Advertisement

ಸಾಲಿಗ್ರಾಮದಲ್ಲಿ ಇನ್ನೂ ಆರಂಭಗೊಳ್ಳದ ಸರ್ವಿಸ್‌ ರಸ್ತೆ

04:10 AM Nov 23, 2018 | Team Udayavani |

ಕೋಟ: ಚತುಷ್ಪಥ ಕಾಮಗಾರಿ ಬಹುತೇಕ ಅಂತ್ಯಗೊಂಡಿದೆ ಎನ್ನುವ ವಾದದೊಂದಿಗೆ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಂದ ಟೋಲ್‌ ಸಂಗ್ರಹಿಸಲು ನವಯುಗ ಕಂಪನಿ ಅಂತಿಮ ಹೋರಾಟ ನಡೆಸುತ್ತಿದೆ. ಆದರೆ ಯೋಜನೆಯಲ್ಲಿರುವ ಕಾಮಗಾರಿ ಇನ್ನೂ ಹಲವು ಕಡೆ ಪೂರ್ಣಗೊಂಡಿಲ್ಲ ಎನ್ನುವುದಕ್ಕೆ ಸಾಲಿಗ್ರಾಮ ಉತ್ತಮ ಸಾಕ್ಷಿಯಾಗಿದೆ. ಇಲ್ಲಿ ಎರಡು ಕಡೆ  ಸರ್ವಿಸ್‌ ರಸ್ತೆ ನಿರ್ಮಿಸಬೇಕು ಎನ್ನುವ ಷರತ್ತು ಯೋಜನೆಯಲ್ಲಿತ್ತು. ಆದರೆ ಇದುವರೆಗೆ ಕಾಮಗಾರಿಯ ಅನುಷ್ಠಾನವಾಗಿಲ್ಲ.

Advertisement

ಎರಡು ಕಡೆ ಸರ್ವಿಸ್‌ ರಸ್ತೆ
ಸಾಲಿಗ್ರಾಮದ ಕಾವಡಿ ರಸ್ತೆಯ ಎದುರಿನಿಂದ ಮೀನು ಮಾರುಕಟ್ಟೆ, ಕಾರಂತ ಬೀದಿಯ ಅಂತ್ಯದ ತನಕ ಎರಡು ಕಡೆಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಬೇಕು ಎನ್ನುವ ಯೋಜನೆ ಇದ್ದು,  ಮೂರು ವರ್ಷಗಳ‌ ಹಿಂದೆ  ಕಾಮಗಾರಿ ಆರಂಭಿಸುವ ಮಾತು ಕೇಳಿ ಬಂದಿತ್ತು. ಆದರೆ ಇದುವರೆಗೆ ಕಾರ್ಯಗತವಾಗಿಲ್ಲ.

ಗ್ರಾಮೀಣ ರಸ್ತೆಗಳ ಸಂಪರ್ಕ ಕಷ್ಟ
ಚತುಷ್ಪಥ ಕಾಮಗಾರಿ ಆರಂಭವಾದ ದಿನದಿಂದ ಇಲ್ಲಿನ ಪ್ರಮುಖ ಗ್ರಾಮೀಣ ರಸ್ತೆಯಾದ  ಕಾವಡಿ-ಯಡ್ತಾಡಿ ರಸ್ತೆಯ ಮೂಲಕ ಸಾಲಿಗ್ರಾಮ ತಲುಪಲು ಸಮಸ್ಯೆಯಾಗುತ್ತಿದೆ. ಈ ಮಾರ್ಗವಾಗಿ ಸಂಚರಿಸುವವರು ಸರಿಯಾದ ದಿಕ್ಕಿನಲ್ಲಿ ಸಾಲಿಗ್ರಾಮ ತಲುಪಬೇಕಾದರೆ ಸುಮಾರು ಮೂರು ಕಿ.ಮೀ. ಮಂದೆ ಸಾಗಿ ಗುಂಡ್ಮಿ ಅಂಬಾಗಿಲು ಡಿವೈಡರ್‌ನಲ್ಲಿ ತಿರುಗಿ ಬರಬೇಕು. ಅಥವಾ ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕು. ಹೀಗಾಗಿ ಪ್ರತಿ ನಿತ್ಯ ಸಾವಿರಾರು ಮಂದಿ ಈ ಭಾಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಾರೆ ಮತ್ತು ಇದರಿಂದ ಅಪಘಾತಗಳು ಸಂಭವಿಸಿದೆ.

