Advertisement
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾ.ಪಂ. ವ್ಯಾಪ್ತಿಯ ಕೆಯ್ಯೂರು ದ್ವಾರದಿಂದ ಅರ್ಧ ಕಿ.ಮೀ. ದೂರದಲ್ಲಿ ರಸ್ತೆ ಸನಿಹದಲ್ಲಿದಲ್ಲಿಯೇ ಈ ಕುಟುಂಬ ವಾಸಿಸುತ್ತಿದೆ. ಹೆಣ್ಣುಮಕ್ಕಳ ತಂದೆ ಹಲವು ವರ್ಷದ ಹಿಂದೆಯೇ ನಿಧನರಾಗಿದ್ದರು. ಮೂರು ವರ್ಷದ ಹಿಂದೆ ತಾಯಿ ಸುಂದರಿ ಅವರು ನಿಧನರಾದ ಬಳಿಕ ಈ ಹೆಣ್ಣು ಮಕ್ಕಳು ಅನಾಥರಂತಾದರು.
ಕೆಯ್ಯೂರು ಗ್ರಾ.ಪಂ.ನಿಂದ ಮೂರು ವರ್ಷಗಳ ಹಿಂದೆ ಬಸವ ವಸತಿ ಯೋಜನೆಯಡಿ ಸುಂದರಿ ಅವರಿಗೆ ಮನೆ ಮಂಜೂರಾಗಿತ್ತು. ಅಡಿಪಾಯ ಆಗಿ ಒಂದು ಭಾಗದ ಗೋಡೆ ನಿರ್ಮಾಣ ಆರಂಭವಾಗಿತ್ತು. ಈ ವೇಳೆ ಸುಂದರಿ ಮೃತಪಟ್ಟಿದ್ದರು. ಇದರಿಂದ ಮನೆ ಕಾಮಗಾರಿ ಅರ್ಧದಲ್ಲೇ ನಿಂತಿತ್ತು. ಅಧಿಕಾರಿಗಳು ಮನೆ ಅಡಿಪಾಯದ ಫೊಟೋ ತೆಗೆದಿದ್ದರೂ, ಪ್ರಥಮ ಹಂತದಲ್ಲಿ ದೊರೆಯಬೇಕಾದ ಸಹಾಯಧನ ಹಣ ಇನ್ನೂ ಪಾವತಿಯಾಗಿಲ್ಲ. ಆರ್ಥಿಕ ಸಮಸ್ಯೆಯಿಂದಾಗಿ ಕಳೆದ ನಾಲ್ಕು ವರ್ಷದಿಂದ ಮನೆ ಅಪೂರ್ಣ ಸ್ಥಿತಿಯಲ್ಲಿಯೇ ಇದೆ.
Related Articles
ಸುಂದರಿ ಅವರು ಆಧಾರ್ ಕಾರ್ಡ್ ನೀಡದ ಕಾರಣ ಹಣ ಪಾವತಿಗೆ ಅಡ್ಡಿ ಉಂಟಾಗಿತ್ತು. ಅವರ ನಿಧನದ ಬಳಿಕ ಸಮಸ್ಯೆ ಮತ್ತಷ್ಟು ಜಟಿಲವಾಯಿತು. ಆಗ ಮಕ್ಕಳು ವಯಸ್ಕರಾಗಿರಲಿಲ್ಲ. ಈಗ ಇಬ್ಬರು ಮಕ್ಕಳು ವಯಸ್ಕರಾಗಿದ್ದಾರೆ. ತಾಯಿ ಹೆಸರಿನಲ್ಲಿದ್ದ ಮನೆ ಹಿರಿಯ ಮಗಳು ನೇತ್ರಾ ಅವರ ಹೆಸರಿಗೆ ಆಗಿದೆ. ಆದರೆ ಬ್ಯಾಂಕ್ ಖಾತೆ, ಇತರ ದಾಖಲೆಗಳು ವರ್ಗಾವಣೆಯಾಗಿಲ್ಲ. ಆನ್‌ಲೈನ್‌ನಲ್ಲಿ ತಾಂತ್ರಿಕ ಅಡ್ಡಿ ಉಂಟಾಗಿದೆ. ಹಾಗಾಗಿ ಸರಕಾರದ ಸಹಾಯಧನ ಸಿಕ್ಕಿಲ್ಲ. ಪುತ್ತೂರು ತಾ.ಪಂ. ಅಧ್ಯಕ್ಷರ ಮನೆ ಸನಿಹದಲ್ಲೇ ಈ ಬಡ ಕುಟುಂಬ ಇದೆ. ಅವರ ಬಳಿಯೂ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಮನೆಗೂ ಬಂದು ಪರಿಶೀಲಿಸಿದ್ದಾರೆ. ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಆದರೆ ನಮ್ಮ ಸಮಸ್ಯೆಗೆ ಸ್ಪಂದನ ಸಿಕ್ಕಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಈ ಮನೆಯ ಹೆಣ್ಣುಮಕ್ಕಳು.
