Advertisement

ವಿದ್ಯುತ್‌ ಕೊರತೆ ಇಲ್ಲ: ಆತಂಕ ಬೇಡ​​​​​​​

12:30 AM Mar 20, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬೇಡಿಕೆಯಷ್ಟು ವಿದ್ಯುತ್‌ ಪೂರೈಸಲಾಗುತ್ತಿದ್ದು, ವಿದ್ಯಾರ್ಥಿಗಳು ಸೇರಿ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಇಂಧನ ಇಲಾಖೆ ಅಭಯ ನೀಡಿದೆ.

Advertisement

ರಾಜ್ಯದಲ್ಲಿ ಸದ್ಯ ಸರಾಸರಿ 12,500 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಬೇಡಿಕೆಯಿದ್ದು, ಅಷ್ಟೇ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಬೆಂಗಳೂರು ಸೇರಿ ಹಲವೆಡೆ ಆಗಾಗ್ಗೆ ವಿದ್ಯುತ್‌ ವ್ಯತ್ಯಯ ಉಂಟಾಗುತ್ತಿದ್ದು, ಲೋಡ್‌ ಶೆಡ್ಡಿಂಗ್‌ ನ ಭೀತಿ ಸಾರ್ವಜನಿಕರಲ್ಲಿ ಎದುರಾಗಿದೆ. ಆದರೆ ತಾಂತ್ರಿಕ ಅಡಚಣೆ ಹಾಗೂ ದುರಸ್ತಿ ಇತರೆ ಕಾರಣಗಳಿಗೆ ತುಸು ವ್ಯತ್ಯಯವಾಗಿರುವುದು ಹೊರತುಪಡಿಸಿದರೆ ವಿದ್ಯುತ್‌ ಕಡಿತ ಮಾಡುತ್ತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ರಾಜ್ಯದ ಜಲವಿದ್ಯುತ್‌ ಮೂಲದಿಂದ 30 ದಶಲಕ್ಷ ಯೂನಿಟ್‌, ಉಷ್ಣ ವಿದ್ಯುತ್‌ ಸ್ಥಾವರಗಳಿಂದ 48 ದಶಲಕ್ಷ ಯೂನಿಟ್‌, ಕೇಂದ್ರ ಸರ್ಕಾರದ ಸ್ಥಾವರಗಳಿಂದ 68 ದಶಲಕ್ಷ ಯೂನಿಟ್‌ ಹಾಗೂ ನವೀಕರಿಸಬಹುದಾದ ಇಂಧನ ಮೂಲದಿಂದ ಸರಾಸರಿ 5,000 ಮೆಗಾವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿರುವುದರಿಂದ ಬೇಡಿಕೆಯಷ್ಟು ವಿದ್ಯುತ್‌ ಪೂರೈಕೆ ಸಾಧ್ಯವಾಗಿದೆ.

ಲಿಂಗನಮಕ್ಕಿ, ಮಾಣಿ ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನಗಳಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚುವರಿ ನೀರಿನ ಸಂಗ್ರಹವಿದೆ. ಸೂಪಾದಲ್ಲಿ ಕಳೆದ ವರ್ಷ ಇದೇ ದಿನಗಳಿಗೆ ಹೋಲಿಸಿದರೆ ಶೇ.5ರಷ್ಟು ಹೆಚ್ಚುವರಿ ನೀರಿನ ಸಂಗ್ರವಿದೆ ಎಂದು ಮೂಲಗಳು ಹೇಳಿವೆ.

