Advertisement

ಮೋದಿ ಅಲೆ ದೇಶದಲ್ಲಿ ಎಲ್ಲೂ ಇಲ್ಲ : ಚಿದಂಬರಂ 

06:00 AM May 10, 2018 | Team Udayavani |

ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಅಂತಿಮ ಹಂತದ ಪ್ರಯತ್ನದಲ್ಲಿ  ತೊಡಗಿವೆ. ಒಂದು ಕಡೆ ಬಿಜೆಪಿಯ ಪ್ರಚಾರಕ್ಕೆ ಪ್ರಧಾನಿ ಮೋದಿ, ಅಮಿತ್‌ ಶಾ, ಉ. ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಹಲವು ನಾಯಕರು-ಮುಖಂಡರು ಕರಾವಳಿಗೆ ಬಂದು ಹೋಗಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್‌ನಲ್ಲಿಯೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಯಕ ರಾದ ಡಿ.ಕೆ. ಶಿವಕುಮಾರ್‌, ಪರಮೇಶ್ವರ್‌ ಸಹಿತ ಹಲವು ನಾಯಕರು ಬಂದು ಹೋಗಿದ್ದಾರೆ. ಈಗ ಅಂತಿಮ ಹಂತದ ಕಸರತ್ತು ನಡೆಯುತ್ತಿದ್ದು, ಕೇಂದ್ರದ ಮಾಜಿ ಅರ್ಥ ಸಚಿವ
ಪಿ. ಚಿದಂಬರಂ ಅವರು ಬುಧವಾರ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಚುನಾವಣೆ ಹಾಗೂ ದೇಶದ ಆರ್ಥಿಕ- ಸ್ಥಿತಿಗಳ ಬಗ್ಗೆ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

Advertisement

ಕಾಂಗ್ರೆಸ್‌ ಚುನಾವಣ ಪ್ರಚಾರ ಹೇಗಿದೆ? 
ಜನರ ಒಲವಿನ ಬಗ್ಗೆ ನಾನು ಖುದ್ದಾಗಿ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿಲ್ಲ ವಾದರೂ ಪಕ್ಷದ ನಾಯಕರ ಹಾಗೂ ಕಾರ್ಯ ಕರ್ತರ ಪ್ರಕಾರ ಜನರ ಪ್ರೀತಿ ವಿಶ್ವಾಸವನ್ನು ಪಕ್ಷ ಗಳಿಸುವಲ್ಲಿ ಯಶಸ್ವಿ ಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಲ್ಲಿನ ಇನ್ನಿತರ ನಾಯಕರ ಪ್ರಕಾರ ಕಾಂಗ್ರೆಸ್‌ ಒಂದನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮತ್ತೂಮ್ಮೆ ಅಧಿಕಾರದ ಚುಕ್ಕಾಣಿ ಹಿಡಿ ಯುವುದರಲ್ಲಿ ಯಾವ ಅನುಮಾನವೂ ಇಲ್ಲ. 

ರಾಜ್ಯದಲ್ಲಿ ಮೋದಿ ಅಲೆ ಇದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲಾ? ಅದು ನಿಜವೇ? 
ಎಲ್ಲಿದೆ ಹೇಳಿ ಮೋದಿ ಅಲೆ? ಅದು ಕೇವಲ ಮಾಧ್ಯಮದ ಸೃಷ್ಟಿಯೇ ಹೊರತು ನೈಜವಾಗಿ ಕರ್ನಾಟಕದಲ್ಲಿ ಮೋದಿ ಅಲೆ ಇದೆ ಎಂಬುದೇ ಸುಳ್ಳು. ಬಿಜೆಪಿಯು ಉತ್ತರ ಪ್ರದೇಶ, ಉತ್ತರಾಖಂಡ, ತ್ರಿಪುರ ರಾಜ್ಯಗಳನ್ನು ಬಿಟ್ಟರೆ, ಪಂಜಾಬ್‌, ಗೋವಾ, ಮಣಿಪುರ, ಮೇಘಾಲಯ, ಬಿಹಾರ ಮೊದಲಾದೆಡೆ ಸೋತಿರುವುದು ಸತ್ಯವಲ್ಲವೇ? ಮಣಿಪುರ, ಮೇಘಾಲಯ ಹಾಗೂ ಗೋವಾದಲ್ಲಿ ಬಿಜೆಪಿ ಸೋತಿದ್ದರೂ ಸರಕಾರ ರಚಿಸಲು ಸಫಲ ವಾಗಿದೆ. ಹೀಗಾಗಿ ಅಲ್ಲಿ ಮೋದಿ ಅಲೆ ಇದೆ ಎಂದರ್ಥವಲ್ಲ. ಅದು ಜನರ ಇಚ್ಛೆಗೆ ವಿರುದ್ಧವಾಗಿ ನಿರ್ಮಿಸ ಲ್ಪಟ್ಟ ಸರಕಾರ. ಏಕೆಂದರೆ ಜನರು ಚುನಾವಣೆಯಲ್ಲಿ ತಿರಸ್ಕರಿಸಿದರೂ, ವಾಮ ಮಾರ್ಗದ ಮುಖಾಂತರ ಆ ರಾಜ್ಯಗಳಲ್ಲಿ ಬಿಜೆಪಿ ಸರಕಾರ ರಚಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ತ್ರಿಪುರ ಹೊರತುಪಡಿಸಿದರೆ, ಬಿಜೆಪಿ ಐದು ರಾಜ್ಯಗಳಲ್ಲಿ ಸೋತಿದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. 

