ಪಣಜಿ: ಗೋವಾದಲ್ಲಿ ಪ್ರಸಕ್ತ ವರ್ಷ ನಡೆಯಲಿದ್ದ ಇಡಿಎಂ ಉತ್ಸವ ಸನ್‍ಬರ್ನ್ ಸಂಗೀತ ಮಹೋತ್ಸವಕ್ಕೆ ಅನುಮತಿ ನೀಡುವುದಿಲ್ಲ ಎಂದು ಗೋವಾ ಸರ್ಕಾರ ಬುಧವಾರ ಹೇಳಿದೆ. ಇದರಿಂದಾಗಿ ಕೋಟ್ಯಂತರ ಸಂಗೀತ ಪ್ರೇಮಿಗಳ ಉತ್ಸಾಹಕ್ಕೆ ಮತ್ತು ರಾಜ್ಯ ಸರ್ಕಾರದ ಬೊಕ್ಕಸದ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
ರಾಜ್ಯ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಪ್ರಸಕ್ತ ವರ್ಷ ಸನ್‍ಬರ್ನ್ ಮಹೋತ್ಸವವನ್ನು ಆಯೋಜಿಸಲು ಸರ್ಕಾರ ಅನುಮತಿ ನಿರಾಕರಿಸಿದೆ. ರಾಜ್ಯದಲ್ಲಿ ಕರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದರು.
ಪ್ರಸಕ್ತ ವರ್ಷ ಗೋವಾದಲ್ಲಿ ಸನ್‍ಬರ್ನ್ ಮಹೋತ್ಸವ ಅನುಮತಿ ನಿರಾಕರಿಸುವ ಫೈಲ್‍ಗೆ ನಾನು ಈಗಾಗಲೇ ಸಹಿ ಹಾಕಿದ್ದೇನೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ರಾಜ್ಯ ಪ್ರವಾಸೋದ್ಯಮ ಸಚಿವ ಮನೋಹರ್ ಆಜಗಾಂವಕರ್ ಪ್ರತಿಕ್ರಿಯೆ ನೀಡಿ, ರಾಜ್ಯದ ಪ್ರವಾಸೋದ್ಯಮ ದೃಷ್ಠಿಯಿಂದ ರಾಜ್ಯದಲ್ಲಿ ಸನ್‍ಬರ್ನ್ ಮಹೋತ್ಸವ ಆಯೋಜನೆ ಮುಖ್ಯವಾಗಿತ್ತು. ಆದರೆ ಮುಖ್ಯಮಂತ್ರಿಗಳು ಎಲ್ಲವನ್ನೂ ವಿಚಾರ ಮಾಡಿಯೇ ನಿರ್ಣಯ ತೆಗೆದುಕೊಂಡಿರಬಹುದು. ಸನ್‍ಬರ್ನ್ ಮಹೋತ್ಸವಕ್ಕೆ ಅನುಮತಿ ನೀಡುವುದು ಅಥವಾ ನಿರಾಕರಿಸುವುದು ಇದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯವಾಗಿದೆ. ಮುಖ್ಯಮಂತ್ರಿಗಳು ಕೈಗೊಂಡ ನಿರ್ಧಾರನ್ನು ನಾವು ಗೌರವಿಸಬೇಕು ಎಂದರು.
ಸನ್‍ಬರ್ನ್ ಸಂಗೀತ ಮಹೋತ್ಸವವನ್ನು ಡಿಸೆಂಬರ್ 28 ರಿಂದ 30 ರವರೆಗೆ ಗೋವಾದ ವಾಗಾತ್ತೋರ್ ಬೀಚ್‍ನಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ಉತ್ಸವದಲ್ಲಿ ವಿಶ್ವಪ್ರಸಿದ್ಧ ಸಂಗೀತಕಾರರಾದ ಬುಲ್ಜೆಯೆ, ಹ್ಯೂಮನ್, ಅರ್ಜುನ್ ವಗಾಕೆ, ಡಾಟ್‍ಡೆಟ್, ಭಾಗವಹಿಸಲಿದ್ದು, ಪ್ರಸಕ್ತ ವರ್ಷ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿಯೇ ಮಹೋತ್ಸವ ಆಚರಿಸಲಾಗುವುದು ಎಂದು ಆಯೋಜಕರು ಕಳೆದ ಕೆಲ ದಿನಗಳ ಹಿಂದೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿಸದ್ದರು. ಆದರೆ ಇದೀಗ ಈ ಸಂಗೀತ ಮಹೋತ್ಸವವನ್ನು ಸರ್ಕಾರ ರದ್ಧುಗೊಳಿಸಿರುವುದು ಅಭಿಮಾನಿಗಳಿಗೆ ನಿರಾಶರನ್ನಾಗಿಸಿದೆ.