Advertisement

ದುಡ್ಡೂ ಇಲ್ಲ, ಜಾತಿಯೂ ಇಲ್ಲ ರಾಜಕಾರಣ ಆಗಿ ಬರಲ್ಲ!: ನಾಗತಿಹಳ್ಳಿ

10:43 AM Dec 03, 2017 | |

ಮೂಡಬಿದಿರೆ (ಆಳ್ವಾಸ್‌): “ರಾಜಕಾರಣಕ್ಕೆ ಬರಲು ತುಂಬ ದುಡ್ಡು ಬೇಕು ಮತ್ತು ಜಾತಿಯನ್ನೂ ಬಳಸಬೇಕು. ಆದರೆ, ನನ್ನಲ್ಲಿ ದುಡ್ಡಿಲ್ಲ, ಜಾತಿ ಬಿಟ್ಟಿದ್ದೇನೆ. ಹೀಗಾಗಿ ರಾಜಕಾರಣ ನನಗೆ ಹೊಂದಿಕೆಯೇ ಆಗಲ್ಲ’ ಹೀಗೆಂದು ಹೇಳಿದ್ದು ಹಿರಿಯ ಚಲನಚಿತ್ರ ನಿರ್ದೇಶಕ ಹಾಗೂ ಆಳ್ವಾಸ್‌ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷ ಡಾ| ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

Advertisement

ಆಳ್ವಾಸ್‌ ನುಡಿಸಿರಿಯ 2ನೇ ದಿನ ಅಧ್ಯಕ್ಷರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು “ಪ್ರತಿ ವರ್ಷ ರಾಜಕೀಯ ಸೇರುವಂತೆ ಆಫರ್‌ಗಳು ಬರುತ್ತವೆ. ಈ ಬಾರಿಯೂ ಎರಡು ಪಕ್ಷದಿಂದ ಆಫರ್‌ ಬಂದಿತ್ತು. ಆದರೆ, ಲೋಕವನ್ನು ತಬ್ಬುವ ಉದ್ದವಾದ ತೋಳು ನನ್ನಲ್ಲಿ ಇಲ್ಲವಾದ್ದರಿಂದ ನಾನು ಅದನ್ನು ನಿರಾಕರಿಸಿದ್ದೇನೆ’ ಎಂದರು. 

ಪ್ರಸಕ್ತ ರಾಜಕೀಯ ಶುದ್ಧೀಕರಣಕ್ಕೆ ನಾಗತಿಹಳ್ಳಿ ಅವರು ರಾಜಕೀಯ ಸೇರುವ ಯೋಚನೆ ಇದೆಯೇ ಎಂಬ ಡಾ| ಜಯಪ್ರಕಾಶ್‌ ಮಾವಿನಕುಳಿ ಅವರ ಪ್ರಶ್ನೆಗೆ ಉತ್ತರಿಸಿ, “ಲಂಕೇಶ್‌ ಪ್ರಗತಿರಂಗ ಆರಂಭಿಸುವ ವೇಳೆಗೆ ನಾನು ಅವರ ಕಾರು ಚಾಲಕನಾಗಿ ಹೋಗುತ್ತಿದ್ದೆ. ಆಗ ಪ್ರಗತಿರಂಗ ಅಧಿಕಾರಕ್ಕೆ ಬರುವುದೇ ಇಲ್ಲ ಅನ್ನುತ್ತಿದ್ದೆ. ಅವರ ಜತೆಗಿದ್ದವರು ನೀವೇ ಗೆಲ್ಲುವುದು ಅಂತ ಹೇಳುತ್ತಲೇ ಮಂತ್ರಿಮಂಡಲವನ್ನೂ ಹಂಚಿದ್ದರು. ಅಂದರೆ ವೃತ್ತಿ ರಾಜಕಾರಣಕ್ಕೆ ಅದರದ್ದೇ ಆದ ಪಟ್ಟುಗಳಿವೆ. ತುಂಬ ದುಡ್ಡು, ಜಾತಿ ಬೇಕು ಆದರೆ, ನನ್ನಲ್ಲಿ ಇವೆರಡೂ ಇಲ್ಲ. ನನಗೆ ಇವೆಲ್ಲ ಹಿಡಿಸಲ್ಲ ಎಂದರು.  

