ನವದೆಹಲಿ: ವಲಸೆ ಮತದಾರರಿಗೆ ಅನುಕೂಲವಾಗಲೆಂದು ಪ್ರಸ್ತಾಪಿಸಿದ್ದ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್‌ಗಳನ್ನು ಮುಂಬರಲಿರುವ ಚುನಾವಣೆಗಳಲ್ಲಿ ಬಳಕೆ ಮಾಡುವುದಿಲ್ಲ. ಅನಿವಾಸಿ ಭಾರತೀಯ ಮತದಾರರ ಬಳಕೆಗಾಗಿ ಇದನ್ನು ಪ್ರಸ್ತಾಪಿಸಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ಸ್ಪಷ್ಟಪಡಿಸಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ರೂಪದ ಪ್ರತಿಕ್ರಿಯೆಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪ ಕುರಿತು ಚರ್ಚೆಯಾಗಬೇಕು ಮತ್ತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಶುಕ್ರವಾರವೂ ಗದ್ದಲವೆಬ್ಬಿಸಿದ ಕಾರಣ, ಉಭಯ ಸದನಗಳ ಕಲಾಪ ಮುಂದೂಡಲ್ಪಟ್ಟಿತು.
ದೇಶದ ನಾಗರಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅದಾನಿ ಗ್ರೂಪ್ ವಿಚಾರವನ್ನು ಎಲ್ಲಾ ಪ್ರತಿಪಕ್ಷಗಳು ಒಗ್ಗಟ್ಟಾಗಿ ಚರ್ಚಿಸಲು ಬಯಸಿವೆ. ಆದರೆ, ಸರ್ಕಾರ ತಾನು ಮುಜುಗರಕ್ಕೀಡಾಗಬಹುದೆಂಬ ಭಯದಿಂದ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ.
-ಶಶಿ ತರೂರ್, ಕಾಂಗ್ರೆಸ್ ಸಂಸದ
ಅದಾನಿಗ್ರೂಪ್ ವಿಚಾರವಾಗಿ ಜಂಟಿ ಸಂಸದೀಯ ಸಮಿತಿಯ ತನಿಖೆ ಕೋರುವುದರಲ್ಲಿ ಅರ್ಥವಿಲ್ಲ. ಎಲ್‌ಐಸಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ತನ್ನ ಹೂಡಿಕೆಗಳ ಬಗ್ಗೆ ತಾನೇ ನಿರ್ಣಯ ತೆಗೆದುಕೊಂಡಿದೆ. ಇದಕ್ಕೂ ಸರ್ಕಾರಕ್ಕೂ ಸಂಬಂಧವೇನಿದೆ?
– ಮಹೇಶ್ ಜೇಠ್ಮಲಾನಿ, ಬಿಜೆಪಿ ಸಂಸದ