ತಿದ್ದಾರೆ. ಸದ್ಯ ಸ್ಯಾಟ್‌ಲೈಟ್, ಓಟಿಟಿ, ಡಬ್ಬಿಂಗ್ … ಹೀಗೆ ಸಿನಿಮಾ ಪೂರ್ವದಲ್ಲಾಗುವ ಬಿಝಿನೆಸ್ ಅನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ.
ಏಕೆಂದರೆ ಸ್ಟಾರ್ ಸಿನಿಮಾಗಳ ನಿರ್ಮಾಪಕನನ್ನು ಮೊದಲು ಮುಕ್ಕಾಲು ಭಾಗ ಸೇಫ್ ಮಾಡೋದು ಇದೇ ವೇದಿಕೆಗಳು. ಹಾಗಾಗಿ, ಬಿಡುಗಡೆಗೆ ರೆಡಿಯಾಗಿರುವ ಸ್ಟಾರ್ ಸಿನಿಮಾಗಳ “ಬಿಝಿನೆಸ್’ ಮಾತುಕತೆ ಕೂಡಾ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ. ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಕೆಲವು ಸಿನಿಮಾಗಳು ಚಿತ್ರಮಂದಿಗಳಲ್ಲಿ ಸದ್ದು ಮಾಡದೇ ನೀರಸ ಪ್ರತಿಕ್ರಿಯೆ ಪಡೆದಿರುವುದು ಕೂಡಾ ಇತರ ಸ್ಟಾರ್ ಸಿನಿಮಾಗಳ ಬಿಝಿನೆಸ್ ಮೇಲೆ ಪರಿಣಾಮ ಬೀರಿರುವುದು ಸುಳ್ಳಲ್ಲ.
ರವಿಪ್ರಕಾಶ್ ರೈ