Advertisement

ರಿಯಲ್‌ ವಾರಿಯರ್ಸ್‌ಗಿಲ್ಲ ಪಿಪಿಇ ಕಿಟ್‌!

01:07 PM May 02, 2020 | mahesh |

ಬೆಂಗಳೂರು: ಇವರು ಪರದೆಯ ಹಿಂದಿನ ರಿಯಲ್‌ ವಾರಿಯರ್. ನಿತ್ಯ ಇವರದ್ದು ರೋಗಿಗಳೊಂದಿಗೇ ಒಡನಾಟ. ಕರೆ ಬಂದ ತಕ್ಷಣ ಹಿಂದೆ-ಮುಂದೆ ನೋಡದೆ ಖುದ್ದು ಸ್ಥಳಕ್ಕೆ ಧಾವಿಸಿ, ರೋಗಿಯನ್ನು ಕರೆದುಕೊಂಡು ಸೂಚಿಸಿದ ಆಸ್ಪತ್ರೆ ದಾಖಲಿಸುತ್ತಾರೆ. ಆದರೆ, ಅವರಿಗೆ ಪಿಪಿಇ (ವೈಯಕ್ತಿಕ ಸೋಂಕು ರಕ್ಷಣಾ ಧರಿಸು) ಕಿಟ್‌ಗಳು ಸಮರ್ಪಕವಾಗಿಲ್ಲ.
– ಇದು ನಗರ ಸೇರಿದಂತೆ ವಿವಿಧೆಡೆ ಕಾರ್ಯ ನಿರ್ವ ಹಿಸುತ್ತಿರುವ ಖಾಸಗಿ ಆ್ಯಂಬುಲೆನ್ಸ್‌ ಚಾಲಕರ ಸ್ಥಿತಿ. ಕೊರೊನಾ ವೈರಸ್‌ ಹೊರತಾಗಿಯೂ ಖಾಸಗಿ ಕ್ಲಿನಿಕ್‌ಗಳಿಗೆ ಜ್ವರ, ಶೀತ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಪರಿಕ್ಷೆಗೆ ಕರೆದೊಯ್ಯು ವುದು, ತುರ್ತು ಪರಿಸ್ಥಿತಿಯ ಓಡಾಟ ಸೇರಿದಂತೆ ನಿತ್ಯ ಹತ್ತಾರು ಕರೆಗಳು ಖಾಸಗಿ ಆ್ಯಂಬುಲೆನ್ಸ್‌ ಚಾಲಕರಿಗೆ ಬರುತ್ತಿವೆ. ಕರೆಗಳಿಗೆ ಸ್ಪಂದಿಸಿ ಆಸ್ಪತ್ರೆಗೆ ಕರೆದೊಯ್ದ ರೋಗಿಗಳಿಗೆ ಕೊರೊನಾ ಸೋಂಕಿನ ಲಕ್ಷಣದಿಂದ ಕ್ವಾರಂಟೈನ್‌ ಆದ ಉದಾಹರಣೆಗಳಿವೆ. ಆದರೆ, ಆ್ಯಂಬುಲೆನ್ಸ್‌ ಚಾಲಕ, ನಿರ್ವಹಣಾ
ಸಿಬ್ಬಂದಿಗೆ ಕೋವಿಡ್‌-19 ಪಿಪಿಇ ಕಿಟ್‌ಗಳು ಲಭ್ಯವಿಲ್ಲ. ಬದಲಿಗೆ ಹೆರಿಗೆ ಕಿಟ್‌ ಅಥವಾ ಎಚ್‌ಐವಿ ಕಿಟ್‌ಗಳನ್ನು ಧರಿಸಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಪರಿಣಾಮ ಅವರೆಲ್ಲರಿಗೆ ಆತಂಕ ಎದುರಾಗಿದ್ದು. ಈ ಮಧ್ಯೆ ರೋಗಿಗಳು ಕರೆ ಮಾಡಿದರೆ ಸ್ಪಂದಿಸಲು ಹಿಂದೇಟು ಹಾಕುವಂತಾಗಿದೆ.

