Advertisement

ಶೋಷಣೆ ರಹಿತ ಸಮಾಜ ನಿರ್ಮಾಣ ಅಗತ್ಯ

04:14 PM Dec 06, 2018 | |

ಬಳ್ಳಾರಿ: ದೇಶದಲ್ಲಿ ಅನೇಕ ಜನ ಸಂತರು ಸಮಾಜಕ್ಕಾಗಿ ಮತ್ತು ಸಮಾಜದ ಏಳ್ಗೆಗಾಗಿ ತಮ್ಮ ಜೀವನ ಸವೆಸಿದ್ದಾರೆ. ಅಂತಹವರಲ್ಲಿ ಅಗ್ರ ಪಂಕ್ತಿಯಲ್ಲಿರುವವರು ಕನಕದಾಸರು ಎಂದು ಸಂಸದ ವಿ.ಎಸ್‌.ಉಗ್ರಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಂತಶ್ರೇಷ್ಠ ಭಕ್ತ ಕನಕದಾಸ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕನಕದಾಸರು ದಾಸರ ಪದ ಮತ್ತು ಭಕ್ತಿ ಪಂಥದ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಜಾತಿಯ ಬಗ್ಗೆ ಮಾತಾಡುವವರು, ಕನಕ ಮತ್ತು ವಾಲ್ಮೀಕಿ, ಬಸವಣ್ಣ, ಗಾಂಧಿ, ಬುದ್ಧ, ಅಂಬೇಡ್ಕರ್‌ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಹುಟ್ಟು ಸಾವಿನ ಮಧ್ಯೆ ಜಾತೀಯತೆ ಬೇಡ. ಮನುಷ್ಯರಂತೆ ಬದುಕಿದರೆ ಸಾಕು. ಜಾತಿ ರಹಿತ, ವರ್ಗರಹಿತ, ಶೋಷಣೆ ರಹಿತ ಸಮಾಜ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.

ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಬಳ್ಳಾರಿಯಲ್ಲಿ ಕನಕಭವನ, ಕನಕ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಹಕರಿಸುವುದಾಗಿ ತಿಳಿಸಿದರು. ಕುಡಿತಿನಿ ಬಿಟಿಪಿಎಸ್‌ನ ಕಾರ್ಯನಿರ್ವಾಹಕ ಎಂಜಿನಿಯರ್‌ ಲಿಂಗದಹಳ್ಳಿ ಹಾಲಪ್ಪ ಉಪನ್ಯಾಸ ನೀಡಿದರು. ಕವಿತಾ ಗಂಗೂರು ಮತ್ತು ಸಂಗಡಿಗರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಮಹಾನಗರ ಪಾಲಿಕೆ ಮೇಯರ್‌ ಆರ್‌.ಸುಶೀಲಾ ಬಾಯಿ, ಎಸಿ ರಮೇಶ್‌ ಕೋನರೆಡ್ಡಿ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎರ್ರೆಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಮಹಾನಗರ ಪಾಲಿಕೆ ಸದಸ್ಯರಾದ ಕೆರೆಕೋಡಪ್ಪ, ಬೆಣಕಲ್ಲು ಬಸವರಾಜ್‌, ಮಲ್ಲನಗೌಡ, ಶ್ರೀನಿವಾಸ್‌ ಮೋತ್ಕರ್‌ ಮತ್ತಿತರರು ಇದ್ದರು.

Advertisement

ಅದ್ಧೂರಿ ಮೆರವಣಿಗೆ ಕಾರ್ಯಕ್ರಮಕ್ಕೂ ಮುನ್ನ ಸಂತಶ್ರೇಷ್ಠ ಭಕ್ತ ಕನಕದಾಸ ಜಯಂತಿ ನಿಮಿತ್ತ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಗರದ ಅಗ್ನಿಶಾಮಕ ದಳದ ಕಚೇರಿ ಬಳಿಯ ಕನಕದಾಸ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಚಾಲನೆ ನೀಡಿದರು. ನಂತರ ಅಲ್ಲಿಂದ ಆರಂಭವಾದ ಬೃಹತ್‌ ಭಾವಚಿತ್ರದ ಮೆರವಣಿಗೆಯು ದುರ್ಗಮ್ಮ ಗುಡಿ ಮಾರ್ಗವಾಗಿ ಗಡಗಿ ಚನ್ನಪ್ಪ ವೃತ್ತದ ಮುಖಾಂತರ ಬೆಂಗಳೂರು ರಸ್ತೆ- ತೇರು ಬೀದಿ ಮಾರ್ಗವಾಗಿ ಎಚ್‌.ಆರ್‌.ಗವಿಯಪ್ಪ ವೃತ್ತದ ಮೂಲಕ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಿತು. ವಿವಿಧ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next