Advertisement
ವಿಕಾಸಸೌಧದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಗರದ ರಿಚ್ಮಂಡ್‌ಟೌನ್‌ನ ಸಪೆಂಟೈನ್ ಸ್ಟ್ರೀಟ್‌ನಲ್ಲಿ ನನ್ನ ಹೆಸರಿನಲ್ಲಿದ್ದ 14,924 ಚದರ ಅಡಿ ನಿವೇಶನವನ್ನು 9.38 ಕೋಟಿ ರೂ.ಮೊತ್ತಕ್ಕೆ ಮನ್ಸೂರ್ ಖಾನ್‌ಗೆ ಮಾರಾಟ ಮಾಡಿದ್ದೆ. 2017ರ ಡಿ. 11ರಂದು 5 ಕೋಟಿ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಉಳಿದ 4.28 ಕೋಟಿ ರೂ.ಗಳನ್ನು 2018ರ ಜೂ. 5ರಂದು ಚೆಕ್‌ನಲ್ಲಿ ನೀಡಿದ್ದರು. ಪಾರದರ್ಶಕವಾಗಿ ವ್ಯವಹಾರ ನಡೆಸಿರುವುದನ್ನು ಹೊರತುಪಡಿಸಿದರೆ ಬೇರೆ ವ್ಯವಹಾರ ನಡೆಸಿಲ್ಲ’ ಎಂದು ಹೇಳಿದರು.
Related Articles
Advertisement
ರಾಜಕೀಯ ನಿವೃತ್ತಿ: ಮನ್ಸೂರ್ ಖಾನ್ 13 ವರ್ಷಗಳಿಂದ ವ್ಯವಹಾರ ನಡೆಸಿದ್ದರೂ ನಿವೇಶನ ಮಾರಾಟ ಸಂಬಂಧ 2017ರ ಡಿಸೆಂಬರ್‌ನಲ್ಲಿ ಭೇಟಿಯಾಗಿದ್ದೆ. ಅದಕ್ಕೂ ಮೊದಲು ನಾನು ಮನ್ಸೂರ್ ಖಾನ್ ಅವರನ್ನು ಭೇಟಿಯಾಗಿದ್ದೆ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.
ಗೊಂದಲ ಮೂಡಿಸಿದ ಹೇಳಿಕೆ!: ಐಎಂಎ ಜ್ಯುವೆಲ್ಲರ್ನಂತಹ ಸಂಸ್ಥೆ 13 ವರ್ಷದಿಂದ ಇದ್ದರೂ ಯಾವಾಗಲಾದರೂ ಹೋಗಬಹುದು ಎಂಬ ಆತಂಕವಿತ್ತು ಹಾಗೂ ಜನರಿಗೆ ಬಡ್ಡಿ ಹಣ ಪಾವತಿಸದಿರುವ ಬಗ್ಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಕಳೆದ ಜೂ.6ರಂದು ಮಾತುಕತೆ ನಡೆಸಿದ್ದರು ಎಂಬ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಗೊಂದಲ ಮೂಡಿಸಿತ್ತು.
ಮೊದಲೇ ಮಾಹಿತಿಯಿದ್ದರೆ ಯಾಕೆ ಕ್ರಮ ಕೈಗೊಳ್ಳಲಿಲ್ಲ, ಮುನ್ನೆಚ್ಚರಿಕೆ ವಹಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಮೀರ್, ಅವರು ಪರಾರಿಯಾಗುತ್ತಾರೆ ಎಂದು ನಾವು ಹೇಗೆ ಊಹಿಸಲು ಸಾಧ್ಯ. ಅಲ್ಲದೇ ಯಾರೊಬ್ಬರೂ ಪೊಲೀಸರಿಗೆ ದೂರು ಸಹ ನೀಡಿರಲಿಲ್ಲ. ರಂಜಾನ್ ಬಳಿಕ ಕೊಡುವುದಾಗಿ ಹೇಳಿದ್ದರಿಂದ ಕೊಡುವ ವಿಶ್ವಾಸವಿತ್ತು. ಇನ್ನು ಅಲೋಕ್ ಕುಮಾರ್ ಅವರು ಯಾಕೆ ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ, ಅಲೋಕ್ ಕುಮಾರ್ ಅವರನ್ನೇ ಕೇಳಬೇಕು ಎಂದು ಹೇಳಿದರು.
ನಿಮಗೆ ಕೈಮುಗಿಯುತ್ತೇನೆ ಬನ್ನಿ: ಮನ್ಸೂರ್ ಖಾನ್ ಅವರೇ, ಮಾಧ್ಯಮಗಳ ಮೂಲಕ ನಿಮಗೆ ಕೈಮುಗಿಯುತ್ತೇನೆ, ವಾಪಸ್ ಬನ್ನಿ. ಸರ್ಕಾರ ನಿಮ್ಮೊಂದಿಗಿದೆ ಎಂದು ಜಮೀರ್ ಹೇಳಿದರು. ಸಚಿವರಾಗಿ ಕೈಮುಗಿಯುತ್ತೇನೆ ಎಂದು ಹೇಳುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮನ್ಸೂರ್ ಖಾನ್ ಬಡ ಜನರ ಹಣ ಪಡೆದು ಕಣ್ಮರೆಯಾಗಿದ್ದಾರೆ. ಆ ಬಡವರ ಪರವಾಗಿ ಕೈಮುಗಿಯುವುದಾಗಿ ಹೇಳಿದ್ದೇನೆ. ಅಲ್ಲದೇ ರಾಜಕಾರಣಿಗಳು, ಅಧಿಕಾರಿಗಳು ತಮ್ಮಿಂದ ಹಣ ಪಡೆದಿರುವುದಾಗಿ ಮನ್ಸೂರ್ ಖಾನ್ ಹೇಳಿದ್ದಾರೆ. ಅವರು ವಾಪಸ್ಸಾದರೆ ಅವರು ಯಾರೆಲ್ಲಾ ರಾಜಕಾರಣಿಗಳು, ಅಧಿಕಾರಿಗಳಿಗೆ ಹಣ ನೀಡಿರುವುದಾಗಿ ಹೇಳುತ್ತಾರೋ ಅವರಿಂದ ಹಣ ವಸೂಲಿ ಮಾಡಿ ಜನರಿಗೆ ನೀಡಲಾಗುವುದು ಎಂದು ಹೇಳಿದರು.
ನಾನೇನೂ ಹರಿಶ್ಚಂದ್ರನಲ್ಲ. ನನ್ನಿಂದಲೂ ತಪ್ಪುಗಳಾಗಿರಬಹುದು. ನನ್ನಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಆದರೆ ತಪ್ಪು ಮಾಡಿರುವ ಬಗ್ಗೆ ದಾಖಲೆ, ಮಾಹಿತಿ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ.-ಜಮೀರ್ ಅಹಮ್ಮದ್ ಖಾನ್, ಸಚಿವ