ಹೊಸದಿಲ್ಲಿ: ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ 50 ಲಕ್ಷ ರೂಪಾಯಿ ನೆರವು ನೀಡುವ ಆರೋಗ್ಯ ಸಚಿವಾಲಯದ ಯೋಜನೆಯಿಂದ ಇದುವರೆಗೆ ಯಾವುದೇ ರೋಗಿಗೆ ಪ್ರಯೋಜನವಾಗಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ಹೇಳಿದ್ದಾರೆ.
ಇಂತಹ ನೀತಿಯಿಂದ 432 ರೋಗಿಗಳಿಗೆ, ಮುಖ್ಯವಾಗಿ ಆರು ವರ್ಷದೊಳಗಿನ ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ವರುಣ್ ಗಾಂಧಿ, ಹತ್ತು ಮಕ್ಕಳು ಚಿಕಿತ್ಸೆಗಾಗಿ ಕಾದು ಸಾವನ್ನಪ್ಪಿದ್ದಾರೆ. ಈ ಪಾವತಿಗಳನ್ನು ತೆರವುಗೊಳಿಸುವ ಮೂಲಕ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೀವವನ್ನು ಉಳಿಸಲು ಮಾರ್ಚ್ 30, 2021 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಅಪರೂಪದ ರೋಗಗಳ ರಾಷ್ಟ್ರೀಯ ನೀತಿ, 2021’ ಅನ್ನು ಪ್ರಾರಂಭಿಸಿದೆ.
ಮೇ, 2022 ರಲ್ಲಿ ಇದಕ್ಕೆ ಮಾಡಿದ ತಿದ್ದುಪಡಿಯ ಪ್ರಕಾರ, ಎಲ್ಲಾ ಅಪರೂಪದ ರೋಗಿಗಳಿಗೆ ಚಿಕಿತ್ಸೆಗಾಗಿ 50 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಘೋಷಣೆ ಮಾಡಿತ್ತು ಎಂದು ಅವರು ಹೇಳಿದರು.
ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡುವ ಆರೋಗ್ಯ ಸಚಿವಾಲಯದ ಯೋಜನೆ ಘೋಷಣೆಯಾಗಿ ಹಲವು ತಿಂಗಳು ಕಳೆದರೂ ಯಾವೊಬ್ಬ ರೋಗಿಯೂ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ, ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.