Advertisement

ಏನು ವ್ಯತ್ಯಾಸ?: ಗುಣಮಟ್ಟದ ಪಿಪಿಇ ಕಿಟ್‌ಗಳು 70 ಜಿಎಸ್‌ಎಂ (ಧರಿಸಿನ ದಪ್ಪ ಪ್ರಮಾಣ) ಇರುತ್ತದೆ. ಇದರ ಬೆಲೆ 700-750 ರೂ. ಆದರೆ, ಬೇಡಿಕೆ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ 2 ಸಾವಿರ ರೂ. ಕೊಟ್ಟರೂ ದೊರೆಯುತ್ತಿಲ್ಲ. ಹೆರಿಗೆ ಅಥವಾ ಎಚ್‌ಐವಿ ಕಿಟ್‌ಗಳು 40 ಜಿಎಸ್‌ಎಂನಿಂದ ಕೂಡಿರುತ್ತವೆ. ಇವುಗಳ ಬೆಲೆ 300ರಿಂದ 350 ರೂ. ಈ ಕಿಟ್‌ಗಳನ್ನು ಧರಿಸು
ವುದರಿಂದ ಕೊರೊನಾ ವೈರಸ್‌ನಿಂದ ರಕ್ಷಣೆ ದೊರೆಯುತ್ತದೆ ಎಂಬುದು ಅನುಮಾನ ಎಂದು ತಜ್ಞರು ಹೇಳುತ್ತಾರೆ. ಆದರೆ, ಆ್ಯಂಬುಲೆನ್ಸ್‌ ಚಾಲಕರು ಇದು ವರೆಗೆ ಈ ಮಾದರಿಯ ಕಿಟ್‌ಗಳನ್ನೇ ಬಳಸುತ್ತಿದ್ದಾರೆ. ನಗರದಲ್ಲಿ ಇಂಥ ಖಾಸಗಿ ಆ್ಯಂಬುಲೆನ್ಸ್‌ಗಳು ಸುಮಾರು 600-700 ಇದ್ದು, ಕೆಲವರು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ನಿತ್ಯ
ಇವರಿಗೆ 1-2 ಕರೆಗಳನ್ನು ಅಟೆಂಡ್‌ ಮಾಡಬೇಕು ಎಂಬ ಗುರಿ ನೀಡಲಾಗಿರುತ್ತದೆ. ಕೋವಿಡ್‌-1 ಸೋಂಕಿತರು ಅಥವಾ ಶಂಕಿತರ ನಿರ್ವಹಣೆ ಬಗ್ಗೆ ಯಾವುದೇ ತರಬೇತಿ ಕೂಡ ನೀಡಿರುವುದಿಲ್ಲ. ಇನ್ನು ಇವರಿಗೆ ಶುಚಿಯಾದ ಊಟ ದೊರೆಯುತ್ತಿಲ್ಲ. ಹೀಗೆ ಕೆಲಸ ಮುಗಿಸಿಕೊಂಡು ಬಂದ 10-15 ಚಾಲಕರಿಗೆ ಒಂದೇ ಕಡೆ ವಸತಿ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಕಳೆದ
ಒಂದು ತಿಂಗಳಿಂದ ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಆ್ಯಂಬುಲೆನ್ಸ್‌ ಚಾಲಕ ರೊಬ್ಬರು “ಉದಯವಾಣಿ’ಗೆ ತಿಳಿಸಿದರು. ಕುಷ್ಠರೋಗ ಆಸ್ಪತ್ರೆ, ಕೊಟ್ಟಿಗೆಪಾಳ್ಯ ಹತ್ತಿರದ ರಾಷ್ಟ್ರೀಯ ಯೂನಾನಿ ವೈದ್ಯಕೀಯ ಸಂಸ್ಥೆಯ ಆಸ್ಪತ್ರೆ ಸೇರಿದಂತೆ ನಗರದ ವಿವಿಧೆಡೆ  ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ರಜೆ ಸಿಕ್ಕರೂ ಮನೆಗೆ ತೆರಳಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ.

