ಅರಂತೋಡು – ಪಿಂಡಿಮನೆ – ಮಿತ್ತಡ್ಕ ರಸ್ತೆಯ ಅರಮನೆಗಾಯ (ಅರಮನೆಗಯ) ಬಳಿ ಬಲ್ನಾಡ್ ಹೊಳೆಗೆ ಸೇತುವೆ ಇಲ್ಲದೆ, 100ಕ್ಕೂ ಅಧಿಕ ಕುಟುಂಬಗಳು 6 ಕಿ.ಮೀ.ದೂರದ ರಸ್ತೆ ಸನಿಹದಲ್ಲಿದ್ದರೂ, ಮಳೆಗಾಲದಲ್ಲಿ 15 ಕಿ.ಮೀ. ಸುತ್ತಾಡ ಬೇಕಿದೆ. ಸ್ಥಳೀಯ ಜನಪ್ರತಿನಿಧಿಗಳಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಕೊಟ್ಟರೂ ಹೊಸ ಸೇತುವೆ ನಿರ್ಮಾಣದ ಕನಸು ನನಸಾಗಿಲ್ಲ.
Advertisement
ತೂಗು ಸೇತುವೆಗೆ 20 ವರ್ಷಈ ತೂಗು ಸೇತುವೆ ನಿರ್ಮಾಣಗೊಂಡು 20 ವರ್ಷಗಳು ಕಳೆದಿವೆ. ಅರಂತೋಡು ಗ್ರಾ.ಪಂ. ವತಿಯಿಂದ ಅಡಿಕೆ ಮರ ಹಾಸಿದ, ಕಬ್ಬಿಣದ ರಾಡ್ ಅಳವಡಿಸಿ ಹೊಳೆ ದಾಟಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಬೇಸಗೆಯಲ್ಲಿ ಹೊಳೆಯೇ ರಸ್ತೆಯಾದರೆ, ಮಳೆಗಾಲದಲ್ಲಿ ತೂಗು ಸೇತುವೆಯೇ ಆಧಾರ. ಪ್ರತಿ ಬಾರಿ ಅಡಿಕೆ ಪಾಲ ಗೆದ್ದಲು ಹಿಡಿಯುತ್ತಿದೆ. ಸ್ಥಳೀಯರೇ ಸೇರಿ ಮತ್ತೆ ಜೋಡಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಜೋಡಣೆ ಸಂದರ್ಭದಲ್ಲಿ ಮೂವರು ಆಯತಪ್ಪಿ ಹೊಳೆಗೆ ಬಿದ್ದು, ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಈಗ ಕಬ್ಬಿಣದ ಸರಳುಗಳು ತುಕ್ಕು ಹಿಡಿದು, ಕಳಚಿಕೊಳ್ಳುವ ಸ್ಥಿತಿಯಲ್ಲಿವೆ.
ಬೇಸಗೆಯಲ್ಲಿ ಹೊಳೆ ದಾಟಲು ಬಳಕೆಯಾಗುವ ಮಣ್ಣಿನ ರಸ್ತೆ. ಸುತ್ತಾಟದ ಬದುಕು
ಅರಂತೋಡು ಮತ್ತು ಮರ್ಕಂಜ ವ್ಯಾಪ್ತಿಗೆ ಈ ತೂಗು ಸೇತುವೆ ಪ್ರಯೋಜನ ಕಾರಿ. ಪಿಂಡಿಮನೆ, ಮಾಟೆಕಾಯ, ಅಡ್ತಲೆ, ಬಳ್ಳಕಾನ, ಕುಧ್ಕುಳಿ, ಮಿತ್ತಡ್ಕ, ಚಿಮಾಡು ಮೊದಲಾದೆಡೆಯ 100ಕ್ಕೂ ಅಧಿಕ ಮನೆಗಳಿಗೆ ಸಮೀಪದ ದಾರಿಯಿದು. ಮಿತ್ತಡ್ಕ ಎಸ್‌ಸಿ ಕಾಲನಿ, ತೇರ್ಥಮಜಲಿನಲ್ಲಿ ಪ್ರೌಢಶಾಲೆ, ಮಿತ್ತಡ್ಕ, ಅಡ್ತಲೆಯಲ್ಲಿ ಪ್ರಾಥಮಿಕ ಶಾಲೆ ಇವೆ. ಮಳೆಗಾಲದಲ್ಲಿ ಗೋಳಿಯಡ್ಕ- ಮಿತ್ತಡ್ಕ 14 ಕಿ.ಮೀ. ಸುತ್ತು ಬಳಸಿ ಹೋಗಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
Related Articles
ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕೆಲ ಕುಟುಂಬಗಳು ಮಿತ್ತಡ್ಕ ಪ್ರದೇಶದಲ್ಲಿವೆ. ಈ ಜನರು ಗ್ರಾ.ಪಂ., ಪಡಿತರ ಸೌಲಭ್ಯಕ್ಕೆ ಅರಂತೋಡಿಗೆ ಬರಬೇಕು. ಮರ್ಕಂಜ ವ್ಯಾಪ್ತಿಗೆ ಸೇರಿದ ಮಿತ್ತಡ್ಕದಲ್ಲಿ ಸೊಸೈಟಿ ಇದೆ. ಅಲ್ಲಿಗೆ ಚಿಮಾಡು ಪ್ರದೇಶದ ನಿವಾಸಿಗಳು ಹೊಳೆ ದಾಟಿಯೇ ಹೋಗಬೇಕು. ಇಲ್ಲದಿದ್ದರೆ, ಸುತ್ತಾಟದ ರಸ್ತೆ ಕ್ರಮಿಸಬೇಕು. ಹಾಗಾಗಿ ಇಲ್ಲಿ 100 ರೂ. ಸಾಮಗ್ರಿ ಪಡೆದುಕೊಳ್ಳಲು, 200 ರೂ. ಮಿಕ್ಕಿ ಖರ್ಚು ಮಾಡಬೇಕು.
Advertisement
ಸೇತುವೆ ಬೇಡಿಕೆ
ಅರಮನೆಗಾಯದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿ ಎನ್ನುವುದು 25 ವರ್ಷಗಳಷ್ಟು ಹಿಂದಿನ ಬೇಡಿಕೆ. ಇದರಿಂದ ಮರ್ಕಂಜ, ಮಿತ್ತಡ್ಕ, ದೊಡ್ಡತೋಟ ಸಂಪರ್ಕ ಸಾಧ್ಯವಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಜಿ.ಪಂ. ಎಂಜಿನಿಯರ್ ಸೇತುವೆ ನಿರ್ಮಾಣದ ಸ್ಥಳ ಪರಿಶೀಲಿಸಿದ್ದರು. ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಬಳಿಕ ಸುದ್ದಿಯಿಲ್ಲ ಎನ್ನುತ್ತಾರೆ ಸ್ಥಳೀಯರು. 2011ರಲ್ಲಿ ಶಾಶ್ವತ ಸೇತುವೆ ನಿರ್ಮಿಸಿ ಎಂದು ಅರಂತೋಡು ಗ್ರಾ.ಪಂ. ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೂ ಸ್ಪಂದನೆ ಸಿಕ್ಕಿಲ್ಲ. ಪ್ರಸ್ತಾವನೆ ಸಲ್ಲಿಸಲಾಗಿದೆ
ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಗ್ರಾ.ಪಂ. ವತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ವರ್ಷ ನಿರ್ವಹಣೆಗೆ ಸಂಬಂಧಿಸಿ, ಅಧ್ಯಕ್ಷರ ಅಧಿಕಾರ ವ್ಯಾಪ್ತಿಯಲ್ಲಿ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿದರೆ 5,000 ರೂ. ತನಕ ಅನುದಾನ ನೀಡುವ ಅವಕಾಶ ಪಂಚಾಯತ್ ಗೆ ಇದೆ. ಅದಕ್ಕಿಂತ ಹೆಚ್ಚಿನ ಅನುದಾನ ಭರಿಸುವಂತಿಲ್ಲ.
– ಜಯಪ್ರಕಾಶ್ ಎಂ.ಆರ್., ಪಿಡಿಒ, ಅರಂತೋಡು ಗ್ರಾ.ಪಂ. ಮನವಿ ಸಲ್ಲಿಸಿ ಸಾಕಾಗಿದೆ
ಇದು ಇಂದು ನಿನ್ನೆಯ ಪಾಡಲ್ಲ. ಹಲವು ವರ್ಷಗಳ ದುಸ್ಥಿತಿ. ಮನವಿ ಸಲ್ಲಿಸಿ ಸಾಕಾಗಿದೆ. 6 ಕಿ.ಮೀ. ರಸ್ತೆ ಇದ್ದರೂ, ಸೇತುವೆ ಇಲ್ಲದೆ 15 ಕಿ.ಮೀ ಸುತ್ತಾಟ ನಡೆಸಬೇಕು. ಅಡಿಕೆ ಪಾಲ ಸೇತುವೆಗೆ ಮುಕ್ತಿ ನೀಡಿ, ವಾಹನ ಓಡಾಟಕ್ಕೆ ತಕ್ಕಂತೆ ಸುಸಜ್ಜಿತ ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆಗೆ ಸ್ಪಂದನೆ ಸಿಗಬೇಕು.
– ತೇಜಕುಮಾರ್ ಎಂ.ಕೆ., ಅರಮನೆಗಾಯ ನಿವಾಸಿ — ಕಿರಣ್ ಪ್ರಸಾದ್ ಕುಂಡಡ್ಕ