ನಾ.ದಾ.ಶೆಟ್ಟಿ ಅವರು ಕೇಳಿದ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ನಾಗತಿಹಳ್ಳಿ, ಭಾರತ ಮಾತ್ರ ಸರಿಯಾಗಿದೆ; ಉಳಿದ ದೇಶ ಯಾವುದೂ ಸರಿಯಿಲ್ಲ ಅಂತ ನಾನು ಖಂಡಿತವಾಗಿಯೂ ವಾದ ಮಾಡುವುದಿಲ್ಲ. ಅಮೇರಿ ಕಾದ ಮಧ್ಯಮವರ್ಗದ ಪ್ರಜೆ ನಿಷ್ಠೆಯಿಂದ ತೆರಿಗೆ ಕಟ್ಟು ತ್ತಾನೆ. ಆತನಿಗೆ ಸಾಮಾಜಿಕ ಜವಾಬ್ದಾರಿ ಇದೆ. ಪುರಾತನ ವಸ್ತು, ವ್ಯವಸ್ಥೆಗಳನ್ನು ಅತ್ಯಂತ ಹೆಚ್ಚು ಮುನ್ನೆಚ್ಚರಿಕೆಯಿಂದ ಕಾಪಾಡುವ ಮನೋಭೂಮಿಕೆಯೂ ಇದೆ. ಆದರೆ, ನಾವು ಸಾರ್ವಜನಿಕ ಸ್ಥಳ ಅಂದರೆ ಕಸದ ತೊಟ್ಟಿ ಅಂದು ಬಿಡುತ್ತೇವೆ. ಆದರೆ, ಭಾರತದಲ್ಲಿ ಬೇಕಾದಷ್ಟು ಶ್ರೇಷ್ಠ ವಿಚಾರಗಳಿವೆ. ಎಂದರು.

ಹಳ್ಳಿಯ ಕಥೆ ಹೇಳಿದ ನಾಗತಿಹಳ್ಳಿ..!
“ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಶಾಲೆಗೆ ಇನ್ಸ್‌ ಪೆಕ್ಟರ್‌ ಬಂದಿದ್ದರು. ಅವರು ಬರುವ ಮುನ್ನ ಮೇಷ್ಟ್ರು ಡಾಕ್ಟರ್‌ ಅಥವಾ ಇಂಜಿನಿ ಯರ್‌ ಎಂದು ಹೇಳುವಂತೆ ಮೊದಲೇ ಸೂಚಿಸಿದ್ದರು. ಎಲ್ಲ ವಿದ್ಯಾರ್ಥಿಗಳೂ ಹಾಗೇ ಹೇಳಿದರು. ಆದರೆ ನಾನು ಮಾತ್ರ ಲಾರಿ ಡ್ರೈವರ್‌ ಆಗಬೇಕು ಎಂದು ಹೇಳಿದೆ. ಇನ್‌ಸ್ಪೆಕ್ಟರ್‌ ಹೋದ ಬಳಿಕ ಮೇಷ್ಟ್ರು  ಚೆನ್ನಾಗಿ ಬಾರಿಸಿದರು. ನಾನೀನ ನನ್ನಲ್ಲಿಯೇ ಕೇಳಿಕೊಂಡರೆ ಲಾರಿ ಡ್ರೈವರ್‌ ಐಡಿಯಾಲಜಿ ತೆರೆದುಕೊಳ್ಳುತ್ತದೆ. ನಮ್ಮ ಹಳ್ಳಿ ಪಕ್ಕ ಹೆದ್ದಾರಿ ಇತ್ತು. ಅಲ್ಲಿ ಆಲ್‌ ಇಂಡಿಯಾ ಪರ್ಮಿಟ್‌ ಎಂದು ಬರೆದಿದ್ದ ಲಾರಿಗಳು ಹೋಗುತ್ತಿದ್ದವು. ಲಾರಿ ಡ್ರೈವರ್‌ ಆದರೆ, ವಿವಿಧ ಪ್ರದೇಶ ಸುತ್ತಬಹುದು ಅಂತ ಅನಿಸಿತ್ತು.  ಅಲೆಮಾರಿ ಎಂಬುದು ನನಗೆ ಆವತ್ತಿಂದ ಬಂದು ಬಿಟ್ಟಿದೆ. ದೇಶದ ಎಲ್ಲಾ ರಾಜ್ಯಗಳನ್ನು, 40ರಷ್ಟು ವಿದೇಶಗಳನ್ನು ಸುತ್ತಾಡಿದ್ದೇನೆ. ಇವೆಲ್ಲವನ್ನು ಜತೆಯಾಗಿಟ್ಟು ಸಿನೆಮಾ ಹಾಗೂ ಪ್ರವಾಸ ಕಥನ ಬರೆದಿದ್ದೇನೆ’ ಎಂದರು.