ಖಾಸಗಿ ಆ್ಯಂಬುಲೆನ್ಸ್‌ ಚಾಲಕರು

ನಾಲ್ಕೈದು ದಿನ ರಸ್ತೆಯಲ್ಲೇ!: ಕೋವಿಡ್ ಸೋಂಕು ಅಥವಾ ಶಂಕಿತರಿಗೆ ಸಂಬಂಧಿಸಿದ ಯಾವುದೇ ಕರೆಗಳನ್ನು ನಾವು ಈಗ ಕೋವಿಡ್‌-19 ನಿರ್ವಹಣೆ ಮಾಡುತ್ತಿರುವ ಆ್ಯಂಬುಲೆನ್ಸ್‌ಗಳಿಗೆ ವರ್ಗಾಯಿಸುತ್ತಿದ್ದೇವೆ. ಉಳಿದ ರೋಗಿಗಳು ಅಥವಾ ಮೃತದೇಹಗಳನ್ನು ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಲಾಗುತ್ತಿದೆ. ಆದರೆ, ಇದಕ್ಕೂ ಚೆಕ್‌ಪೋಸ್ಟ್‌ಗಳಲ್ಲಿ ಕಿರಿಕಿರಿ ಇದೆ ಎಂದು ಎಸ್‌ಆರ್‌ಎಸ್‌ ಆ್ಯಂಬುಲೆನ್ಸ್‌ನ ಸುಕೇಶ್‌ ತಿಳಿಸುತ್ತಾರೆ. “ಈಚೆಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ರೋಗಿಯೊಬ್ಬರು ಮೃತಪಟ್ಟಿದ್ದರು. ಆ ಪಾರ್ಥಿವ ಶರೀರವನ್ನು ಒರಿಸ್ಸಾಕ್ಕೆ ತೆಗೆದುಕೊಂಡು ಹೋಗಿದ್ದೆ. ವಾಪಸ್‌ ಬರುವಾಗ ಅಲ್ಲಿನ ಗಡಿಯಲ್ಲಿ ಪೊಲೀಸರು ತಡೆದರು. ಅಗತ್ಯ ದಾಖಲೆಗಳನ್ನು ತೋರಿಸಿದರೂ ಚೆಕ್‌ ಪೋಸ್ಟ್‌ಗಳಲ್ಲಿ ಮೂರು ದಿನ ಕಳೆಯಬೇಕಾಯಿತು. ಹಾಗಾಗಿ, ಬಾಡಿಗೆಗಳು ಬಂದರೂ ಹೋಗು ತ್ತಿಲ್ಲ’ ಎಂದು ಸುಕೇಶ್‌ ಬೇಸರ ವ್ಯಕ್ತಪಡಿಸಿದರು.

ಚಾಲಕರಿಗೆ ಸಿಗದ ವೇತನ ಬಡ್ತಿ
ಒಂದು ಆ್ಯಂಬುಲೆನ್ಸ್‌ನಲ್ಲಿ ಚಾಲಕ ಮತ್ತು ತುರ್ತು ವೈದ್ಯಕೀಯ ತಂತ್ರಜ್ಞ ಇರುತ್ತಾರೆ. ಇವರಿಬ್ಬರ ವೇತನ ಹೆಚ್ಚು-ಕಡಿಮೆ 10-13 ಸಾವಿರ ರೂ. ಇದೆ. 10-12 ವರ್ಷ ಸೇವೆ ಸಲ್ಲಿಸಿದವರಿಗೂ  12,600 ರೂ. ವೇತನ ನೀಡಲಾಗುತ್ತಿದೆ. ಎರಡು-ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇನ್ನು ಇಲ್ಲಿ ಕಾರ್ಯನಿರ್ವಹಿಸು ವವರು ಬಹುತೇಕ ಹೊರ ಜಿಲ್ಲೆಗಳಿಂದ ಬಂದವರೂ ಇದ್ದಾರೆ. ಅವರ ಜೀವನ ನಿರ್ವಹಣೆ ದುಸ್ತರವಾಗಿದೆ. “ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಬೇಡಿಕೆಗಳು ಈಡೇರಿಲ್ಲ. ವೇತನ ಬಡ್ತಿ ನೀಡುತ್ತಿಲ್ಲ. ಕೊಡುವ ವೇತನವೂ ನಿಯಮಿತವಾಗಿ ಕೊಡುತ್ತಿಲ್ಲ ಎಂದು ಆ್ಯಂಬುಲೆನ್ಸ್‌ ಚಾಲಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

