ಬೆಂಗಳೂರು: ನಮ್ಮ ಪಕ್ಷದ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗಲ್ಲ. ನಮ್ಮ ಪಕ್ಷದಿಂದ ಓಡಿ ಹೋಗುವವರು ಯಾರೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ನೆಲಮಂಗಲ ಕ್ಷೇತ್ರದ ಮುಖಂಡರ ಜತೆ ಸಭೆ ನಡೆಸಿ ಮಾತನಾಡಿದ ಅವರು, ಕೆಲವು ಸನ್ನಿವೇಶದಲ್ಲಿ ಮಾತನಾಡುವಾಗ ಸ್ವಲ್ಪ ಏರುಪೇರಾದರೆ ಅದನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಆದರೆ, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.
ಜಿ.ಟಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವಿಚಾರ ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದ್ದು. ಕ್ಷೇತ್ರದ ಕೆಲಸಕ್ಕೆ ಹೋಗಿದ್ದೆ ಎಂದು ಅವರು ನನಗೆ ತಿಳಿಸಿದ್ದಾರೆ. ಹಾಗೆಂದು ಅವರು ಪಕ್ಷ ಬಿಡುವುದಿಲ್ಲ. ಮೈಸೂರಿನಲ್ಲಿ ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡರ ನಡುವೆ ಸ್ವಲ್ಪ ವ್ಯತ್ಯಾಸ ಇದೆ. ಆದರೆ, ಅದು ಸರಿ ಹೋಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಎಲ್ಲ ರಾಜ್ಯಗಳ ಮುಖಂಡರ ಜತೆ ಸಭೆ ನಡೆಸುತ್ತಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಜತೆಯಲ್ಲೇ ಕರ್ನಾಟಕದ ವಿಧಾನಸಭೆ ಚುನಾವಣೆಯೂ ನಡೆಯಬಹುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚಿದಂಬರಂ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದವರು. ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಪ್ರಾದೇಶಿಕ ಪಕ್ಷಗಳನ್ನು ಹಾಗೂ ಕಾಂಗ್ರೆಸ್‌ನ್ನು ತುಳಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದರು.
ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಅವರ ಪರ ನಡೆದ ಪ್ರತಿಭಟನೆಯಲ್ಲಿ ಗೈರು ಹಾಜರಾಗಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ವಿಚಾರಣೆಗೆ ದೆಹಲಿಗೆ ತೆರಳುವ ಮುನ್ನ ಡಿ.ಕೆ.ಶಿವಕುಮಾರ್ ನನ್ನ ಮನೆಗೆ ಬಂದಿದ್ದರು. ಧೈರ್ಯ ಹೇಳಿ ಕಳುಹಿಸಿಕೊಟ್ಟೆ ಎಂದು ಹೇಳಿದರು. ದೇಶದಲ್ಲಿ ಬ್ಯಾಂಕ್‌ಗಳನ್ನು ವಿಲೀನ ಮಾಡಲಾಗುತ್ತಿದೆ. ಆದರೆ, ಇದರಿಂದ ಕೆಲಸ ಕಳೆದುಕೊಳ್ಳುವವರನ್ನು ಎಲ್ಲಿಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.
ಊಹಾಪೋಹ: ವಿಧಾನಪರಿಷತ್ ಸದಸ್ಯಬೆಮೆಲ್ ಕಾಂತರಾಜ್ ಪಕ್ಷ ಬಿಡ್ತಾರೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದೇವೇಗೌಡರು ನೆಲಮಂಗಲ ಕ್ಷೇತ್ರದ ಸಭೆ ನಡೆಸಿದರು ಎಂದು ಹೇಳಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ, “ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಜೆಡಿಎಸ್‌ನಲ್ಲೇ ಇರುತ್ತೇನೆ. ನಾನು ಬಿಜೆಪಿ ಸೇರಲಿದ್ದೇನೆ ಎಂಬ ಮಾತುಗಳು ಊಹಾಪೋಹ’ ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ಆದರೆ, ಕೇಂದ್ರ ಸರ್ಕಾರ ಇದುವರೆಗೂ ಅನುದಾನ ಕೊಟ್ಟಿಲ್ಲ. ಕೇಂದ್ರದ ವರ್ತನೆ ಬಗ್ಗೆ ನನಗೆ ತೀವ್ರ ನೋವಾಗಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