ಹಾಗಿದ್ದರೂ ಕರಾವಳಿಯಲ್ಲಿ ತಾವು ಗೆಲ್ಲುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರಲ್ಲಾ?
ಇದು ಬಿಜೆಪಿಯ ವರು ಹೇಳುವಂಥದ್ದಲ್ಲವೇ? ಬಿಜೆಪಿ ಹಣದ ಹೊಳೆ ಹರಿಸಿ ಪ್ರಚಾರ ಕೈಗೊಳ್ಳು ತ್ತಿದೆ. ಅದು ಚುನಾವಣ ಪ್ರಚಾರಕ್ಕೆ ವ್ಯಯಿಸುತ್ತಿರುವ ಹಣದ ಒಂದಂಶವನ್ನೂ ಕಾಂಗ್ರೆಸ್‌ ಸೇರಿದಂತೆ ಉಳಿದ ರಾಜಕೀಯ ಪಕ್ಷಗಳು ಖರ್ಚು ಮಾಡುತ್ತಿಲ್ಲ. ಸುಳ್ಳು ಭರವಸೆಗಳನ್ನು ನೀಡುತ್ತಾ, ಬೃಹತ್‌ ರ್ಯಾಲಿ, ಬ್ಯಾನರ್‌, ಬಂಟಿಂಗ್ಸ್‌ಗಳಿಗೆ ಖರ್ಚು ಮಾಡಿ ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿರುವ ಪರಿಣಾಮ ಜನರಲ್ಲಿ ಈ ಭಾವನೆ ಬಂದಿರಬಹುದು. ಆದರೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮೋದಿ ಮುಖ್ಯಮಂತ್ರಿ ಯಾಗುವುದಿಲ್ಲ ಎಂಬುದನ್ನು ಜನರು ಅರಿತು ಕೊಳ್ಳಬೇಕಿದೆ. ಮುಖ್ಯಮಂತ್ರಿ ಯಾಗುವುದು ಕಳಂಕ ಹೊತ್ತ ಯಡಿಯೂರಪ್ಪ ಎಂಬುದನ್ನು ಜನರು ಮನಗಂಡು ತಮ್ಮ ಅಮೂಲ್ಯ ಮತ ಚಲಾಯಿಸಬೇಕು. 

ಪ್ರಧಾನಿ ಮೋದಿ ಕಾಂಗ್ರೆಸ್‌ ನಾಯಕರನ್ನು ಟೀಕಿಸುವುದೇ ತಪ್ಪು ಎನ್ನುತ್ತಿದ್ದೀರಲ್ಲಾ?
ಪ್ರಧಾನ ಮಂತ್ರಿಯಾದವರು ಬಾಲಿಶವಾಗಿ ಮಾತನಾಡುವುದಾಗಲೀ, ಇನ್ನೊಬ್ಬರ ಬಗ್ಗೆ ಹೇಳಿಕೆಗಳನ್ನು ನೀಡುವುದಾಗಲೀ ತಪ್ಪು. ಅವರು ಕೇವಲ ಬಿಜೆಪಿಯವರಿಗೆ ಮಾತ್ರ ಪ್ರಧಾನಿಯಲ್ಲ. ಅವರು ದೇಶದ ಸಮಸ್ತ ಜನತೆಯ ಪ್ರತಿನಿಧಿ. ಸಿದ್ದರಾಮಯ್ಯ ವಿರುದ್ಧ ಯಾವ ಗುರುತರ ಆರೋಪಗಳಿವೆ ಹೇಳಿ? ಅವರ ವಿರುದ್ಧ ಭ್ರಷ್ಟಾ ಚಾರದ ಆರೋಪಗಳಿವೆ ಎಂದು ಹೇಳುವ ಪ್ರಧಾನಿಯವರ ಪಕ್ಕದಲ್ಲಿ ಅವರೇ ಘೋಷಿಸಿದ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಕುಳಿತುಕೊಳ್ಳುತ್ತಾರೆ. ಹಾಗಿದ್ದರೆ ಮೋದಿ ಯಾವ ನೈತಿಕತೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಯಾವುದೇ ದಾಖಲೆಗಳಿಲ್ಲದೆ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಾರೆ? ಮೋದಿ ಪ್ರಧಾನಿ ಹುದ್ದೆೆಯ ಘನತೆಯನ್ನು ಕಾಪಾಡಿಕೊಂಡು ಮಾತನಾಡುವ ಅಗತ್ಯವಿದೆ. ಕೇಂದ್ರ ಕೊಟ್ಟ ಅನುದಾನವನ್ನು ರಾಜ್ಯ ಬಳಸಿಕೊಳ್ಳಲಾಗಿಲ್ಲ ಎಂಬುದು ಕೂಡ ಶುದ್ಧ ಸುಳ್ಳು. 