ರಸ್ತೆ ನಿರ್ಮಿಸುವಾಗ ಎಚ್ಚರ ಅಗತ್ಯ
ಇದೀಗ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಎದುರು ಮುಖ್ಯಪೇಟೆ ಹಾಗೂ ರಥಬೀದಿಗೆ ಡಿವೈಡರ್‌ನ ಎದುರು ನೇರ ಸಂಪರ್ಕ ಇರುವುದರಿಂದ ಸಂಚಾರದಲ್ಲಿ ಗೊಂದಲ ಏರ್ಪಟ್ಟು ಸಾಕಷ್ಟು ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗಿದೆ. ಮುಂದೆ ಸರ್ವಿಸ್‌ ರಸ್ತೆ ನಿರ್ಮಿಸುವಾಗಲೂ ಇದೇ ಸ್ಥಳದಲ್ಲಿ  ಸಂಪರ್ಕ ಕಲ್ಪಿಸಿದಲ್ಲಿ ನಾಲ್ಕು ಕಡೆಗಳಿಂದ ಬರುವ ವಾಹನಗಳು ಒಂದೇ ದಿಕ್ಕಿನಲ್ಲಿ ಸಂಚರಿಸಬೇಕಾಗಿರುವುದರಿಂದ ಮತ್ತಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಈಗಿರುವ ಡಿವೈಡರ್‌ ದೇವಸ್ಥಾನದ ಉಪಯೋಗಕ್ಕೆ  ಸೀಮಿತ ಗೊಳಿಸಿ, ಬೇರೆ ಕಡೆ ವಾಹನ ಸಂಚಾರಕ್ಕೆ ಶಾಶ್ವತ ಡಿವೈಡರ್‌ ಕಲ್ಪಿಸಬೇಕಿದೆ. ಕಾಮಗಾರಿ ನಡೆಯುವಾಗ ಸ್ಥಳೀಯರು ಸಂಬಂಧಪಟ್ಟ ಕಂಪೆನಿಗೆ ಸಮಸ್ಯೆಯನ್ನು ಮನದಟ್ಟು ಮಾಡಬೇಕಾದ ಅಗತ್ಯವಿದೆ.

ಕಾಮಗಾರಿ ಆರಂಭಕ್ಕೆ ಒತ್ತಡ ಅಗತ್ಯ
ಈ ಹಿಂದೆ ಕೋಟೇಶ್ವರ ಬೀಜಾಡಿಯಲ್ಲಿ ಸರ್ವಿಸ್‌ ರಸ್ತೆ ಕಾಮಗಾರಿ ಹಲವು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಅನಂತರ ಸ್ವಲ್ಪ ದಿನದ ಹಿಂದೆ ಅಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಕಂಪನಿಗೆ ಬಿಸಿ ಮುಟ್ಟಿಸಿದ ಮೇಲೆ ತತ್‌ಕ್ಷಣ ಕಾಮಗಾರಿ ಆರಂಭವಾಯಿತು. ಅದೇ ರೀತಿ ಸಾಲಿಗ್ರಾಮದಲ್ಲೂ ಸರ್ವಿಸ್‌ ರಸ್ತೆ ಕುರಿತು ಒತ್ತಡ ಹೇರಬೇಕಿದೆ. ಇಲ್ಲದಿದ್ದರೆ  ಕಾಮಗಾರಿ ಇನ್ನಷ್ಟು ವಿಳಂಬವಾಗುವುದರಲ್ಲಿ ಅನುಮಾನವಿಲ್ಲ.

Advertisement

ಕುಂದಾಪುರ ಫ್ಲೈ ಓವರ್‌ ಮುಗಿದ ಮೇಲೆ ನಿರ್ಧಾರ
ಸಾಲಿಗ್ರಾಮದಲ್ಲಿ ಸರ್ವಿಸ್‌ ರಸ್ತೆ ನಿರ್ಮಿಸಲು ಬಾಕಿ ಇದೆ. ಆದರೆ ಇದೀಗ ಕುಂದಾಪುರ ಪ್ಲೈಓವರ್‌ ಕಾಮಗಾರಿ ನಡೆಯುತ್ತಿದ್ದು ಅದನ್ನು ಪೂರ್ಣಗೊಳಿಸುವುದು ನಮ್ಮ ಪ್ರಥಮ ಆದ್ಯತೆ. ಈ ಕಾಮಗಾರಿಯ ಅನಂತರ ಸಾಲಿಗ್ರಾಮ ಹಾಗೂ ಮಿಕ್ಕುಳಿದ ಕೆಲಸಗಳ  ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
– ರಾಘವೇಂದ್ರ, ಇಂಜಿನಿಯರ್‌, ನವಯುಗ ಕಂಪೆನಿ

— ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next