Advertisement

“108′ ಸಿಬ್ಬಂದಿ ನಿಶ್ಚಿಂತ
ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಹೋಲಿಸಿದರೆ, ಸರ್ಕಾರದ “108 ಆ್ಯಂಬುಲೆನ್ಸ್‌’ ಸಿಬ್ಬಂದಿ ಸ್ಥಿತಿ ಉತ್ತಮವಾಗಿದೆ. ಪ್ರತಿಯೊಬ್ಬರಿಗೂ ಕೋವಿಡ್‌- 19 ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದ್ದು,
ರೋಗಿಗಗಳ ನಿರ್ವಹಣೆ ಬಗ್ಗೆ ತರಬೇತಿ ಕೂಡ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 711 ಜಿವಿಕೆ ಎಮರ್ಜನ್ಸಿ ಮ್ಯಾನೇಜ್‌ಮೆಂಟ್‌ ಆಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಇಎಂಆರ್‌ಐ)
ಆ್ಯಂಬುಲೆನ್ಸ್‌ಗಳಿದ್ದು, ಈ ಪೈಕಿ ಬೆಂಗಳೂರಿನ ವಿವಿಧೆಡೆ 74 ಕಾರ್ಯಾಚರಣೆ ಮಾಡುತ್ತಿವೆ. ಕೋವಿಡ್‌-19 ಪ್ರಕರಣಗಳಿಗಾಗಿಯೇ ರಾಜ್ಯಾದ್ಯಂತ 82 ಆ್ಯಂಬುಲೆನ್ಸ್‌ಗಳನ್ನು ಮೀಸಲಿಟ್ಟಿದ್ದು, 50 ಖಾಸಗಿ ಏಜೆನ್ಸಿಗಳಿಂದ ಬಾಡಿಗೆ ಪಡೆಯಲಾಗಿದೆ. ರೆಡ್‌ ಝೋನ್‌ನಲ್ಲಿ ಕಾರ್ಯನಿರ್ವಹಿಸುವ ಪ್ರತಿ ಆ್ಯಂಬುಲೆನ್ಸ್‌ಗೆ ತಲಾ 10 ಪಿಪಿಇ ಕಿಟ್‌ಗಳನ್ನು ನೀಡಲಾಗಿದೆ ಎಂದು ಜಿವಿಕೆ ಇಎಂಆರ್‌ಐ ರಾಜ್ಯ ಮುಖ್ಯಸ್ಥ ಆರ್‌.ಜಿ. ಹನುಮಂತ ಮಾಹಿತಿ ನೀಡಿದರು. ಆತಂಕವಿಲ್ಲದೆ ಕೆಲಸ: ಮಾ. 13ರಿಂದ ಈವರೆಗೆ 160-170 ಸೋಂಕಿತ ಮತ್ತು ಶಂಕಿತ ಪ್ರಕರಣಗಳನ್ನು ನಿರ್ವಹಣೆ ಮಾಡಿದ್ದೇನೆ. ಎಷ್ಟೋ ಸಲ ಶಂಕಿತ ಪ್ರಕರಣಗಳನ್ನು ನಾವು ಆಸ್ಪತ್ರೆಗೆ ದಾಖಲಿಸಿದ ನಂತರ, ಪಾಸಿಟಿವ್‌ ಬಂದಿರುತ್ತವೆ. ನಾವು ಪ್ರತಿ ಪ್ರಕರಣವನ್ನು ಮಾನಸಿಕವಾಗಿ
ಪಾಸಿಟಿವ್‌ ಎಂದು ಪರಿಗಣಿಸಿಯೇ ಅಟೆಂಡ್‌ ಮಾಡುತ್ತೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಆ್ಯಂಬುಲೆನ್ಸ್‌ನ ತುರ್ತು ವೈದ್ಯಕೀಯ ತಂತ್ರಜ್ಞ ರಮೇಶ್‌ ತಿಳಿಸುತ್ತಾರೆ.

● ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next