ಸೂರತ್: 450 ಕೋಟಿ ರೂಪಾಯಿ ಪೋಂಜಿ ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸಿಐಡಿಯು ಕ್ರಿಕೆಟಿಗ ಶುಭಮನ್ ಗಿಲ್ ಸೇರಿ ನಾಲ್ವರು ಗುಜರಾತ್ ಟೈಟಾನ್ಸ್ ಆಟಗಾರರಿಗೆ ಸಮನ್ಸ್ ನೀಡುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಗಿಲ್ ಜತೆಗೆ, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಮೋಹಿತ್ ಶರ್ಮ ಅವರನ್ನು ಸಿಐಡಿ ಪ್ರಶ್ನಿಸುವ ಸಾಧ್ಯತೆಯಿದೆ.
ಹಮದಾಬಾದ್ ಮಿರರ್‌ನ ವರದಿಯ ಪ್ರಕಾರ ಪೋಂಜಿ ಯೋಜನೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ಹೇಳಲಾದ ಭೂಪೇಂದ್ರ ಸಿನ್ಹ ಝಾಲಾ ಅವರ ವಿಚಾರಣೆಯ ನಂತರ ಈ ಬೆಳವಣಿಗೆ ನಡೆದಿದೆ. ಕ್ರಿಕೆಟಿಗರನ್ನು ಒಳಗೊಂಡು ಮಾಡಿದ ಹೂಡಿಕೆಯನ್ನು ಹಿಂದಿರುಗಿಸಲು ವಿಫಲವಾಗಿರುವುದಾಗಿ ಝಲಾ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
450 ಕೋಟಿ ರೂ. ಚಿಟ್ ಫಂಡ್ ಹಗರಣವನ್ನು ರೂಪಿಸಿದ ಆರೋಪ ಹೊತ್ತಿರುವ ಝಾಲಾ ರನ್ನು ಪೋಂಜಿ ಕಾರ್ಯಾಚರಣೆ “ಕಿಂಗ್‌ಪಿನ್” ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಗುಜರಾತ್‌ನಾದ್ಯಂತ ತಲೋದ್, ಹಿಮ್ಮತ್‌ನಗರ ಮತ್ತು ವಡೋದರಾ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕಚೇರಿಗಳನ್ನು ತೆರೆದಿದ್ದು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಲು ಏಜೆಂಟ್‌ಗಳನ್ನು ನೇಮಿಸಿಕೊಂಡು ಬ್ಯಾಂಕ್‌ಗಳ ಮೂಲಕ ಝಾಲಾ 6,000 ಕೋಟಿ ರೂ.ಗಳ ಹಣಕಾಸು ವಹಿವಾಟು ನಡೆಸಿರುವುದು ಕಂಡು ಬಂದಿದೆ.
ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿದ್ದ ಗಿಲ್ ಈ ಯೋಜನೆಯಲ್ಲಿ ರೂ 1.95 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ ಮೋಹಿತ್ ಶರ್ಮ, ತೆವಾಟಿಯಾ ಮತ್ತು ಸುದರ್ಶನ್ ಸಣ್ಣ ಮಟ್ಟದ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗಿಲ್ ಪ್ರಸ್ತುತ ಆಸ್ಟ್ರೇಲಿಯದಲ್ಲಿ ಭಾರತದ ಟೆಸ್ಟ್ ತಂಡದ ಭಾಗವಾಗಿರುವುದರಿಂದ, CID ಎಲ್ಲಾ ಆಟಗಾರರನ್ನು ನಂತರದ ದಿನಾಂಕದಲ್ಲಿ ಕರೆಸಿಕೊಳ್ಳಲು ಯೋಜಿಸಿದೆ. ಪ್ರತಿಕ್ರಿಯೆಗಾಗಿ ಮೋಹಿತ್ ಶರ್ಮ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ವಿಫಲವಾಗಿವೆ.
ನಡೆಯುತ್ತಿರುವ ತನಿಖೆಯಲ್ಲಿ ಆಟಗಾರರ ಸಹಕಾರ ನಿರ್ಣಾಯಕವಾಗಲಿದೆ ಎಂದು ಗುಜರಾತ್ ಸಿಐಡಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಪ್ರಕರಣ ಮುಂದುವರಿದಂತೆ ಮುಂದಿನ ಬೆಳವಣಿಗೆಗಳ ಮೇಲೆ ಕುತೂಹಲ ಮೂಡಿದೆ.