ಬೆಳಗಾವಿ, ಗದಗ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳ 11 ತಾಲೂಕುಗಳಿಗೆ ಕುಡಿಯುವ ನೀರು ಕೊಡುವ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದ ಬಗ್ಗೆ ಸಮ್ಮಿಶ್ರ ಸರಕಾರ ಆಸಕ್ತಿ ಕಳೆದುಕೊಂಡಿದೆಯೇ..?
ಅಧಿವೇಶನಕ್ಕೆ ಮುನ್ನ ಈ ಭಾಗದ ಜನರು ಸಮ್ಮಿಶ್ರ ಸರಕಾರದಿಂದ ಬಹಳ ನಿರೀಕ್ಷೆ ಮಾಡಿದ್ದರು. ಮೊದಲ ಬಾರಿಗೆ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದರಿಂದ ಸರಕಾರ ಬಾಕಿ ಉಳಿದ ಕಳಸಾ ಕಾಮಗಾರಿ ಹಾಗೂ ನೀರಿನ ಬಳಕೆಯ ಬಗ್ಗೆ ಘೋಷಣೆ ಆಗಲಿದೆ ಎಂದು ಭಾವಿಸಿದ್ದರು. ಆದರೆ ಅಧಿವೇಶನದ ಸರಕಾರದಿಂದ ಯಾವುದೇ ಪ್ರಸ್ತಾಪ ಬರದೇ ಇರುವುದು ಸರಕಾರವನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ತೀರ್ಪು ಪ್ರಕಟವಾದ ನಂತರ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಿದ್ದ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಶೀಘ್ರ ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದರು. ಆದರೆ ಸರಕಾರದಿಂದ ತಜ್ಞರ ಸಭೆ ಕರೆಯುವ ಹಾಗೂ ಸರ್ವಪಕ್ಷದ ಮುಖಂಡರ ಸಲಹೆ ಪಡೆಯುವ ಪ್ರಯತ್ನ ಆಗಿಲ್ಲ.
ಈ ಹಿಂದೆ ಅಂತಾರಾಜ್ಯ ನೀರಿನ ವಿವಾದಗಳು ಉಂಟಾದ ಸಮಯದಲ್ಲಿ ಸರಕಾರಗಳು ತೀರ್ಪುಪ್ರಕಟವಾದ ಬೆನ್ನಲ್ಲೇ ತಜ್ಞರ ಜೊತೆ ಸಂಪರ್ಕಮಾಡಿ ಸರ್ವ ಪಕ್ಷಗಳ ಸಭೆ ನಡೆಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತ ಬಂದಿವೆ. ಆದರೆ ಕಳಸಾ-ಬಂಡೂರಿ ವಿಷಯದಲ್ಲಿ ಈ ರೀತಿ ಆಗಿಲ್ಲ.
ಉದಾಸೀನತೆ: ಚಳಿಗಾಲದ ಅಧಿವೇಶನ ಮುಗಿಯುತ್ತ ಬಂದರೂ ಕಳಸಾ-ಬಂಡೂರಿಯ ಬಗ್ಗೆ ಚಕಾರವೇ ಸರಕಾರ ಚಕಾರವನ್ನೇ ಎತ್ತಿಲ್ಲ. ನ್ಯಾಯಾಧಿಕರಣದ ತೀರ್ಪು ಬಂದ ನಂತರ ಅದರ ಅನುಷ್ಠಾನಕ್ಕೆ ಚುರುಕಾಗಿ ಕೆಲಸ ಮಾಡಬೇಕಿದ್ದ ಸರಕಾರ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನ್ಯಾಯಾಧಿಕರಣದ ತೀರ್ಪು ಬಂದು ನಾಲ್ಕು ತಿಂಗಳಾಗಿವೆ. ಆರು ತಿಂಗಳ ಗಡುವಿನಲ್ಲಿ ಇನ್ನು ಎರಡು ತಿಂಗಳು ಮಾತ್ರ ಉಳಿದಿವೆ. ಈ ಅವಧಿಯಲ್ಲಿ ಕಳಸಾ ನಾಲಾದಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಬೇಗ ಕೈಗೊಂಡು 1.5 ಟಿಎಂಸಿ ನೀರು ಮಲಪ್ರಭಾ ನದಿಗೆ ತಿರುಗಿಸಬೇಕು. ಬಂಡೂರಿ ನಾಲಾ ಕೆಲಸದ ಟೆಂಡರ್ ಕರೆಯಬೇಕು. ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿ. ಅದನ್ನು ಬಿಟ್ಟು ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ಮೌನವಾಗಿರುವುದು ಸರಿಯಲ್ಲ ಎನ್ನುತ್ತಾರೆ ಅವರು.ಕಳಸಾ ಮತ್ತು ಬಂಡೂರಿಯಿಂದ 7.56 ಟಿಎಂಸಿ ಹಂಚಿಕೆ ಮಾಡಬೇಕು ಎಂದು ಕರ್ನಾಟಕ ಕೇಳಿತ್ತು. ಆದರೆ ನ್ಯಾಯಾಧಿಕರಣ 3.90 ಟಿ ಎಂ ಸಿ ನೀರು ಹಂಚಿಕೆ ಮಾಡಿದೆ. ನ್ಯಾಯಾಧಿಕರಣದಿಂದ ಹಂಚಿಕೆಯಾಗಿರುವ ಒಟ್ಟು ನೀರಿನ ಪ್ರಮಾಣ 13.42 ಟಿ ಎಂ ಸಿ. ಇದರಲ್ಲಿ 5.4 ಟಿ ಎಂ ಸಿ ನೀರು ಬಳಕೆಗೆ ಹಾಗೂ 8 ಟಿಎಂಸಿ ನೀರು ವಿದ್ಯುತ್ ಉತ್ಪಾದನೆ ಮಾತ್ರ ಎಂದು ನಿಗದಿ ಮಾಡಲಾಗಿದೆ. ಈ ನೀರನ್ನು ಬಳಕೆ ಮಾಡಿಕೊಳ್ಳಲು ತಕ್ಷಣ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಗೋವಾಇದಕ್ಕೂ ಅಡ್ಡಿ ಮಾಡಬಹುದು ಎಂಬುದು ರೈತರ ಆತಂಕ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಹೊಲಗಾಲುವೆಗಳನ್ನು ಪುನರ್‌ನಿರ್ಮಾಣ ಮಾಡಬೇಕಿದೆ. ಜಲಾಶಯದ ಹೂಳು, ನದಿಯ ವಿಸ್ತಾರ, ಯೋಜನೆಯ ಕಾಮಗಾರಿ, ಕಾಲುವೆಗಳ ಮರು ನಿರ್ಮಾಣ ಅಗತ್ಯವಾಗಿದ್ದು ಇದಕ್ಕೆಲ್ಲ ಕನಿಷ್ಠ ಐದು ಸಾವಿರ ಕೋಟಿ ರೂ ಹಣ ಬೇಕು. ರೈತರ ಸಾಲಮನ್ನಾಕ್ಕೆ ಹಣ ಸರಿದೂಗಿಸಲು ಪರದಾಡುತ್ತಿರುವ ಸರಕಾರ ಇಷ್ಟೊಂದು ಹಣವನ್ನು ಈ ಕಾಮಗಾರಿಗಳಿಗೆ ನೀಡುತ್ತದೆಯೇ ಎಂಬ ಅನುಮಾನ ರೈತ ಸಮುದಾಯವನ್ನು ಕಾಡುತ್ತಿದೆ.
ಕೇಶವ ಆದಿ