ದಾವಣಗೆರೆ: ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡಬೇಕು ಎಂಬ ನಿಯಮ ಜಾರಿಮಾಡದಂತೆ ಆಗ್ರಹಿಸಿ ಜೆಡಿಎಸ್ ವಿಕಲಚೇತನರ ಜಿಲ್ಲಾ ಘಟಕ ಗುರುವಾರ ನಗರದಲ್ಲಿ ಮೆರವಣಿಗೆ ನಡೆಸಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಶ್ರೀ ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು ವಿದ್ಯಾನಗರರಸ್ತೆಯಲ್ಲಿನ ಲೀಡ್ ಬ್ಯಾಂಕ್ ಗೆ ತೆರಳಿ, ವ್ಯವಸ್ಥಾಪಕರ ಮೂಲಕ ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ನ ಉಳಿತಾಯ ಖಾತೆಗಳಲ್ಲಿ 2 ರಿಂದ 3 ಸಾವಿರ ರೂಪಾಯಿ ಕನಿಷ್ಠ ಠೇವಣಿ ಇರಿಸಬೇಕು.
ಇಲ್ಲದೇ ಇದ್ದರೆ ದಂಡ ವಿಧಿಸುವ ನಿಯಮವೊಂದನ್ನು ಆರ್‌ಬಿಐ ತರಲು ಮುಂದಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ ಎಂದು ತಿಳಿಸಿದರು. ಅಂಗವಿಕಲ ಬಾಂಧವರು ತಿಂಗಳ ಮಾಸಾಶನ ನಂಬಿಕೊಂಡು ಜೀವನ ನಡೆಸುವಂತಾಗಿದೆ. ಮಾಸಾಶವನ್ನೇ ನಂಬಿರುವ ನಾವು ಕೆಲವೊಮ್ಮೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತಿರುತ್ತೇವೆ.
ಮಾಶಾಸನ ಸಮಯಕ್ಕೆ ಸರಿಯಾಗಿ ಬಾರದಿದ್ದರೆ ಒಪ್ಪೊತ್ತಿನ ಊಟಕ್ಕೂ ಇಲ್ಲದೇ ಉಪವಾಸ ಇರಬೇಕಾಗುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಹಣದ ಅವಶ್ಯಕತೆ ಇರುತ್ತದೆ ಆಗ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.
ಆದ ಕಾರಣ ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 2 ರಿಂದ 3 ಸಾವಿರ ರೂ.ಹಣ ಕಡ್ಡಾಯವಾಗಿ ಖಾತೆಯಲ್ಲಿ ಇರಬೇಕು ಎಂಬ ನಿಯಮ ಜಾರಿಮಾಡಬಾರದು ಎಂದು ಮನವಿ ಮಾಡಿದರು.
ಮುಖಂಡರಾದ ಎಚ್.ಎಚ್. ಚಂದ್ರಶೇಖರಪ್ಪ, ರೈತ ಘಟಕದ ರಾಜ್ಯ ಸಂಚಾಲಕ ಹುಲ್ಮನಿ ಠಾಕೂರ್, ರಾಜ್ಯ ಹಿರಿಯ ಉಪಾಧ್ಯಕ್ಷ ಎಂ. ಮಹಮ್ಮದ್ ಗೌಸ್, ಉತ್ತರ ವಲಯ ಅಧ್ಯಕ್ಷ ಸಂಗನಗೌಡ್ರು, ಟಿ. ಅಜ್ಜೆಶಿ, ಐ.ಎಚ್. ಭೀಮೇಶ್‌ಕುಮಾರ್, ಯುವ ಘಟಕದ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್, ಜಿ.ರಾಜೇಶ್ವರಿ ಅಂಜಿನಪ್ಪ, ಹೊನ್ನಮ್ಮ, ಕಮಲಮ್ಮ, ಪಿ.ಗಾಯತ್ರಿ, ಸಾಕಮ್ಮ, ಟಿ.ಅಜರ್ ನೇತೃತ್ವ ವಹಿಸಿದ್ದರು.