Advertisement

ಸಿನಿಮಾ ಮಂದಿಯ 100 ಕನಸು: ಹೊಸದೇನಿಲ್ಲ, ಹಳೆಯದೇ ಎಲ್ಲಾ …

09:02 AM Aug 27, 2021 | Team Udayavani |

ಆಗಸ್ಟ್‌ ಕೊನೆಯ ತಿಂಗಳಿನಲ್ಲಾದರೂ ಒಂದಷ್ಟು ಸಿನಿಮಾಗಳು ಬಿಡುಗಡೆಯಾಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಈ ವಾರ ಯಾವುದೇ ಹೊಸ ಸಿನಿಮಾ ಬಿಡುಗಡೆ ಯಾಗುತ್ತಿಲ್ಲ. ಈ ಮೂಲಕ ಸಿನಿಮಾ ಮಂದಿ ರಿಲೀಸ್‌ನಿಂದ ದೂರ ಉಳಿದಿದ್ದಾರೆ. ಇದಕ್ಕೆಕಾರಣ ಶೇ50 ಸೀಟು ಭರ್ತಿ ಅವಕಾಶ. ಹೌದು, ಶೇಕಡಾ 50ರಷ್ಟು ಪ್ರೇಕ್ಷಕರ ಪ್ರವೇಶಾವಕಾಶದಲ್ಲಿ ತೆರೆಗೆ ಬರಲು ಈ ತಿಂಗಳ ಆರಂಭದಲ್ಲಿ ಒಂದಷ್ಟು ಹೊಸಬರ ಸಿನಿಮಾಗಳು ಆಸಕ್ತಿ ತೋರಿಸಿದ್ದವು.

Advertisement

ಅದರಂತೆಕಳೆದ ವಾರ “ಗ್ರೂಫಿ’, “ಶಾರ್ದೂಲ’, “ಜೀವ್ನಾನೆ ನಾಟ್ಕ ಸ್ವಾಮಿ’ ಸೇರಿದಂತೆ ಮೂರು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬಂದಿದ್ದವು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರ ಪ್ರವೇಶಾವಕಾಶದಲ್ಲಿ ಸಿನಿಮಾಗಳ ಪ್ರಮೋಶನ್‌ ಮಾಡಿ, ರಿಲೀಸ್‌ ಮಾಡುವುದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರಿಗೂ ಹೊರೆಯಾಗಿ ಪರಿಣಮಿಸಿದೆ.

ಅಲ್ಲದೆ ನಿಯಮಿತ ಪ್ರವೇಶಾವಕಾಶವಿರುವುದರಿಂದ ಸಿನಿಮಾದ ಗಳಿಕೆ ಲೆಕ್ಕಚಾರ ಕೂಡ ತಲೆಕೆಳಗಾಗುತ್ತಿದೆ. ಹೀಗಾಗಿ ಈ ವಾರ ಕೂಡ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಥಿಯೇಟರ್‌ ಗಳಲ್ಲಿ100% ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಈ ವಾರಕೂಡ ಹುಸಿಯಾಗಿದ್ದರಿಂದ, ಬಹುತೇಕ ಈ ವಾರ ಬಿಡುಗಡೆಗೆ ರೆಡಿಯಾಗಿದ್ದ ಲೂಸ್‌ಮಾದ ಯೋಗಿ ಅಭಿನಯದ “ಲಂಕೆ’ ಸೇರಿದಂತೆ, ಇನ್ನೂ ಎರಡು-ಮೂರು ಸಿನಿಮಾಗಳು ಮತ್ತು ಅನಿರ್ಧಿಷ್ಟವಧಿಗೆ ತಮ್ಮ ಬಿಡುಗಡೆಯನ್ನು ಮುಂದೂಡಿಕೊಂಡಿವೆ

