ಕೋಲ್ಕತ್ತ: ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಿದೆ ಮತ್ತು ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಸಂಬಂಧ ನಡೆದ ಬೃಹತ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು , ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಕೀಯ ಹಿಂಸಾಚಾರ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಟಿಎಂಸಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವ ಮೂಲಕ ಬಿಜೆಪಿಗೆ ಅಧಿಕಾರ ನೀಡಿ ಎಂದು ಹೇಳಿದರು.
ರ‍್ಯಾಲಿಯಲ್ಲಿನ ಜನಸ್ತೋಮವನ್ನು ಶ್ಲಾಘಿಸಿದ ಅವರು, ಇದು ಜನರ ಮನಸ್ಥಿತಿಯನ್ನು ಸೂಚಿಸುತ್ತದೆ ಮತ್ತು 2026 ರಲ್ಲಿ ರಾಜ್ಯದಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
2024 ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಸಾಧನೆಯು 2026ರ ವಿಧಾನಸಭಾ ಚುನಾವಣೆಗೆ ಅಡಿಪಾಯ ಹಾಕಲಿದೆ ಎಂದು ಹೇಳಿದರು.
ಸಿಎಎ ಜಾರಿಯಾಗುವುದನ್ನು ಮಮತಾ ಬ್ಯಾನರ್ಜಿ ವಿರೋಧಿಸುತ್ತಾ ಬಂದಿದ್ದಾರೆ. ಆದರೆ ಯಾರೊಬ್ಬರೂ ಕಾಯ್ದೆ ತಡೆಯಲು ಸಾಧ್ಯವಿಲ್ಲ.ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯು ಕೇಂದ್ರ ಸರ್ಕಾರ ಕಾಯ್ದೆ ಜಾರಿ ಮಾಡಲಿದೆ ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದುಕೊಂಡಿತ್ತು.