ವಿಜಯಪುರ: ಕ್ರೀಡೆಗೆ ಆದ್ಯತೆ ನೀಡಿದ ಜರ್ಮನ್ ಎಂಬ ಪುಟ್ಟ ರಾಷ್ಟ್ರ ಜಗತ್ತಿನ ಗಮನ ಸೆಳೆಯುತ್ತಿದೆ. ಅಲ್ಲಿ ಪ್ರತಿ ಹಳ್ಳಿಗಳಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳಿದ್ದು ನಿತ್ಯವೂ ಅಲ್ಲಿನ ಸಾಧಕರು ಬೆವರು ಹರಿಸುತ್ತಾರೆ. ಆದರೆ ಭಾರತ ಎಂಬ ದೊಡ್ಡ ರಾಷ್ಟ್ರದಲ್ಲಿ ಮಾತ್ರ ಕ್ರೀಡೆ ಕಡೆಗಣಿಸಲಾಗುತ್ತಿದೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ವಿಷಾದ ವ್ಯಕ್ತಪಡಿಸಿದರು.
ಸೋಮವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 13ನೇ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, ಭಾರತದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚು ಪ್ರಾಶಸ್ತ್ಯಸಿಗುತ್ತಿಲ್ಲ ಎಂದರು.
ಕ್ರೀಡಾಭಿವೃದ್ಧಿ ಹೆಸರಲ್ಲಿ ಸಂಸ್ಥೆಗಳನ್ನು ಹುಟ್ಟು ಹಾಕಿದರೆ ಸಾಲದು, ಸಕ್ರೀಯವಾಗಿ ನಿರಂತರ ಚಟುವಟಿಕೆ ನಡೆಸಿಕೊಂಡು ಹೋಗಬೇಕು. ಇದಕ್ಕಾಗಿ ವಿಶ್ವವಿದ್ಯಾಲಯಗಳು ಮತ್ತು ಸರಕಾರಗಳು ಗಮನ ಹರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಸಬಿಹಾ ಮಾತನಾಡಿ, ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟ ಯಶಸ್ವಿಯಾಗುವಲ್ಲಿ ನೀವೆಲ್ಲರೂ ಸ್ಫೂರ್ತಿಯಾಗುತ್ತೀರಿ ಎಂದು ವಿದ್ಯಾರ್ಥಿನಿಯರಿಗೆ ಹೇಳಿದರು.
ಸನ್ಮಾನ ಸ್ವೀಕರಿಸಿ ತಮ್ಮ ಕ್ರೀಡಾ ಜೀವನದ ಸೋಲು-ಗೆಲುವುಗಳ ಅನುಭವಗಳನ್ನು ಹಂಚಿಕೊಂಡ ಅಂತಾರಾಷ್ಟ್ರೀಯ ಕ್ರೀಡಾಪಟು ರೀನಾ ಜಾರ್ಜ್, ಸೋಲು ಗೆಲುವಿನ ಮೂಲಕ ಸ್ಪರ್ಧೆಗಳು ನಿಮ್ಮ ಜೀವನದಲ್ಲಿ ಸ್ಫೂ ರ್ತಿದಾಯಕವಾಗಲಿ ಎಂದು ಆಶಿಸಿದರು.
ವಿಶೇಷವಾಗಿ ಮಹಿಳಾ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಹಿಳಾ ಬ್ಯಾಂಡ್ ಸಾರಥ್ಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 31 ಮಹಿಳಾ ಕಾಲೇಜುಗಳ 227 ಕ್ರೀಡಾಪಟುಗಳು ಪಥಸಂಚಲನ ನಡೆಸಿದರು.
ಕುಲಸಚಿವ ಕೆ.ಪಿ. ಶ್ರೀನಾಥ, ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಎನ್.ಚಂದ್ರಪ್ಪ ವೇದಿಕೆಯಲ್ಲಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ| ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿದರು.
ಡಾ| ಡಿ.ಎಂ.ಜ್ಯೋತಿ ಪರಿಚಯಿಸಿದರು. ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಹನುಮಂತಯ್ಯ ಪೂಜಾರಿ, ಧಾರವಾಡದ ನಿವೃತ್ತ ಪ್ರಾಧ್ಯಾಪಕ ವಿ.ಎಚ್. ಕಲಡಗಿ ಮತ್ತು ಸಿಂದಗಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿ ಗೋಲಾ ನಿರೂಪಿಸಿದರು. ಡಾ|ಸಕ್ಪಾಲ ಹೂವಣ್ಣ ವಂದಿಸಿದರು.