Advertisement
ಕಿತ್ತು ತಿನ್ನುವ ಬಡತನಈ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿ ಅಜ್ಜಿ ಇದ್ದಾರೆ. ಅವರಿಗೆ ದೃಷ್ಟಿ ಸಮಸ್ಯೆ ಇದೆ. ನಡೆದಾಡಲು ಕಷ್ಟ. ಮನೆ ಅಡಿ ಸ್ಥಳ ಬಿಟ್ಟು ಬೇರೇನೂ ಇಲ್ಲ. ತಿಂಗಳ ಪಡಿತರವೇ ಹಸಿವು ನೀಗಲು ಇರುವ ದಾರಿ. ಜೀವನೋಪಾಯಕ್ಕೆ ಯಾವುದೇ ಆದಾಯವಿಲ್ಲ ಎನ್ನುತ್ತಾರೆ ನೇತ್ರಾ. ಶೌಚಾಲಯ ಕೆಲಸ ಶೀಘ್ರ ಆರಂಭ
ಈ ಕುಟುಂಬಕ್ಕೆ 25 ಸಾವಿರ ರೂ. ಮಂಜೂರಾಗಿದೆ. ಆದರೆ, ತುರ್ತಾಗಿ ತಮಗೆ ಶೌಚಾಲಯದ ಅಗತ್ಯವಿದ್ದು, ನಿರ್ಮಿಸಿಕೊಡುವಂತೆ ಅವರು ಮನವಿ ಮಾಡಿದ್ದರಿಂದ ಮುಂದಿನ ವಾರದಲ್ಲೇ ಕೆಲಸ ಪ್ರಾರಂಭಿಸಲಾಗುವುದು. ಗ್ರಾಮ ಪಂಚಾಯತ್ ವತಿಯಿಂದ ಮನೆ ಕಟ್ಟಿಸಲು ಪ್ರಯತ್ನಿಸಲಾಗುವುದು.
-ಭವಾನಿ ಚಿದಾನಂದ,
ತಾ.ಪಂ. ಅಧ್ಯಕ್ಷರು, ಪುತ್ತೂರು ನೆರವಿಗೆ ಯೋಜನೆ
ಬೆಳ್ಳಾರೆ ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಆ ಮನೆಗೆ ತೆರಳಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದೇವೆ. ಗ್ರಾ.ಪಂ. ಸಹಿತ ಇತರ ಇಲಾಖೆಗಳ ಜತೆಗೆ ಚರ್ಚಿಸಿದ್ದೇವೆ. ದಾನಿಗಳ ಸಹಕಾರ ಪಡೆದು ಅವರಿಗೆ ನೆರವು ನೀಡಲು ಯೋಜನೆ ರೂಪಿಸುತ್ತಿದ್ದೇವೆ.
– ಪ್ರವೀಣ್ ಕುಮಾರ್,
ಬಿಎಸ್‌ಡಬ್ಲ್ಯೂ ವಿದ್ಯಾರ್ಥಿ, ಬೆಳ್ಳಾರೆ ಕಾಲೇಜು ಗೋಪಾಲಕೃಷ್ಣ ಸಂತೋಷ್‌ನಗರ