ಮುಂಬಯಿ: ಮುಂಬೈ ಇಂಡಿಯನ್ಸ್ ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಪ್ಲೇ ಆಫ್ ತೇರ್ಗಡೆಯಾಗುವ ಅವಕಾಶದಿಂದ ಹೊರಬಿದ್ದಿರಬಹುದು. ಆದರೂ ತಂಡ ಮುಂಬರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಬಗ್ಗೆ ಯಾವುದೇ ಯೋಜನೆ ಇಟ್ಟುಕೊಂಡಿಲ್ಲ ಎಂದು ತಂಡದ ಬ್ಯಾಟಿಂಗ್ ಕೋಚ್ ಕೀರನ್ ಪೋಲಾರ್ಡ್ ಹೇಳಿದ್ದಾರೆ.
ಮುಂಬೈ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಶತಕದಿಂದಾಗಿ ಹೈದರಾಬಾದ್ ವಿರದ್ಧ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಅವರ ಶತಕದ ಬಲದಿಂದ ಮುಂಬೈ ಇನ್ನೂ 16 ಎಸೆತ ಬಾಕಿ ಇರುತ್ತಲೇ ಜಯಭೇರಿ ಬಾರಿಸಿತ್ತು. ಈ ಗೆಲುವಿನಿಂದ ಮುಂಬೈ ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.
ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಯೋಜನೆ ಏನಾದರೂ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಪೋಲಾರ್ಡ್ ಈ ಬಗ್ಗೆ ನಾವು ಚರ್ಚೆ ನಡೆಸಿಲ್ಲ. ಈ ಹಂತದಲ್ಲಿ ಈ ಬಗ್ಗೆ ಚರ್ಚಿಸಲು ನನ್ನ ಪಾತ್ರವೇನೂ ಇಲ್ಲ. ಐಪಿಎಲ್‌ನ ಎಲ್ಲ ಪಂದ್ಯಗಳಲ್ಲಿ ಆಡುವುದಕ್ಕೆ ನಾವು ಇಲ್ಲಿದ್ದೇವೆ ಎಂದವರು ಹೇಳಿದರು. ಮುಂಬೈ ಈ ಐಪಿಎಲ್‌ನಲ್ಲಿ ಇನ್ನೆರಡು ಪಂದ್ಯಗಳಲ್ಲಿ ಆಡಬೇಕಾಗಿದೆ.
ನಮಗೆ ಐಪಿಎಲ್ ಅನ್ನು ಯಶಸ್ವಿಯಾಗಿ ಮುಗಿಸುವುದು ಪ್ರಮುಖ ಆದ್ಯತೆಯಾಗಿದೆ. ಆಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡುವ. ಐಪಿಎಲ್ ಮುಗಿದ ಬಳಿಕ ಅವರು ಭಾರತೀಯ ತಂಡಕೆ ಮರಳುತ್ತಾರೆ. ಆಬಳಿಕ ಅವರಿಗೆ ವಿಶ್ರಾಂತಿ ಸಿಗಬಹುದು ಎಂದವರು ತಿಳಿಸಿದರು.
ಮುಂಬೈಯ ಕೊನೆಯ ಐಪಿಎಲ್ ಪಂದ್ಯ ಮೇ 17ರಂದು ಲಕ್ನೋ ವಿರುದ್ಧ ತವರಿನಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಜೂನ್ ಒಂದರಿಂದ ಆರಂಭವಾಗಲಿದೆ.
ಅಸಾಧಾರಣ ಇನ್ನಿಂಗ್ಸ್
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಸಾಧಾರಣ ಇನ್ನಿಂಗ್ಸ್‌ನಿಂದಾಗಿ ಪಂದ್ಯ ವನ್ನು ನಾವು ಕಳೆದುಕೊಂಡೆವು ಎಂದು ಹೈದರಾಬಾದ್ ತಂಡದ ಸಹಾಯಕ ಕೋಚ್ ಸೈಮನ್ ಹೆಲ್ಮೋಟ್ ಹೇಳಿದ್ದಾರೆ. ವಿಶ್ವದ ನಂಬರ್ ವನ್ ಟಿ20 ಆಟಗಾರರಾಗಿರುವ ಅವರು ಮುಂಬರುವ ಟಿ20 ವಿಶ್ವಕಪ್‌ನಲ್ಲೂ ಶ್ರೇಷ್ಠ ನಿರ್ವಹಣೆ ನೀಡಲಿದ್ದಾರೆ ಎಂದವರು ತಿಳಿಸಿದರು.
ಅವರಿಗೆ (ಸೂರ್ಯ) ಬೌಲಿಂಗ್ ಮಾಡುವುದು ಬಹಳ ಕಷ್ಟ, ಶ್ರೇಷ್ಠ ನಿರ್ವಹಣೆ ನೀಡುವಾಗ ಅವರ ಬ್ಯಾಟಿಂಗ್ ವೈಭವಕ್ಕೆ ಕಡಿವಾಣ ಹಾಕುವುದು ಕಷ್ಟಕರ ಎಂದವರು ಹೇಳಿದರು.