Advertisement

ತೆಂಗಿನ ಕಾಯಿ ದೇಣಿಗೆಯಿಂದ ಊರಿಗೆ ಬೀದಿ ದೀಪ! 
“25-30 ವರ್ಷಗಳ ಹಿಂದೆ, ನಮ್ಮ ಹಳ್ಳಿಯಲ್ಲಿ ವಿದ್ಯುತ್‌ ಇತ್ತು. ಆದರೆ, ವಿದ್ಯುತ್‌ ದೀಪಗಳಿರಲಿಲ್ಲ. ಈ ಬಗ್ಗೆ ಸಿಟ್ಟಿನಿಂದ ಓಡಾಡುತ್ತಿದ್ದ ನಾನು, ಒಂದು ನಿರ್ಧಾರ ಮಾಡಿ  ಊರಿನ ಎಲ್ಲ ಮನೆಯವರು ತಿಂಗಳಿಗೊಂದು ತೆಂಗಿನಕಾಯಿ ಕೊಡುವುದು ಎಂದು ತೀರ್ಮಾನವಾಯ್ತು. ಪ್ರತಿ ಮನೆಯಿಂದ ತೆಂಗಿನಕಾಯಿ ಸಂಗ್ರಹಿಸಿ, ಹರಾಜು ಹಾಕಿ ಆ ಹಣದಿಂದ ಬೀದಿ ದೀಪ ಅಳವಡಿಸಲಾಯ್ತು. ಇದು ದೀಪದ ಕ್ರಾಂತಿ ಮಾಡಿದ್ದು, ಊರಿಗೆ ಬೇಕಾದ 50-60 ಟ್ಯೂಬ್‌ಲೈಟ್‌ ಹಾಕಲು ಇದರಿಂದ ಸಾಧ್ಯವಾಯಿತು ಎಂದರು.

ಮದುವೆ ಆಗುವ ಸಂದರ್ಭ ಸಂಪಾದನೆಯಲ್ಲಿ ಚಿಕ್ಕ ಅಂಶವೊಂದನ್ನು ನನ್ನ ಹಳ್ಳಿಗೆ ಮೀಸಲಿಡಬೇಕು ಎಂದು ಪತ್ನಿಯ ಜತೆಗೆ ಒಪ್ಪಂದ ಮಾಡಿದ್ದೆ. ಈ ಬಗ್ಗೆ ಯೋಚಿಸಿದಾಗ ನನಗೆ ಗ್ರಂಥಾಲಯ ಬೇಕು ಅಂತ ಅನಿಸಿತು. ಹಳ್ಳಿಗಳಲ್ಲಿ ಅಕ್ಷರ ಸಂಸ್ಕೃತಿ ಬೆಳೆಯಬೇಕು ಎಂಬ ಕಾರಣದಿಂದ ಗ್ರಂಥಾಲಯ ಕಟ್ಟಲಾಯಿತು. 10,000 ಅತ್ಯುತ್ತಮ ಪುಸ್ತಕಗಳು ಇಲ್ಲಿವೆ ಎಂದು ನಾಗತಿಹಳ್ಳಿ ನೆನಪಿಸಿದರು.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next