Advertisement
ಮಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಪ್ರಾರಂಭವಾಗಿ ದಿನಗಳು ಕಳೆದಿದ್ದರೂ, ಗುತ್ತಿಗೆ ಆಧಾರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲಿಯವರೆಗೆ ಯಾವುದೇ ರೀತಿಯ ಆದೇಶ ಬಂದಿಲ್ಲ. ಹೀಗಾಗಿ, ರಾಜ್ಯದಲ್ಲಿರುವ ಸುಮಾರು 14,635ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ನೌಕರಿಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 2,100 ಖಾಯಂ ಉಪನ್ಯಾಸಕರನ್ನು ಈಗಾಗಲೇ ನೇಮಿಸಿದ್ದು, ಅವರೆಲ್ಲ ವಾರದಲ್ಲಿ 16 ಗಂಟೆ ಪಾಠ ಮಾಡಬೇಕು. ಇದರಿಂದ ಎರಡು ಅತಿಥಿ ಉಪನ್ಯಾಸಕ ಕೆಲಸ ಕೈತಪ್ಪಿ ಹೋಗಿದ್ದು, ಆ ಮೂಲಕ ಸುಮಾರು 4,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಹುದ್ದೆಗೆ ಕತ್ತರಿ ಬಿದ್ದಿದೆ.
ಸಾಮಾನ್ಯವಾಗಿ, ಕಾಲೇಜು ಪ್ರಾರಂಭವಾಗುವಾಗಲೇ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಇಲಾಖೆಯಿಂದ ಆದೇಶ ಪ್ರತಿ ರವಾನೆಯಾದರೂ, ಒಂದು ತಿಂಗಳ ನಂತರ ಆದೇಶ ಪ್ರತಿ ಕೈ ಸೇರುತ್ತದೆೆ. ಇನ್ನು, ಕೆಲವು ಕಡೆ ಅತಿಥಿ ಉಪನ್ಯಾಸಕರು ಕಾಲೇಜು ಪ್ರಾಂಶುಪಾಲರ ಒತ್ತಾಯಕ್ಕೆ, ಇನ್ನೂ ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಆದೇಶ ಕೈಸೇರುವುದಕ್ಕೂ ಮೊದಲೇ ಕೆಲಸಕ್ಕೆ ಹಾಜರಾಗುತ್ತಾರೆೆ. ಆದರೆ, ವೇತನ ದೊರೆಯುವುದು ಆದೇಶ ಪ್ರತಿ ಕೈಸೇರಿದ ಬಳಿಕ. ಹೀಗಾಗಿ, ಅನೇಕ ಉಪನ್ಯಾಸಕರು ಸಂಬಳವಿಲ್ಲದೆ ಕೆಲಸ ಮಾಡುವ ಅನಿವಾರ್ಯತೆಯೂ ಇದೆ. ಗಮನಾರ್ಹವೆಂದರೆ, ರಾಜ್ಯದಲ್ಲಿ 17 ವಿವಿಗಳಿದ್ದು, ಯಾವ ವಿವಿ ವ್ಯಾಪ್ತಿಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಆದೇಶ ಪ್ರತಿ ದೊರಕಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾನ್ಪಡೆ ತಿಳಿಸಿದ್ದಾರೆ.
Related Articles
ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಒಟ್ಟು 19 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಸುಮಾರು 641 ಅತಿಥಿ ಉಪನ್ಯಾಸಕರು ಈ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2013ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಲಾಗುತ್ತಿದೆ. ಮಂಗಳೂರು ವಿ.ವಿ. ವ್ಯಾಪ್ತಿ ಕಾಲೇಜುಗಳು ಜೂ.12ರಂದು ಪ್ರಾರಂಭಗೊಂಡಿದ್ದರೂ, ಅತಿಥಿ ಉಪನ್ಯಾಸಕರಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಈವರೆಗೆ ಆದೇಶ ಬಂದಿಲ್ಲ. ಇನ್ನೊಂದೆಡೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಕೆಲಸ ಮಾಡಿದ್ದ ಅತಿಥಿ ಉಪನ್ಯಾಸಕರಿಗೆ ಇನ್ನೂ ಮಾರ್ಚ್ ಹಾಗೂ ಎಪ್ರಿಲ್ ತಿಂಗಳ ವೇತನವನ್ನು ನೀಡಿಲ್ಲ. ಈ ಹಿಂದೆ ಅತಿಥಿ ಉಪನ್ಯಾಸಕರಿಗೆ ಸರಕಾರದ ಖಜಾನೆ 1ರ ಮೂಲಕ ವೇತನ ಬಿಡುಗಡೆಯಾಗುತ್ತಿತ್ತು. ಆದರೆ, ಸರಕಾರ ಖಜಾನೆ 2ರ ಮೂಲಕ ವ್ಯವಸ್ಥೆ ಮಾಡಿದ ಬಳಿಕವೂ ವೇತನ ಸಮಸ್ಯೆ ಪ್ರತೀ ವರ್ಷದಂತೆ ಈ ವರ್ಷವೂ ತಪ್ಪಿಲ್ಲ ಎಂದು ಅತಿಥಿ ಉಪನ್ಯಾಕರ ಸಂಘದ ಮಂಗಳೂರು ವಲಯಾಧ್ಯಕ್ಷ ಬಾಲಚಂದ್ರ ಹಾಗೂ ಕಾರ್ಯದರ್ಶಿ ಧೀರಜ್ ತಿಳಿಸಿದ್ದಾರೆ.