ಮತ್ತೂಂದೆಡೆ, ಸರ್ಕಾರ ಥಿಯೇಟರ್‌ಗಳಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶಕೊಡುವವರೆಗೆ ತಮ್ಮ ಸಿನಿಮಾಗಳ ಬಿಡುಗಡೆ ಬಗ್ಗೆ ಯೋಚಿಸುವುದಿಲ್ಲ ಎಂದು ಬಹುತೇಕ ಬಿಗ್‌ ಬಜೆಟ್‌ ಮತ್ತು ಸ್ಟಾರ್ ಸಿನಿಮಾಗಳ ನಿರ್ಮಾಪಕರು ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ಹಲವು ನಿರ್ಮಾಪಕರು ಈ ಬಗ್ಗೆ ಅಧಿಕೃತ ಘೋಷಣೆಯನ್ನೂ ಮಾಡಿದ್ದಾರೆ. ಹೀಗಾಗಿ ಶೇಕಡಾ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಸಿಗುವವರೆಗೂ ಬಹುತೇಕ ದೊಡ್ಡ ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ತೀರಾ ಕಡಿಮೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಡ್ಡಕತ್ತರಿಗೆ ಸಿಕ್ಕಿದಂತಾಗಿರುವುದು ಹೊಸಬರ ಸಿನಿಮಾಗಳು.

ಇತ್ತ ಶೇಕಡಾ 50ರಷ್ಟು ಪ್ರೇಕ್ಷಕರ ಪ್ರವೇಶಾವಕಾಶದಲ್ಲಿ ತೆರೆಗೆ ಬರಲು ಸಾಧ್ಯವಾಗದೇ, ಅತ್ತ 100% ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಸಿಗುವವರೆಗೂ ಕಾಯಲೂ ಆಗದೆ, ಸಿನಿಮಾ ಬಿಡುಗಡೆ ಮಾಡುವುದು ಒಂಥರಾ ಬಾಯಲ್ಲಿ ಬಿಸಿ ತುಪ್ಪವಿಟ್ಟುಕೊಂಡಂತೆ ಎಂಬಂತಾಗಿದೆ!

Advertisement

ಇದನ್ನೂ ಓದಿ:ಮೈಸೂರು ದೋಸೆವಾಲನಿಂದ ಲಕ್ಷಾಂತರ ವಂಚನೆ!: ಒಂಬತ್ತು ವರ್ಷದಿಂದ ಮನೆಗೇ ಬಾರದ ಈ ವಂಚಕ!

ಇನ್ನು ಥಿಯೇಟರ್‌ಗಳಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕೊಡಿಸಲು ಸರ್ಕಾರದ ಮನ ಒಲಿಸುವ ಸಿನಿಮಂದಿಯ ಕಸರತ್ತು ಮುಂದುವರೆದಿದ್ದು, ಸೆಪ್ಟೆಂಬರ್‌ ಮೊದಲ ವಾರದ ಬಳಿಕ ಚಿತ್ರರಂಗದ ಬೇಡಿಕೆಯನ್ನು ಸರ್ಕಾರ ಈಡೇರಿಸಬಹುದು ಎಂಬ ನಿರೀಕ್ಷೆ ಇದೆ. ಹಾಗೇನಾದರೂ ಆದರೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ “ಭಜರಂಗಿ-2′ ಸೇರಿದಂತೆ ಒಂದಷ್ಟು ಬಿಗ್‌ ಬಜೆಟ್‌ನ, ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗಬಹುದು ಎಂಬ ಮಾತುಗಳೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ.

ಅದೇನೆ ಇರಲಿ, ಸದ್ಯದ ಮಟ್ಟಿಗಂತೂ ಥಿಯೇಟರ್‌ಗಳಲ್ಲಿ ಶೇಕಡಾ ನೂರರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಯಾವಾಗ ಅನ್ನೋದು ದೊಡ್ಡ ಪ್ರಶ್ನೆಯಾಗಿದ್ದು, ಸರ್ಕಾರದ ನಿರ್ಧಾರಕ್ಕಾಗಿ ನಿರ್ಮಾಪಕರಿಂದ, ಪ್ರೇಕ್ಷಕರಾದಿಯಾಗಿ ಎಲ್ಲರೂ ಕಾಯುತ್ತಿರುವುದಂತೂ ಸುಳ್ಳಲ್ಲ.

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next