Advertisement

ರಕ್ತಪಾತದಿಂದ ಒಳಿತಿಲ್ಲ : ಕಾಶ್ಮೀರದ ಯುವಕರಿಗೆ ಪ್ರಧಾನಿ ಕರೆ

10:08 AM Apr 03, 2017 | Team Udayavani |

ಚೆನಾನಿ (ಜಮ್ಮು-ಕಾಶ್ಮೀರ): ‘ನಲ್ವತ್ತು ವರ್ಷಗಳ ರಕ್ತಪಾತದಿಂದ ಯಾರಿಗೂ ಒಳಿತಾಗಿಲ್ಲ. ಭಯೋತ್ಪಾದನೆಯನ್ನು ಕೈಬಿಟ್ಟು ಪ್ರವಾಸೋದ್ಯಮವನ್ನು ಆಯ್ದುಕೊಂಡರೆ ರಾಜ್ಯದ ಅಭಿವೃದ್ಧಿ ಸಾಧ್ಯ’ ಎಂದು ಕಾಶ್ಮೀರ ಯುವಕರಿಗೆ ಪ್ರಧಾನಿ  ಮೋದಿ ಕರೆ ನೀಡಿದರು. ಕಾಶ್ಮೀರ ಕಣಿವೆಯನ್ನು ಜಮ್ಮುವಿನೊಂದಿಗೆ ಸಂಪರ್ಕಿಸುವ, ಎಂಜಿನಿಯರಿಂಗ್‌ ವಿಸ್ಮಯವುಳ್ಳ ದೇಶದ ಮತ್ತು ಏಷ್ಯಾದ ಅತೀ ಉದ್ದದ ಸುರಂಗ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

Advertisement

‘ಒಂದೆಡೆ ಕಲ್ಲು ತೂರುವ ಯುವಕರಿದ್ದಾರೆ; ಮತ್ತೂಂದೆಡೆ, ಕಲ್ಲನ್ನೇ ಕೆತ್ತಿ ಮೂಲಸೌಕರ್ಯ ಸೃಷ್ಟಿಸುವ ಯುವಕರಿದ್ದಾರೆ’ ಎಂದು ಕಲ್ಲು ತೂರುವ ಯುವಕರಿಗೆ ಟಾಂಗ್‌ ನೀಡಿದ ಪ್ರಧಾನಿ, ನೀವು ಬೆಲೆ ಕಟ್ಟಲಾಗದಂಥ ಸೂಫಿ ಸಂಸ್ಕೃತಿಯನ್ನು ನಿರ್ಲಕ್ಷಿಸಿದ್ದೇ ಆದಲ್ಲಿ, ನಿಮ್ಮ ವರ್ತಮಾನವನ್ನು ಕಳೆದುಕೊಳ್ಳುವುದಷ್ಟೇ ಅಲ್ಲ, ಭವಿಷ್ಯವನ್ನೂ ಕತ್ತಲಿಗೆ ತಳ್ಳಿದಂತೆ ಎಂದರು. ನಾವು ರಾಜ್ಯವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ. ಅದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ದಿಟ್ಟದನಿಯಲ್ಲಿ ಪ್ರಧಾನಿ ಹೇಳಿದರಲ್ಲದೆ, ‘ಪಾಕಿಸ್ಥಾನಕ್ಕೆ ತನ್ನ ಸಮಸ್ಯೆಯನ್ನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವುದೇಕೆ’ ಎಂದು ಪ್ರಶ್ನಿಸಿದರು.

ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್‌.ಎನ್‌. ವೋಹ್ರಾ ಹಾಗೂ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಸಮ್ಮುಖದಲ್ಲಿ 9 ಕಿ.ಮೀ. ಉದ್ದದ ಚೆನಾನಿ-ನಶ್ರಿ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ ನೀಡಿದರು. ಬಳಿಕ ಮೂವರು ನಾಯಕರೂ ತೆರೆದ ಜೀಪಿನಲ್ಲಿ ಸುರಂಗದಲ್ಲಿ ಸ್ವಲ್ಪ ದೂರದವರೆಗೆ ಸಂಚರಿಸಿದರು.

ಜಮ್ಮು ಮತ್ತು ಉಧಾಂಪುರದಿಂದ ರಾಮ್‌ಬನ್‌, ಬನಿಹಾಲ್‌ ಮತ್ತು ಶ್ರೀನಗರಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಈ ಸುರಂಗ ಮಾರ್ಗವು ಸುರಕ್ಷಿತ ಪ್ರಯಾಣ ಕಲ್ಪಿಸಲಿದ್ದು, ಇದರಿಂದ ಪ್ರಯಾಣದ ಅವಧಿ ಎರಡೂವರೆ ಗಂಟೆ ಕಡಿಮೆಯಾಗಲಿದೆ. ವಿಶ್ವದರ್ಜೆಯ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿರುವ ಸುರಂಗ ಇದಾಗಿದ್ದು, ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿ ರಾಜ್ಯದ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವರದಾನವಾಗಿ ಪರಿಣಮಿಸಿದೆ. ದ್ವಿಪಥದ ಸುರಂಗದಲ್ಲಿ ಸಮಗ್ರ ಸಂಚಾರ ನಿಯಂತ್ರಣ ವ್ಯವಸ್ಥೆ, ನಿಗಾ ವ್ಯವಸ್ಥೆ, ಗಾಳಿ ಬೆಳಕಿನ ವ್ಯವಸ್ಥೆ, ಪ್ರಸಾರ, ಅಗ್ನಿಶಾಮಕ ವ್ಯವಸ್ಥೆ ಹಾಗೂ ಪ್ರತಿ 150 ಮೀ. ಅಂತರದಲ್ಲಿ ಎಸ್‌ಒಎಸ್‌ ಕರೆ ವ್ಯವಸ್ಥೆಯಿವೆ.

