Advertisement
ರವಿವಾರ ಸಂಜೆಯಿಂದಲೇ ನಗರದಲ್ಲಿ ಸುರಿದ ಮಳೆಯಿಂದಾಗಿ ಮಂಗಳೂರಿನ ರಾ.ಹೆ.ಯು ಇದೇ ಪರಿಸ್ಥಿತಿ ಎದುರಿಸುವಂತಾಯಿತು. ಅಡ್ಯಾರ್ ನಿಂದ ಫರಂಗಿಪೇಟೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಸಮಸ್ಯೆ ಎದುರಿಸಿದರು. ನೀರಲ್ಲಿ ರಸ್ತೆಯೋ? ಅಥವಾ ರಸ್ತೆಯಲ್ಲಿ ನೀರೋ? ಎಂದು ಕೂಡ ಗೊತ್ತಾಗದಷ್ಟು ಮಳೆನೀರು ರಸ್ತೆಯಲ್ಲಿ ನಿಂತು ವಾಹನಸವಾರರು ಪರದಾಡುವಂತಾಯಿತು. ಕೊಡಕ್ಕಲ್, ಕಣ್ಣೂರು, ಅಡ್ಯಾರ್, ಅರ್ಕುಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಉಲ್ಬಣಗೊಂಡಿತ್ತು.
ಪ್ರತೀ ಮಳೆಗಾಲದಲ್ಲೂ ಈ ಹೆದ್ದಾರಿಯಲ್ಲಿ ಸಮಸ್ಯೆ ತಪ್ಪಿದ್ದಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯನ್ನು ರಾ.ಹೆ. ಪ್ರಾಧಿಕಾರ ಹಾಗೂ ಪಾಲಿಕೆ ಸಮನ್ವಯ ರೀತಿಯಲ್ಲಿ ಮಾಡದಿರುವುದರಿಂದ ಈ ಸಮಸ್ಯೆ ಕಾಣಿಸುತ್ತದೆ. ‘ಚರಂಡಿ ಕೆಲಸ ಅವರದ್ದು’ ಎಂದು ಪಾಲಿಕೆ, ‘ನಮ್ಮದಲ್ಲ ನಿಮ್ಮದು’ ಎಂದು ಹೆದ್ದಾರಿ ಇಲಾಖೆ ಬೆರಳು ತೋರಿಸಿದ ಪರಿಣಾಮ ಇಂದಿಗೂ ಈ ಸಮಸ್ಯೆ ಪರಿಹಾರವಾಗಿಲ್ಲ. ಇವರಿಬ್ಬರ ಸಮಸ್ಯೆಯಿಂದ ವಾಹನ ಸವಾರರು ನಿತ್ಯ ಮಳೆ ನೀರಿನ ಅಭಿಷೇಕದೊಂದಿಗೆ ಪ್ರಯಾಣಿಸಬೇಕಾಗಿದೆ. ರಸ್ತೆ ಹುಡುಕಾಡಿದ ಬಸ್ ಡ್ರೈವರ್!
ಮಳೆ ನೀರು ನಿಂತ ಕಾರಣ ಬಹುತೇಕ ದ್ವಿಚಕ್ರ ವಾಹನದವರಿಗಂತೂ ಇತರ ವಾಹನ ಸಂಚರಿಸುವಾಗ ಎರಚಿದ ಕೆಸರಿನ ಸ್ನಾನ ಅನಿವಾರ್ಯವಾಯಿತು. ಮಳೆ ನೀರು ಕಣ್ಣಿಗೆ ಬೀಳುತ್ತಿರುವಾಗ ಹೊಂಡಗಳ ಮಧ್ಯೆ ಸರಿ ರಸ್ತೆಯನ್ನು ಹುಡುಕಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಯಿತು. ಈ ಮಧ್ಯೆ, ಬಿ.ಸಿ.ರೋಡ್, ಪುತ್ತೂರು ಕಡೆಗೆ ಹೋಗಿ ಬರುವ ಬಸ್‌ಗಳು ಈ ರಸ್ತೆಯಲ್ಲಿ ಓಡಾಡಲು ಪರದಾಡಬೇಕಾಯಿತು. ಕೆಲವು ಡ್ರೈವರ್ ಗಳಂತು ಬಸ್ ನಲ್ಲಿ ತಮ್ಮ ಸೀಟ್ ನ ಸ್ವಲ್ಪ ಮುಂಭಾಗಕ್ಕೆ ಬಂದು ರಸ್ತೆಯನ್ನು ಹುಡುಕಾಡಿ ಸಂಚರಿಸುವ ಪ್ರಮೇಯ ಎದುರಾಯಿತು.
Related Articles
ಅಡ್ಯಾರ್ ಸಮೀಪ ಹೆದ್ದಾರಿಯಲ್ಲಿ ಮಳೆ ನೀರು ನಿಂತಿರುವುದನ್ನು ದೂರದಲ್ಲಿ ಗಮನಿಸದ ಕಾರೊಂದು ಒಮ್ಮೆಲೇ ಬಂದು ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಲ್ಲಿ ಬರುತ್ತಿದ್ದ ಮತ್ತೂಂದು ಕಾರು ನಡುವೆ ಅಪಘಾತವಾಗಿದೆ. ಮಳೆಗಾಲದ ಸಂದರ್ಭ ಇಂತಹ ಘಟನೆಗಳು ಎದುರಾಗುತ್ತಲೇ ಇದೆ. ಮಳೆ ನೀರು ಗಮನಿಸದೆ, ಡಿವೈಡರ್ ದಾಟಿ ವಾಹನವು ಪಕ್ಕದ ರಸ್ತೆಗೆ ಎಸೆಯಲ್ಪಟ್ಟ ಘಟನೆಯೂ ಈ ಹಿಂದೆ ಇಲ್ಲಿ ಸಂಭವಿಸಿದೆ.
Advertisement