Advertisement
ವೇಣೂರು: ಮಳೆಗಾಲದಲ್ಲಿ ಗಾಳಿ, ಸಿಡಿಲಿಗೆ ವಿದ್ಯುತ್ ಸಮಸ್ಯೆ ಕಂಡುಬಂದರೆ ಬೇಸಗೆ ಕಾಲದಲ್ಲಿ ಜಲಾಶಯಗಳಲ್ಲಿ ನೀರಿನ ಅಭಾವದಿಂದ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಸಾಮಾನ್ಯ. ಹೀಗೆ ಗ್ರಾಮೀಣ ಭಾಗಗಳಲ್ಲಿ ನಿತ್ಯವೂ ನಡೆಯುವ ಪವರ್‌ಕಟ್, ಲೈನ್‌ಫಾಲ್ಟ್ ಮೊದಲಾದ ವಿದ್ಯುತ್ ಸಮಸ್ಯೆಗೆ ಶಾಶ್ವತವಾಗಿ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ ದಿನದ 24 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಿದೆ. ಈ ಯೋಜನೆಯನ್ವಯ ಪ್ರತಿಗ್ರಾಮಕ್ಕೆ ಗರಿಷ್ಠ 40 ಲ.ರೂ. ವೆಚ್ಚದಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಅಗತ್ಯ ಇರುವ ಎಲ್ಲ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮಾದರಿ ವಿದ್ಯುತ್ ಗ್ರಾಮಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಮಾದರಿ ವಿದ್ಯುತ್ ಗ್ರಾಮ ಯೋಜನೆ ಅನುಷ್ಠಾನಕ್ಕೆ ಗುರಿ ಇರಿಸಲಾಗಿದೆ.
ಮೊದಲ ಹಂತದಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 5 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಮೂರು ಹೋಬಳಿಯ 5 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ವೇಣೂರು ಹೋಬಳಿಯ ಹೊಸಂಗಡಿ ಹಾಗೂ ನಾರಾವಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಬೆಳ್ತಂಗಡಿ ಹೋಬಳಿಗೆ ಸಂಬಂಧಿಸಿ ಉಜಿರೆ, ಕೊಕ್ಕಡ ಹಾಗೂ ತಣ್ಣೀರುಪಂಥ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಹೊಸಂಗಡಿ ಗ್ರಾಮ ಪಂಚಾಯತ್
ರಾಜ್ಯ ಹೆದ್ದಾರಿ 70ರ ವೇಣೂರಿನಿಂದ ಮೂಡಬಿದಿರೆಗೆ ಹಾದುಹೋಗುವ ವೇಣೂರಿನಿಂದ 8. ಕಿ.ಮೀ. ದೂರದಲ್ಲಿ ಹೊಸಂಗಡಿ ಗ್ರಾಮವಿದೆ. ಬೆಳ್ತಂಗಡಿ ತಾಲೂಕು ಕೇಂದ್ರದ ಕೊನೆಯ ಗ್ರಾಮ ಇದಾಗಿದೆ. ಇದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಗ್ರಾಮ. 2005ರಲ್ಲಿ ಗ್ರಾಮದಲ್ಲಿ ಆರಂಭವಾದ ಸಂಪೂರ್ಣ ಸ್ವಚ್ಛತಾ ಆಂದೋಲನ ಈ ಗ್ರಾಮದ ಯಶೋಗಾಥೆಗೆ ಪ್ರೇರಣೆಯಾಯಿತು. ಈ ಸ್ವಚ್ಛತಾ ಆಂದೋಲನವನ್ನು ಯಶಸ್ವಿಯಾಗಿ ನಡೆಸಿ 2007ರಲ್ಲಿ 10 ಲ.ರೂ. ಮೊತ್ತದ ಪ್ರಶಸ್ತಿಯೊಂದಿಗೆ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಯಿತು.
