Advertisement

ಈ ವರ್ಷ ಶಾಲೆ ಇಲ್ಲ; ಹೆಚ್ಚಿದ ಪೋಷಕರ ಜವಾಬ್ದಾರಿ

12:01 AM Nov 25, 2020 | mahesh |

ಕೋವಿಡ್‌ ಸಂಕಷ್ಟದ ಈ ಸಮಯದಲ್ಲಿ ಶಾಲೆಗಳನ್ನು ಆರಂಭಿಸುವ ವಿಚಾರದಲ್ಲಿ ಮೂಡಿದ್ದ ಗೊಂದಲಕ್ಕೆ ಈಗ ತೆರೆಬಿದ್ದಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಡಿ.31ರವರೆಗೆ ಆರಂಭಿಸುವುದಿಲ್ಲ ಎಂದು ಸರಕಾರ ಘೋಷಿಸಿದೆ.

Advertisement

“”ಈ ವರ್ಷ ಶಾಲೆ ಇಲ್ಲ” ಅನ್ನುವ ಕಾರಣದಿಂದಲೇ ಪೋಷಕರ ಮತ್ತು ಶಾಲೆಗಳ (ಆ ಮೂಲಕ ಶಿಕ್ಷಕರ) ಜವಾಬ್ದಾರಿ ಹೆಚ್ಚಾಗಲಿದೆ. ಶಾಲೆ- ಕಾಲೇಜುಗಳು ತೆರೆಯುವುದಿಲ್ಲ ಅನ್ನುವ ನಿರ್ಧಾರದ ಪರಿಣಾಮವಾಗಿ, ಮಕ್ಕಳು ಇಡೀ ದಿನ ಮನೆಯಲ್ಲಿಯೇ ಉಳಿಯುವಂತಾಗಿದೆ. ಇಷ್ಟು ದಿನ, ಮೊಬೈಲ್‌ ಮುಟ್ಟಬೇಡಿ ಎಂದು ಆದೇಶಿಸುತ್ತಿದ್ದ ಪೋಷಕರು, ಇದೀಗ ಆನ್‌ಲೈನ್‌ ಕ್ಲಾಸ್‌ ನಡೆಯಲಿದೆ ಎಂಬ ಕಾರಣಕ್ಕೆ ತಾವೇ ಮುಂದಾಗಿ ಮಕ್ಕಳಿಗೆ ಮೊಬೈಲ್‌ ಕೊಡಬೇಕಾಗಿದೆ.

ಇದು ಸಂಪೂರ್ಣವಾಗಿ ಹೊಸ ರೀತಿಯ ಕಲಿಕೆ ಹಾಗೂ ಜೀವನಶೈಲಿ ಎನ್ನುವುದು ನಿರ್ವಿವಾದ. ಕೋವಿಡ್‌ ಕಾರಣದಿಂದಾಗಿ ಶಿಕ್ಷಣ ಹಾಗೂ ಸಾಮಾಜಿಕ ಸ್ತರದಲ್ಲಿ ಎದುರಾಗಿರುವ ಈ ಅಗಾಧ ಬದಲಾವಣೆಯ ನಿಜ ಪರಿಣಾಮವನ್ನು, ಆ ಪರಿಣಾಮದ ವ್ಯಾಪ್ತಿಯನ್ನು ಅಳೆಯುವಲ್ಲಿ ಇನ್ನೂ ಸಮಯ ಹಿಡಿಯಲಿದೆಯಾದರೂ, ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ.

