Advertisement

Congress Government; ಉಳ್ಳವರಿಗಿಲ್ಲ, ಬಡವರಿಗೆ ಮಾತ್ರ ಇನ್ನು ಗ್ಯಾರಂಟಿ ?

11:42 PM Aug 14, 2024 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳು ಇನ್ನು ಮುಂದೆ ಉಳ್ಳವರಿಗೆ ಇರುವುದಿಲ್ಲವೇ? ಬಡವರಿಗೆ ಮಾತ್ರ ಈ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಚಿಂತನೆ ನಡೆಸಿದೆಯೇ? ಇಂಥದ್ದೊಂದು ಸುಳಿವು ಈಗ ಕೆಲವು ಸಚಿವರ ಹೇಳಿಕೆಗಳಿಂದ ಸಿಕ್ಕಿದೆ.

Advertisement

ಉಳ್ಳವರಿಗೆ ಈ ಯೋಜನೆಗಳು ಯಾಕೆ? ತೆರಿಗೆ ಪಾವತಿ ದಾರರಿಗೆ, ಹೆಚ್ಚಿನ ಆದಾಯ ಗಳಿಸುತ್ತಿರುವವರಿಗೆ ಗ್ಯಾರಂಟಿಗಳು ಬೇಕೇ? ಈ ಸೋರಿಕೆಗೆ ಕಡಿವಾಣ ಹಾಕಿದರೆ 10,000 ಕೋಟಿ ರೂ. ಉಳಿತಾಯ ಮಾಡಬಹುದು. ಇದರಿಂದ ಆಗಾಗ್ಗೆ ಕೇಳಿಬರುವ ಅನುದಾನ ಕೊರತೆಯೂ ನೀಗಲಿದೆ ಎಂಬ ವಾದವನ್ನು ಸಚಿವರು ಮುಂದಿಟ್ಟಿದ್ದಾರೆ.

ಕತ್ತರಿ ಅಂದಿಲ್ಲ, ಫಿಲ್ಟರ್‌ ಅಂದಿದ್ದು
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, “ಗ್ಯಾರಂಟಿಗೆ ಕತ್ತರಿ ಹಾಕಲು ನಾನು ಹೇಳಿಲ್ಲ. “ಫಿಲ್ಟರ್‌’ ಮಾಡುವಂತೆ ಸಲಹೆ ನೀಡಿದ್ದೇನೆ. ಪರಿಷ್ಕರಣೆಯಿಂದ 10,000 ಕೋಟಿ ರೂ. ಉಳಿಸಬಹುದು. ಜನ ಏನು ಮಾತನಾಡುತ್ತಿದ್ದಾರೋ ಅದನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಮಾತನಾಡಿ, “ಪರಿಷ್ಕರಣೆ ಬಗ್ಗೆ ಚರ್ಚೆ ಸಹಜ. ಶಾಸಕರು, ಕಾರ್ಯಕರ್ತರು ಅಲ್ಲಲ್ಲಿ ಮಾತನಾಡಿರಬಹುದು. ಬಡವರಿಗೆ ತಲುಪಬೇಕು ಎಂಬುದು ಇದರ ಉದ್ದೇಶ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಗ್ಗೆ ಹೈಕಮಾಂಡ್‌ ಮುಂದೆ ಚರ್ಚೆಯಾಗಿಲ್ಲ. ಬಜೆಟ್‌ನಲ್ಲಿ ಯೋಜನೆಗೆ ಹಣ ಇಡಲಾಗಿದೆ. 56 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಹಾಗಾಗಿ ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಸಮಜಾಯಿಷಿ ನೀಡಿದರು.

ಸಚಿವ ಈಶ್ವರ ಖಂಡ್ರೆ, “ಸರಕಾರ ನುಡಿದಂತೆ ನಡೆದಿದ್ದು, ಐದೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಪರಿಣಾಮವಾಗಿ 1 ಕೋಟಿಗೂ ಹೆಚ್ಚು ಜನ ಬಡತನರೇಖೆಯಿಂದ ಹೊರ ಬಂದಿದ್ದಾರೆ. ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾ ರೆ. ಅದು ಮುಂದುವರಿಯುತ್ತದೆ’ ಎಂದು ಪುನರುಚ್ಚರಿಸಿದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, “ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಾರದು. ಒಳ್ಳೆಯ ಯೋಜನೆ ಕೊಟ್ಟಿದ್ದೇವೆ. ಅವುಗಳ ಪರಿಷ್ಕರಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಏನೂ ಹೇಳುವುದಿಲ್ಲ. ಆದರೆ ಯೋಜನೆಗಳ ದುರುಪಯೋಗ ತಪ್ಪಿಸಬೇಕು. ಕೆಲವು ಅನರ್ಹರು ಲಾಭ ಪಡೆಯುತ್ತಿದ್ದಾರೆ. ಆ ರೀತಿ ದುರ್ಬಳಕೆ ಆಗುವುದು ಸರಿ ಅಲ್ಲ. ಗ್ಯಾರಂಟಿಗಳನ್ನು ಮುಂದೆಯೂ ನಿಲ್ಲಿಸುವುದಿಲ್ಲ’ ಎಂದರು.

Advertisement

ಜಿಎಸ್‌ಟಿ, ತೆರಿಗೆ ಕಟ್ಟುವವರಿಗೆ ಯಾಕೆ?
ಗ್ಯಾರಂಟಿ ಯೋಜನೆಗಳನ್ನು ಬದಲಿಸುವುದಿಲ್ಲ ಅಥವಾ ಕತ್ತರಿ ಹಾಕುವುದಿಲ್ಲ. ಯಾವ ಸಚಿವರಿಂದಲೂ ಅಂತಹ ಮನವಿ ಬಂದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಈ ಬಗ್ಗೆ ಸ್ಪಷ್ಟ ವಾಗಿ ಹೇಳಿದ್ದೇವೆ. ಜಿಎಸ್‌ಟಿ, ತೆರಿಗೆ ದಾರರಿಗೆಲ್ಲ ಯಾಕೆ ನೀಡಬೇಕು? ಅದನ್ನು ಪರಿಶೀಲಿಸುತ್ತೇವೆ. ಫ‌ಲಾನು ಭವಿಗಳ ಗುರುತಿನ ಚೀಟಿ ವಿತರಣೆಗೆ ಚಿಂತಿಸುತ್ತಿದ್ದೇವೆ.
– ಡಿ.ಕೆ. ಶಿವಕುಮಾರ್‌, ಡಿಸಿಎಂ

ಅರ್ಹರಿಗೆ ಮಾತ್ರ ಸಿಗಬೇಕು
ಅರ್ಹರಿಗೆ ಮಾತ್ರ ಯೋಜನೆಯ ಫ‌ಲ ಸಿಗುವಂತಾಗಬೇಕು. ಅನರ್ಹರನ್ನು ಹೊರಗಿಡಲು ಸಮಗ್ರ ಸಮೀಕ್ಷೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಶೇ. 82ರಷ್ಟು ಬಿಪಿಎಲ್‌ ಕಾರ್ಡ್‌ ಇವೆ. ನೈಜ ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರಯೋಜನ ಸಿಗಬೇಕು.
-ಎಂ.ಬಿ. ಪಾಟೀಲ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next