Advertisement

ಇತ್ತೀಚೆಗಿನ ದಿನಗಳಲ್ಲಿ ಹೊರಬರುತ್ತಿರುವ ಬ್ಯಾಂಕ್‌ ಹಗರಣಗಳಿಂದಲೂ ಅರ್ಥ ವ್ಯವಸ್ಥೆ ಕುಸಿದಿರಬಹುದಲ್ಲವೇ ?
ನಿಜ. ಬ್ಯಾಂಕ್‌ಗೆ ಮೋಸ ಮಾಡಿ ವಿದೇಶದಲ್ಲಿ ಮರೆಯಾಗುವುದು ಕೂಡ ದೇಶದ ಆರ್ಥಿಕತೆಗೆ ಹೊಡೆತ ನೀಡುತ್ತಿದೆ. ವಿಜಯ್‌ ಮಲ್ಯ, ನೀರವ್‌ ಮೋದಿ ಸೇರಿದಂತೆ ಹಲವರು ಉದ್ಯಮಿಗಳು ಬ್ಯಾಂಕಿನಿಂದ ಸಾಲ ಪಡೆದು ವಿದೇಶದಲ್ಲಿ ಮರೆಯಾಗುವಂತೆ ಮಾಡಿದ್ದು ಕೂಡ ಈಗಿನ ಕೇಂದ್ರ ಸರಕಾರ. ಏಕೆಂದರೆ ಮಲ್ಯ ಹಾಗೂ ನೀರವ್‌ ಮೋದಿ ಬ್ಯಾಂಕಿಗೆ ಮೋಸ ಮಾಡಿದ ಅರಿವಿದ್ದರೂ ಅವರನ್ನು ಬಂಧಿಸುವ ಕೆಲಸವಾಗಿಲ್ಲ. ಈ ಇಬ್ಬರು ವಂಚಕರ ಚಲನವಲನದ ಬಗ್ಗೆ ಬಿಜೆಪಿ ನಾಯಕರಿಗೆ ಪೂರ್ತಿ ಗೊತ್ತಿದ್ದರೂ ಅವರನ್ನು ವಿದೇಶದಲ್ಲಿ ರಕ್ಷಣೆ ಮಾಡಲಾಗಿರುವುದು ದೇಶದ ಆರ್ಥಿಕತೆಗೆ ಕೊಟ್ಟ ಬಹುದೊಡ್ಡ ಹೊಡೆತವಲ್ಲವೇ?

ಮೋದಿ ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ? 
ತೀರಾ ಹದಗೆಟ್ಟಿದೆ. ಲೋಕಸಭೆ ಚುನಾವಣೆಯ ಸಂದರ್ಭ ಮೋದಿ ನೀಡಿದ್ದ‌ ಆಶ್ವಾಸನೆಗಳಲ್ಲಿ ಒಂದಾದ ಉದ್ಯೋಗ ಸೃಷ್ಟಿ ಸುಳ್ಳೆಂದು ಈಗಾಗಲೇ ಸಾಬೀತಾಗಿದೆ. ಉದ್ಯೋಗ ಸೃಷ್ಟಿಯಾಗಬೇಕೆಂದರೆ ರಫ್ತು ಪ್ರಮಾಣದಲ್ಲಿ ಹೆಚ್ಚಳ ಉಂಟಾಗಬೇಕು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಇದು ತೀವ್ರವಾಗಿ ಕುಸಿದಿದೆ. ಹಾಗಾಗಿ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಯಾವುದೇ ದೇಶದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲವೆಂದಾದರೆ ಹಾಗೂ ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿಲ್ಲವೆಂದಾದರೆ, ಆ ದೇಶ ಆರ್ಥಿಕ ಅಧಃಪತನದತ್ತ ಸಾಗುತ್ತಿದೆ ಎಂದರ್ಥ. ಮಹತ್ತರ ಯೋಜನೆಗಳ ಸ್ಥಾಪನೆಗೆ ದೇಶದಲ್ಲಿ ಪೂರಕ ಸನ್ನಿವೇಶಗಳೇ ಇಲ್ಲ. ಏಕೆಂದರೆ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಇತೀ¤ಚಿನ ದಿನಗಳಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 40 ಡಾಲರ್‌ಗೆ ಇಳಿದಾಗಲೂ ಮೋದಿ ಸರಕಾರ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಇಳಿಕೆ ಮಾಡಿಲ್ಲ. ಇದನ್ನು ದೇಶದ ಯುವಕರು ಪ್ರಶ್ನಿಸಬೇಕು. 

ದಲಿತರು ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುವುದು ಶಾಸಕಾಂಗ ಪಕ್ಷ. ಈಗಾಗಲೇ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವುದರಿಂದ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂಬ ಪ್ರಶ್ನೆ ಎಲ್ಲಿಂದ ಬರುತ್ತದೆ ಹೇಳಿ? 

ಗಣೇಶ್‌ ಮಾವಂಜಿ

Advertisement

Udayavani is now on Telegram. Click here to join our channel and stay updated with the latest news.

Next