ಬೇಸಿಗೆ ತಾಪಮಾನ ಏರುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ಗಳ ಬಳಕೆಯೂ ಹೆಚ್ಚಾಗುತ್ತಿದ್ದು, ಒಟ್ಟು ಬಳಕೆಯಲ್ಲಿ ಶೇ.35ರಷ್ಟು ವಿದ್ಯುತ್‌ ಕೃಷಿ ಪಂಪ್‌ಸೆಟ್‌ಗೆ ಬಳಕೆಯಾಗುತ್ತಿದೆ. ಕೃಷಿ ಪಂಪ್‌ಸೆಟ್‌ ಬಳಕೆಯಿಂದಾಗಿ 3 ಫೇಸ್‌ ವಿದ್ಯುತ್‌ ಪೂರೈಕೆ ಅವಧಿಯಲ್ಲಿ ಬದಲಾವಣೆಯಾಗಿದ್ದು, ಹಗಲು ಹೊತ್ತಿನಲ್ಲಿ 4 ತಾಸು ಹಾಗೂ ರಾತ್ರಿ ವೇಳೆ 3 ತಾಸು 3ಫೇಸ್‌ ವಿದ್ಯುತ್‌ ಪೂರೈಕೆಯಾಗುತ್ತಿದೆ. ಬೆಂಗಳೂರು ಸೇರಿ ಬೆಸ್ಕಾಂ ವ್ಯಾಪ್ತಿಯಲ್ಲಿ ಬೇಡಿಕೆ ಸರಾಸರಿ 5,500ರಿಂದ 6000 ಮೆಗಾವ್ಯಾಟ್‌ನಷ್ಟಿದ್ದು, ರಾಜ್ಯದ ಒಟ್ಟು ಬಳಕೆಯ ಶೇ.45ರಿಂದ ಶೇ. 50ರಷ್ಟು ವಿದ್ಯುತ್‌ ಬೆಸ್ಕಾಂ ವ್ಯಾಪ್ತಿಯಲ್ಲೇ ಬಳಕೆಯಾಗುತ್ತದೆ. ಬೆಂಗಳೂರು ಸೇರಿ ಎಲ್ಲಿಯೂ ವಿದ್ಯುತ್‌ ವ್ಯತ್ಯಯವಾಗದಂತೆ ಪರಿಸ್ಥಿತಿ ನಿಭಾಯಿಸಲಾಗುತ್ತಿದ್ದು,ಯಾವುದೇ ಭಾಗದಲ್ಲೂ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ. ನಿತ್ಯ ಸರಾಸರಿ ಹಂಚಿಕೆಯಾಗುವ ವಿದ್ಯುತ್‌ಗಿಂತಲೂ ಬಳಕೆ ಪ್ರಮಾಣ ಕಡಿಮೆ ಇದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

Advertisement

ಬೇಡಿಕೆಯಷ್ಟು ವಿದ್ಯುತ್‌ ಪೂರೈಕೆ
ರಾಜ್ಯದಲ್ಲಿ ನಿತ್ಯ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆಯಾಗುತ್ತಿದೆ. ಉಷ್ಣ ಸ್ಥಾವರಗಳು ಸೇರಿ ಇತರೆ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ. ಬೇಸಿಗೆ ಮುಗಿಯುವವರೆಗೆ ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ.
– ಪಿ.ರವಿಕುಮಾರ್‌, ಇಂಧನ ಇಲಾಖೆ
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ವಿದ್ಯಾರ್ಥಿಗಳು- ಜನತೆ ಆತಂಕಪಡುವ ಅಗತ್ಯವಿಲ್ಲ
ರಾಜ್ಯದಲ್ಲಿ ಬೇಡಿಕೆಯಷ್ಟು ವಿದ್ಯುತ್‌ ಪೂರೈಸಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಜನತೆ ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ.ಇನ್ನೂ 1000 ಮೆಗಾವ್ಯಾಟ್‌ನಷ್ಟು ಹೆಚ್ಚುವರಿ ವಿದ್ಯುತ್‌ ಉತ್ಪಾದನೆಗೆ ಅವಕಾಶವಿದ್ದು, ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಕೃಷಿ ಪಂಪ್‌ ಸೆಟ್‌ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಗಲು ಹೊತ್ತಿನಲ್ಲಿ 4 ತಾಸು ಹಾಗೂ ರಾತ್ರಿ ವೇಳೆ 3 ತಾಸು 3ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ಬೇಸಿಗೆಯಲ್ಲಿ ಸಮರ್ಪಕವಾಗಿ ವಿದ್ಯುತ್‌ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
– ಎಸ್‌. ಸೆಲ್ವ ಕುಮಾರ್‌, ಕೆಪಿಟಿಸಿಎಲ್‌ ವ್ಯವಸ್ಥಾಪಕ
ನಿರ್ದೇಶಕರು, ಮುಖ್ಯಮಂತ್ರಿಗಳ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next