ಕಲಾದಗಿ: ಮೂರು ತಾಲೂಕಿನ ಮೂವತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಲಾದಗಿ ಕಾತರಕಿ ಬ್ರಿಜ್ ಕಂ ಬ್ಯಾರೇಜ್ ರಸ್ತೆಗೆ ರಕ್ಷಣಾ ಬ್ಯಾರಿಕೇಡ್ ಅಳವಡಿಸದೇ ಇರುವುದರಿಂದ ವಾಹನ ಸವಾರರು ನಿತ್ಯವೂ ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.
ಬಾಗಲಕೋಟೆ, ಬೀಳಗಿ, ಮುಧೋಳ ತಾಲೂಕಿನ ಹಲವು ಹಳ್ಳಿಗಳಿಗೆ ಸನಿಹ ಸಂಪರ್ಕ ರಸ್ತೆ ಕಲಾದಗಿ ಕಾತರಕಿ ಬ್ರಿಜ್ ಕಂ ಬ್ಯಾರೇಜ್ ರಸ್ತೆ ರೈತರಿಗೆ ವ್ಯಾಪಾರಸ್ಥರಿಗೆ ಉಪಯೋಗಿ ಸಂಚಾರ ರಸ್ತೆಯಾಗಿದೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಬ್ಯಾರೇಜ್ ಬಳಿಯ ಬಾಗಲಕೋಟೆ ತಾಲೂಕಿನ ಭಾಗದ ಮಣ್ಣು ಏರು ರಸ್ತೆಗೆ ಎರಡೂ ಕಡೆ ರಕ್ಷಣಾ ಬ್ಯಾರಿಕೇಡ್ ಇಲ್ಲ.
ಸವಾರರ ಆಕ್ರೋಶ: ಕಳೆದ ಆಗಸ್ಟ್ ಮೊದಲ ವಾರದಲ್ಲಿ ಉಂಟಾದ ನದಿಯ ಮಹಾಪ್ರವಾಹಕ್ಕೆ ಬ್ಯಾರೇಜ್ ಬಳಿಯ 200 ಮೀಟರ್ ರಸ್ತೆ ಸಮೇತ ಹಿಂದೆ ಅಳವಡಿಸಿದ್ದ ಕ್ರಾಸ್ ಬೇರಿಯರ್ ಕಿತ್ತು ಹೋಗಿದ್ದವು. ಪ್ರವಾಹ ಅಬ್ಬರ ಕಡಿಮೆಯಾದ ನಂತರ ತುರ್ತು ಕಾಮಗಾರಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು, ಸಂಚಾರ ರಸ್ತೆ ನಿರ್ಮಿಸಿ ವರ್ಷ ಕಳೆದರೂ ಇನ್ನೂ ಏರು ರಸ್ತೆಗೆ ಡಾಂಬರೀಕರಣ ಮಾಡಿಲ್ಲ,ಜೊತೆಗೆ ಸುರಕ್ಷತಾ ದೃಷ್ಟಿಯಿಂದ ಕ್ರಾಸ್ ಬ್ಯಾರಿಯರ್ ಜೋಡಣೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
15 ಅಡಿ ಆಳ: ಬ್ಯಾರೇಜ್ ಬಳಿ ಮಣ್ಣು ಏರು ರಸ್ತೆಯಲ್ಲಿ ನಿರ್ಮಿಸಲಾಗಿದೆ, ಎರಡೂ ಕಡೆ ಹದಿನೈದು ಅಡಿಯಿಂದ ಇಪ್ಪತ್ತು ಅಡಿ ಆಳ ಹೊಂದಿದೆ. ವಾಹನ ಸವಾರರು ಎಚ್ಚರ ತಪ್ಪಿದರೆ ಅನಾಹುತ ಖಚಿತ ಎಂಬಂತಾಗಿದೆ. ಹಳ್ಳಿಗಳ ಸನಿಹ ಸಂಪರ್ಕಕ್ಕೆ ಪ್ರಮುಖ ರಸ್ತೆಯಾಗಿರುವ ಈ ರಸ್ತೆ ಕೂಡಲೇ ಡಾಂಬರೀಕರಣ ಮತ್ತು ರಸ್ತೆ ಎರಡು ಬದಿ ಕ್ರಾಸ್ ಬ್ಯಾರಿಯರ್ ಜೋಡಣೆ ಮಾಡಬೇಕೆಂದು ವಾಹನ ಸವಾರರು, ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ಯಾರೇಜ್ ಬಳಿ ರಸ್ತೆಯ ಎರಡೂ ಬದಿ 20 ಅಡಿ ಆಳದ ತೆಗ್ಗುಗಳಿವೆ. ಸುರಕ್ಷತಾ ದೃಷ್ಟಿಯಿಂದ ಕ್ರಾಸ್ ಬ್ಯಾರಿಯರ್ ಅಳವಡಿಸಲಿ ಹಾಗೂ ರಸ್ತೆಗೆ ಡಾಂಬರೀಕರಣ ಮಾಡಬೇಕು. –
ಬಸವರಾಜ ಬಿಲಕೇರಿ, ಅಂಕಲಗಿ ಗ್ರಾಮಸ್ಥ
ಕಲಾದಗಿ ಕಾತರಕಿ ಬ್ರಿಜ್ ಕಂ ಬ್ಯಾರೇಜ್ ಬಳಿಯ ರಸ್ತೆಗೆ ಸೈಡ್ ಕ್ರಾಸ್ ಬೇರಿಯರ್, ಪಿಚ್ಚಂಗಿ ಹಚ್ಚಿಕೊಳ್ಳುವಿಕೆ, ಡಾಂಬರೀಕರಣ ಕಾಮಗಾರಿಗೆ ಹಣಕಾಸು ಇಲಾಖೆಯ ಅನುಮೋದನೆ ದೊರೆಯದೆ ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ.
– ರವೀಂದ ಕುಂಬಾರ, ಎಇಇ, ಸಣ್ಣ ನೀರಾವರಿ ಇಲಾಖೆ ಬಾಗಲಕೋಟೆ.