ಜನಜೀವನ ಅಸ್ತವ್ಯಸ್ತ


ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಖಂಡಿಸಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್‌ನಿಂದಾಗಿ ಕಣಿವೆ ರಾಜ್ಯದಲ್ಲಿ ರವಿವಾರ ಜನಜೀವನ ಅಸ್ತವ್ಯಸ್ತವಾಯಿತು. ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು, ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದವು. ಸರಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆದರೆ ಖಾಸಗಿ ಕಾರುಗಳು,  ಕ್ಯಾಬ್‌ಗಳು ಹಾಗೂ ಆಟೋಗಳ ಸಂಚಾರ ಎಂದಿನಂತಿತ್ತು. ಬಂದ್‌ ಕರೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Advertisement

ಗ್ರೆನೇಡ್‌ ದಾಳಿ
ಶ್ರೀನಗರದ ನೊವ್ಹಾಟ್ಟಾ ಪ್ರದೇಶದಲ್ಲಿ ರವಿವಾರ ಸಂಜೆ ಉಗ್ರರು ಭದ್ರತಾ ಪಡೆಗಳ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದಾರೆ. ಪರಿಣಾಮ ಒಬ್ಬ ಪೊಲೀಸ್‌ ಸಿಬಂದಿ ಮೃತಪಟ್ಟು, 14 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

ಸುರಂಗದ ವೈಶಿಷ್ಟ್ಯ
9 ಕಿ.ಮೀ.: ಸುರಂಗ ಮಾರ್ಗದ ಉದ್ದ. ಇದು ಭಾರತದ ಅತೀ ದೊಡ್ಡ ಹೆದ್ದಾರಿ ಸುರಂಗ, ಏಷ್ಯಾದ ಅತೀ ದೊಡ್ಡ ದ್ವಿಪಥ ಸುರಂಗ.

250 ಕಿ.ಮೀ.: ಸುರಂಗದಿಂದಾಗಿ ತಗ್ಗಲಿರುವ ಜಮ್ಮು ಮತ್ತು ಶ್ರೀನಗರದ ನಡುವಿನ ಅಂತರ (ಎರಡೂವರೆ ಗಂಟೆ ಪ್ರಯಾಣ). ಸದ್ಯ ಎರಡೂ ನಗರಗಳ ನಡುವೆ 350 ಕಿ.ಮೀ. ಅಂತರವಿದೆ.

2: ಸಮಾನಾಂತರ ಪಥಗಳಿವೆ, ಪ್ರಧಾನ ಸುರಂಗವಲ್ಲದೇ ಅದರಿಂದ 1,200 ಮೀ. ಎತ್ತರದಲ್ಲಿ ಎಸ್ಕೇಪ್‌ ಸುರಂಗವಿದೆ. ಒಂದು ವೇಳೆ ವಾಹನ ದುರಸ್ತಿಗೀಡಾದರೆ ಸುರಂಗದೊಳಗೇ ಪಾರ್ಕಿಂಗ್‌ಗೂ ವ್ಯವಸ್ಥೆ ಕಲ್ಪಿಸಲಾಗಿದೆ.

30 ಲಕ್ಷ ರೂ.: ಈ ಸುರಂಗದಿಂದಾಗಿ ದಿನಕ್ಕೆ ಉಳಿತಾಯವಾಗಲಿರುವ ಪೆಟ್ರೋಲ್‌ ವೆಚ್ಚ.

7 ವರ್ಷ: ಸುರಂಗ ನಿರ್ಮಾಣಕ್ಕೆ ತಗಲಿದ ಅವಧಿ. ಇದು ಜಮ್ಮು- ಶ್ರೀನಗರ ಹೆದ್ದಾರಿಗೆ ಎಲ್ಲ ಹವಾಗುಣಗಳಲ್ಲೂ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆ.

9.2 ಕಿ.ಮೀ.: ಸುರಂಗವು ತಗ್ಗಿಸಲಿರುವ ಚೆನಾನಿ – ನಶ್ರಿ ನಡುವಿನ ದೂರವಿದು. ಹಿಂದೆ ಇವೆ ರಡರ ನಡುವಿನ ದೂರ 41 ಕಿ.ಮೀ. ಆಗಿತ್ತು.

1,500 ಮಂದಿ: ಇದರ ನಿರ್ಮಾಣ ಕಾಮಗಾರಿಯಲ್ಲಿ ಭಾಗಿಯಾದ ಎಂಜಿನಿಯರ್‌ಗಳು, ಭೂವಿಜ್ಞಾನಿಗಳು, ಕೌಶಲಭರಿತ ಕೆಲಸ ಗಾರರು ಮತ್ತು ಕಾರ್ಮಿಕರು.

3,720 ಕೋಟಿ ರೂ.: ಈ ಯೋಜನೆಗಾಗಿ ರಾ. ಹೆದ್ದಾರಿ ಪ್ರಾಧಿಕಾರ ಮಾಡಿರುವ ವೆಚ್ಚ.

124: ಸುರಂಗದ ಒಳಗಿರುವ ಸಿಸಿಟಿವಿ ಕೆಮರಾಗಳು. ಸಂಚಾರ ನಿಯಮ ಉಲ್ಲಂಘಿಸಿದರೆ, ನಿಯಂತ್ರಣ ಕೊಠಡಿಯಿಂದ ಹೊರಗಿರುವ ಟ್ರಾಫಿಕ್‌ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಅವರು ನಿಯಮ ಉಲ್ಲಂಘಿಸಿದ ಚಾಲಕರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next