ಹೊಸದಿಲ್ಲಿ: ಕೋವಿಡ್ ಲಸಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಂದು ಕೆಲವು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಒಬ್ಬ ವ್ಯಕ್ತಿಗೆ ಭಿನ್ನ ಲಸಿಕೆಗಳ ಡೋಸ್ ಗಳನ್ನು ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅದಲ್ಲದೆ ಪ್ರತಿಯೊಬ್ಬರೂ ಎರಡು ಡೋಸ್ ಲಸಿಕೆ ಪಡೆಯಬೇಕು ಎಂದು ಸ್ಪಷ್ಟಪಡಿಸಿದೆ.
ಪರಿಣಾಮದ ಬಗ್ಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹವಾಗುವವರೆಗೆ ಭಾರತದಲ್ಲಿ ಕೋವಿಡ್ -19 ಮಿಶ್ರ ಲಸಿಕೆ ನೀಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಸುದ್ದಿಗಾರರಿಗೆ ಮಾಹಿತಿ ನೀಡಿದ ಕೋವಿಡ್ ಟಾಸ್ಕ್ ಫೋರ್ಸ್ ನ ಪ್ರಮುಖ ಸದಸ್ಯ ಡಾ. ವಿ.ಕೆ. ಪೌಲ್, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕಾ ಶೆಡ್ಯೂಲ್ ನಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಎಂದರು.
ಇದನ್ನೂ ಓದಿ:ಕೋವಿಡ್ 19:ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಿ : ಕೇಂದ್ರಕ್ಕೆ ಕೇಜ್ರಿವಾಲ್ ಮನವಿ
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗಳನ್ನು ಎರಡು ಡೋಸ್ ನಂತೆ ನೀಡಲಾಗುತ್ತಿದೆ. ಮುಂದೆಯೂ ಅದೇ ಮುಂದುವರಿಯುತ್ತದೆ. ಮೊದಲ ಡೋಸ್ ಕೋವಿಶೀಲ್ಡ್ ಪಡೆದ 12 ವಾರಗಳ ಬಳಿಕ ಎರಡನೇ ಡೋಸ್ ಪಡೆಯಬೇಕು. ಕೋವಾಕ್ಸಿನ್ ಅನ್ನು ಮೊದಲ ಡೋಸ್ ಪಡೆದ 4ರಿಂದ ಆರು ವಾರಗಳ ನಡುವೆ ಪಡೆಯಬೇಕು ಎಂದು ಅವರು ಹೇಳಿದರು.