ಯಾವುದೇ ಬದಲಾವಣೆಯೂ ಆರಂಭಿಕ ಸಮಯದಲ್ಲಿ ಕಷ್ಟಕರವಾಗಿಯೇ ಇರುತ್ತದೆ. ಅದು ತನ್ನೊಂದಿಗೆ ಹೊಸ ಸವಾಲುಗಳನ್ನೂ ಹೊತ್ತು ತರುತ್ತದೆ. ಈಗ ಮಕ್ಕಳು ಮನೆ ಯಲ್ಲೇ ಇರುವುದರಿಂದ ದಿನಗಳೆಯುವುದೂ ಅವರಿಗೆ ಸಮಸ್ಯೆಯಾಗಿದೆ. ಹೆಚ್ಚಿನ ಮಕ್ಕಳು, ಆನ್‌ ಲೈನ್‌ ತರಗತಿಯ ಕಾರಣಕ್ಕೆ ಈಗ ಸ್ವಂತ ಮೊಬೈಲ್‌ ಹೊಂದಿದ್ದಾರೆ. ಮಾತ್ರವಲ್ಲ; ಮೊಬೈಲ್‌ಗೆ ಇನ್ನಿಲ್ಲದಂತೆ ಅಂಟಿಕೊಳ್ಳಲಾರಂಭಿಸಿದ್ದಾರೆ ಎನ್ನುವುದು ಬಹುತೇಕ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅವರ ನಿದ್ರೆಯ ಅವಧಿಯಲ್ಲಿ, ಭಾವನೆಗಳಲ್ಲಿ ಏರುಪೇರಾಗುತ್ತಿದೆ ಎನ್ನುತ್ತಾರೆ ಪರಿಣತರು. 24 ಗಂಟೆಯೂ ಮನೆಯಲ್ಲೇ ಇರಬೇಕಾದ್ದರಿಂದ, ಒಂಟಿತನ, ಖನ್ನತೆಯ ಲಕ್ಷಣಗಳೂ ಅವರನ್ನು ಕಾಡುತ್ತಿವೆ. ಹಾಗಂತ, ಮಕ್ಕಳಿಂದ ಮೊಬೈಲ್‌ ಕಿತ್ತುಕೊಳ್ಳುವ ಅಥವಾ ಅವರನ್ನು ಶಿಕ್ಷಿಸುವ ಅಗತ್ಯವಿಲ್ಲ. ಮೊಬೈಲ್‌ ಬಳೆಕೆಯಲ್ಲಿ ಮಿತಿಯಿರಲಿ ಎಂಬುದನ್ನು ಅವರಿಗೆ ಅರ್ಥವಾಗುವ ಹಾಗೆ ಸೌಮ್ಯ ಮಾತುಗಳಲ್ಲಿ ಹೇಳಬೇಕು. ಇನ್ನೂ ಪೋಷಕರಿಗೂ ಸಹ ಮಕ್ಕಳ ಜತೆಗೆ ಸಮಯ ಕಳೆಯುವ ಅಪೂರ್ವ ಅವಕಾಶವೀಗ ಸಿಕ್ಕಿದೆ. ಬಿಡುವು ಸಿಕ್ಕಾಗೆಲ್ಲ ಮಕ್ಕಳೊಂದಿಗೆ ಮಾತುಕತೆಯ ಮೂಲಕ ಅವರ ಆತಂಕ, ಅನುಮಾನಗಳನ್ನು ಪರಿಹರಿಸಲು ಶ್ರಮಿಸುವಂತಾಗಲಿ.

ಹಳ್ಳಿಗಳಲ್ಲಿ ಇರುವ ಮಕ್ಕಳಿಗೇನೋ ಆಟವಾಡಲು ಸ್ಥಳಾವಕಾಶವಿರುತ್ತದೆ. ಆದರೆ ನಗರಗಳಲ್ಲಿ ಇರುವ ಮಕ್ಕಳಿಗೆ ಅಂಥ ಅವಕಾಶ ಸಿಗದೇ ಅವರು ಮೊಬೈಲ್‌ ದಾಸರಾಗಿಬಿಡುವ ಅಪಾಯ ಹೆಚ್ಚಾಗಿದೆ. ಈ ಸೂಕ್ಷ¾ವನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಮನೆಯಲ್ಲಿಯೇ ಇರುವ ಸಂದರ್ಭದಲ್ಲಿ ದಿನದ ವೇಳಾಪಟ್ಟಿ ಹೇಗಿದ್ದರೆ ಚೆಂದ ಎಂದು ( ಮಕ್ಕಳಿಂದಲೇ ಅಂಥದೊಂದು ಪಟ್ಟಿ ರೆಡಿ ಮಾಡಿಸುವುದು ಜಾಣತನ) ಒಂದು ಪಟ್ಟಿ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಈ ಬದಲಾವಣೆಯ ಅನಿವಾರ್ಯತೆಯನ್ನು ಅವರಿಗೆ ಮನದಟ್ಟು ಮಾಡಿಸುವುದಕ್ಕೆ ಗಮನ ಕೊಡುವುದು ಮುಖ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next