Advertisement
‘ಕೆಲಸ ಮುಂದುವರಿಸಲು ಆದೇಶ ಬರದ ಕಾರಣ ಅತಿಥಿ ಉಪನ್ಯಾಸಕರು ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದಾರೆ. ಅತಿಥಿ ಉಪನ್ಯಾಸಕರು ನೆಟ್ ಅಥವಾ ಕೆ-ಸೆಟ್ ಪಾಸ್ ಆಗಿರಬೇಕು ಎಂಬ ನಿಯಮವೊಡ್ಡಿ ಕೆಲಸ ಕಳೆದುಕೊಳ್ಳುವಂತೆ ಮಾಡುವುದು ಸರಿಯಲ್ಲ. ಸರಕಾರ ಖಾಯಂ ಉಪನ್ಯಾಸಕರನ್ನು ನೇಮಿಸುವುದರಿಂದ ಅದರ ಎರಡು ಪಟ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರ ಪ್ರತಿ ಬಾರಿ ಕರ್ತವ್ಯಕ್ಕೆ ಸೇರ್ಪಡೆಯಾಗಲು ದೊರೆಯುವ ಆದೇಶ ಹಾಗೂ ವೇತನ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು’– ಲೋಕೇಶ್ ಸೇಡಿಯಾಪು, ರಾಜ್ಯ ಕಾರ್ಯದರ್ಶಿ, ಅತಿಥಿ ಉಪನ್ಯಾಕರ ಸಂಘ ಉಪನ್ಯಾಸಕರು ಆತಂಕ ಪಡಬೇಕಾಗಿಲ್ಲ
‘ಕಾಲೇಜು ಪ್ರಾರಂಭವಾಗಿದ್ದು, ಅತಿಥಿ ಉಪನ್ಯಾಸಕರಲ್ಲಿ ಶೇ.60-70 ಮಂದಿ ಸೇವೆಯಲ್ಲಿ ಮುಂದುವರಿಯುತ್ತಾರೆೆ. ಉಳಿದವರಿಗೆ ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿಯೇ ಅವಕಾಶ ದೊರೆಯುತ್ತದೆ ಎನ್ನಲು ಸಾಧ್ಯವಿಲ್ಲ. ಇದರಿಂದಾಗಿ, ಪುತ್ತೂರಿನಲ್ಲಿದ್ದವರು ಕೂಡ ಮಂಗಳೂರಿಗೆ ಹೋಗಬೇಕಾಗಬಹುದು. ಪ್ರಸ್ತುತ ವಿಶ್ವವಿದ್ಯಾನಿಲಯದ ಕ್ಯಾಲೆಂಡರ್ ಪ್ರಕಾರ ಯಾವುದೇ ಕಾಲೇಜಿನಲ್ಲಿ ಉಳಿಯುವವರಿಗೆ 11,000 ರೂ. ತಿಂಗಳಿಗೆ ದೊರೆಯುತ್ತದೆ. ಉಳಿದವರಿಗೆ ಸಿಡಿಸಿ ನಿಯಮದ ಪ್ರಕಾರ, ಕನಿಷ್ಠ 4,000ರೂ. ದೊರೆಯುತ್ತದೆ. ಹೀಗಾಗಿ, ಅತಿಥಿ ಉಪನ್ಯಾಸಕರು ಆತಂಕಪಡುವ ಅಗತ್ಯವಿಲ್ಲ’.
– ಉದಯಶಂಕರ್, ಶಿಕ್ಷಣ ಇಲಾಖೆ, ಜಂಟಿ ನಿರ್ದೇಶಕರು ಮಂಗಳೂರು ವಿಭಾಗ – ಭರತ್‌ರಾಜ್ ಕಲ್ಲಡ್ಕ