Related Articles
Advertisement
ನಾರಾವಿ ಗ್ರಾಮ ಪಂಚಾಯತ್ 2007- 08ರಲ್ಲಿ ರಾಜ್ಯ ನಿರ್ಮಿಲ ಗ್ರಾಮ ಪುರಸ್ಕಾರ ಪ್ರಶಸ್ತಿ ಗಳಿಸಿದ ನಾರಾವಿ ಗ್ರಾ.ಪಂ. ತಾಲೂಕಿನಲ್ಲೇ ಮಾದರಿಯಾಗಿರುವ ಪಂಚಾಯತ್ ಕಟ್ಟಡವನ್ನು ಹೊಂದಿದೆ. ಮೆಸ್ಕಾಂ ಉಪಕೇಂದ್ರ ಇಲ್ಲಿಗೆ ಅನುಮೋದನೆಗೊಂಡಿದ್ದರೂ ಜಾಗದ ಕೊರತೆಯಿಂದ ಅದು ಕಾರ್ಯಗತವಾಗಿಲ್ಲ. ಈ ಗ್ರಾಮಗಳನ್ನು ಗುರುತಿಸುವುದು ಆಯಾ ಕ್ಷೇತ್ರದ ಶಾಸಕರು. ಅವರು ಕಳುಹಿಸಿದ ಪಟ್ಟಿಯಂತೆ ಮೆಸ್ಕಾಂ ಅಧಿಕಾರಿಗಳು ಅಂದಾಜುಪಟ್ಟಿ ತಯಾರಿಸುತ್ತಾರೆ. ಇದಕ್ಕೆ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಲಿದೆ. ಮಾದರಿ ವಿದ್ಯುತ್ ಗ್ರಾಮದ ವಿಶೇಷತೆ
ಪ್ರತೀ ಮಾದರಿ ವಿದ್ಯುತ್ ಗ್ರಾಮದಲ್ಲಿ ವಿದ್ಯುತ್ ವಿತರಣ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಿ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲಿ ಬೀದಿ ದೀಪಗಳಿಗೆ ಎಲ್‌ಇಡಿ, ಸೋಲಾರ್ ದೀಪಗಳನ್ನು ಹಾಗೂ ಟೈಮರ್ ಸ್ವಿಚ್‌ಗಳನ್ನು ಅಳವಡಿಸಲು ಸ್ಥಳೀಯ ಸಂಸ್ಥೆಯೊಂದಿಗೆ ಸಮನ್ವಯತೆ ಕಾಪಾಡಿಕೊಳ್ಳಲಾಗುತ್ತದೆ. ಮಾದರಿ ಗ್ರಾಮದ ವಿದ್ಯುತ್ ಹೊರೆಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಎಲ್ಲ ಸ್ಥಾವರಗಳಿಗೂ ಮಾಪಕ ಅಳವಡಿಸಿ, ವಿದ್ಯುತ್ ಬಳಕೆಯನ್ನು ನಿಖರವಾಗಿ ದಾಖಲಿಸುವಂತೆ ಖಾತ್ರಿಪಡಿಸಲಾಗುತ್ತದೆ. ಪ್ರತೀ ಮಾದರಿ ಗ್ರಾಮಗಳಲ್ಲಿ ವಿದ್ಯುತ್ ಪೋಲಾಗದಂತೆ ತಡೆಗಟ್ಟಲಾಗುತ್ತದೆ. ಎಲ್ಲ ಕಡೆಗಳಲ್ಲಿ ತ್ರಿಫೇಸ್ ವಿತರಣ ಮಾರ್ಗ ರಚಿಸಲಾಗುತ್ತದೆ. 24 ಗಂಟೆಗಳ ವಿದ್ಯುತ್ಛಕ್ತಿ ಲಭ್ಯತೆಗಾಗಿ ವಿಕೇಂದ್ರೀಕೃತ ವಿತರಣಾ ಉತ್ಪಾದನೆ (ಡಿಡಿಜಿ) ಮೂಲಕ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಸ್ಥಾವರಗಳ ವಿದುಚ್ಛಕ್ತಿ ಬಳಕೆಗೆ ಬಿಲ್ ನೀಡಿ ಶೇ. 100ರಷ್ಟು ಕಂದಾಯ ವಸೂಲಾತಿಗೆ ಮೊಬೈಲ್‌ವ್ಯಾನ್ ಅಥವಾ ಇತರ ವ್ಯವಸ್ಥೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಗ್ರಾಮಗಳಲ್ಲಿ ಯಾವುದೇ ರೀತಿಯ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಮಾರ್ಗ, ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಇತ್ಯಾದಿಗಳನ್ನು ಸರಿಪಡಿಸಿ ಅಪಘಾತರಹಿತ ಸುರಕ್ಷತಾ ಕ್ರಮಗಳನ್ನು ಕಲ್ಪಿಸಲಾಗುತ್ತದೆ. ಯೋಜನೆಗೆ ಪೂರ್ಣ ಸಹಕಾರ
ಮಾದರಿ ವಿದ್ಯುತ್ ಗ್ರಾಮ ಯೋಜನೆಗೆ ಸರಕಾರ ನಮ್ಮ ಗ್ರಾಮವನ್ನು ಆಯ್ಕೆ ಮಾಡಿರುವುದು ಸಂತಸವನ್ನು ಉಂಟು ಮಾಡಿದೆ. ಈ ಯೋಜನೆ ಕಾರ್ಯಗತಗೊಳ್ಳಲು ಪಂಚಾಯತ್ ಪೂರ್ಣ ಸಹಕಾರ ನೀಡಲಿದೆ.
– ರವೀಂದ್ರ ಪೂಜಾರಿ ಬಾಂದೊಟ್ಟು, ಅಧ್ಯಕ್ಷರು, ನಾರಾವಿ ಗ್ರಾ.ಪಂ. – ಪದ್ಮನಾಭ ಕುಲಾಲ್ ವೇಣೂರು