ಬೆಂಗಳೂರು: ಸಿಎಂ, ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಪದೇ ಪದೆ ಬಹಿರಂಗ ಹೇಳಿಕೆ ನೀಡುತ್ತಿರುವ ಪಕ್ಷದ ಶಾಸಕರು ಹಾಗೂ ಸಚಿವರಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದಾರೆ.
ಈ ವಿಷಯದಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಮಾತನಾಡುವ ವರಿಗೆ ನೋಟಿಸ್ ಕೊಟ್ಟು ಶಿಸ್ತು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದಿದ್ದಾರಲ್ಲದೆ ಪಕ್ಷದ ಹಿತ ದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ ಎಂದು ಹೇಳಿದ್ದಾರೆ.
ಮಾಜಿ ಸಂಸದ ಡಿ.ಕೆ. ಸುರೇಶ್ ಕೂಡ ಇದೇ ವಿಷಯವಾಗಿ ಮಾತನಾಡಿದ್ದು, ಕಾಂಗ್ರೆಸ್ ಮೇಲೆ ಗೌರವ ಇಟ್ಟು ಜನರು ಅಧಿಕಾರ ಕೊಟ್ಟಿದ್ದಾರೆ.
ಈ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವವರು ಅಧಿಕಾರ ಕೊಟ್ಟಿರುವ ಜನತೆಯನ್ನು ಗೌರವಿಸಿ ಆಡಳಿತ ನಡೆಸಿ, ಇಲ್ಲವೇ ಚುನಾವಣೆ ಎದುರಿಸಿ ಎಂದಿದ್ದಾರೆ. ಆದರೆ ಸಚಿವ ಕೆ.ಎನ್. ರಾಜಣ್ಣ ಅವರು ಡಿಕೆಶಿಯವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಎಚ್ಚರಿಕೆ ಮಾತು ಕೇಳುವವನು ನಾನಲ್ಲ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ನೋಟಿಸ್ ಕೊಡಲಿ, ಉತ್ತರಿಸುವೆ ಎಂದು ಸವಾಲೆಸೆದಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಮಾತ್ರ ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವ ದಲ್ಲಿ ನಡೆದ ಚುನಾವಣ ಫಲಿತಾಂಶ ಕಳಪೆಯಾಗಿದೆ. ಈ ಬಗ್ಗೆ ಸತ್ಯಶೋಧನ ಸಮಿತಿ ವರದಿ ನೀಡಬೇಕು ಎಂದು ಆಗ್ರಹಿಸುವ ಮೂಲಕ ಸಿಎಂ ಮತ್ತು ಡಿಸಿಎಂ ಇಬ್ಬರ ಬದಲಾವಣೆಗೂ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಸತೀಶ್ ಜಾರಕಿ ಹೊಳಿ ಪ್ರತಿಕ್ರಿಯಿಸಿ, “ಮುಂದಿನ ನಾನೇ ಸಿಎಂ’ ಎಂದಿದ್ದು, ಇದಕ್ಕೆ ಶಾಸಕ ಆಸೀಫ್ ಸೇಟ್ ಧ್ವನಿಗೂಡಿಸಿದ್ದಾರೆ. ಸಾಲದ್ದಕ್ಕೆ ವಿಶ್ವ ಒಕ್ಕಲಿಗರ ಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಈಡಿಗ ಸಮುದಾಯದ ಶ್ರೀ ಪ್ರಣವಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಸಮುದಾಯದ ಶ್ರೀಶೈಲ ಜಗದ್ಗುರು, ರಂಭಾಪುರಿ ಶ್ರೀಗಳು ತಂತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.
ಡಿಕೆಶಿ ಹೇಳಿದ್ದೇನು?
ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗಷ್ಟೇ ಗೊತ್ತು. ಪಕ್ಷಕ್ಕೆ ಶಿಸ್ತು ಮುಖ್ಯ. ಸಿಎಂ, ಡಿಸಿಎಂ ವಿಚಾರದಲ್ಲಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ನೋಟಿಸ್ ಕೊಡಬೇಕಾಗುತ್ತದೆ. ಹಾಗಾಗಿ ಬಹಿರಂಗ ಹೇಳಿಕೆ ನೀಡುವವರು ಶಿಸ್ತು ಕ್ರಮಕ್ಕೆ ಸಿದ್ಧರಾಗಿ ಎಂದು ಡಿಕೆಶಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಪಕ್ಷದ ಹಿತದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕೆಂದು ನಾನು, ಸಿಎಂ ಮತ್ತು ಎಐಸಿಸಿ ಅಧ್ಯಕ್ಷರು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಸಚಿವರು, ಶಾಸಕರು, ಸ್ವಾಮೀಜಿಗಳು ಮಾತನಾಡುವ ಅಗತ್ಯ ಇಲ್ಲ. ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ ಆಗಿಲ್ಲ ಎಂದರು.