Advertisement

ಮಂಗಳವಾರದಿಂದ ಊಟ ಮಾಡಿಲ್ಲ: 10ಕಿ.ಮೀ ನಡೆದು ರೈಲು ನಿಲ್ದಾಣ ತಲುಪಿದ್ದೇವೆ

06:14 PM Mar 03, 2022 | Team Udayavani |

ರಬಕವಿ-ಬನಹಟ್ಟಿ: ಮಂಗಳವಾರ ಮಧ್ಯಾಹ್ನದಿಂದ ಹೊಟ್ಟೆ ತುಂಬ ಊಟ ಮಾಡಿಲ್ಲ. ಇದ್ದಷ್ಟು ತಿಂಡಿಗಳು ಮುಗಿದಿವೆ. ಓಲೆಸ್ಕಾವಿಸ್ಕಿ ನಗರದ ಹಾಸ್ಟೆಲ್‍ ಬಂಕರನಿಂದ ಬುಧವಾರ ಅಂದಾಜು 10 ಕಿ.ಮೀ ದೂರ ನಡೆದು ಖಾರ್ಕಿವಾ ನಗರದ ರೈಲು ನಿಲ್ದಾಣವನ್ನು ತಲುಪಿದ್ದೇವೆ ಎಂದು ಉಕ್ರೇನ್‍ನಲ್ಲಿ ಸಂಕಷ್ಟದಲ್ಲಿರುವ ನಾವಲಗಿ ಗ್ರಾಮದ ಕಿರಣ ಸವದಿ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.

Advertisement

ರೈಲು ನಿಲ್ದಾಣದಲ್ಲಿ ಮೊದಲೇ ಸಾವಿರಾರು ಜನರು ಇದ್ದರು. ಉಕ್ರೇನ್ ನಿವಾಸಿಗರು ಅಧಿಕ ಸಂಖ್ಯೆಯಲ್ಲಿದ್ದರು. ಭಾರತೀಯ ಮಹಿಳೆಯರಿಗೆ ರೈಲಿನಲ್ಲಿ ಸ್ಥಳಾವಕಾಶ ನೀಡಿದರು. ಭಾರತೀಯ ಯುವಕರಿಗೆ ರೈಲಿನಲ್ಲಿ ಹತ್ತಲು ಅಲ್ಲಿಯ ಅಧಿಕಾರಿಗಳು ಪರವಾನಿಗೆ ನೀಡಲಿಲ್ಲ. ನಾವು ಹೆಚ್ಚು ಹಣವನ್ನು ನೀಡುತ್ತೇವೆ ಎಂದರೂ ಅವರು ಒಪ್ಪಲಿಲ್ಲ ಎಂದು ಹೇಳಿದರು.

ನಂತರ ಖಾರ್ಕಿವಾ ನಗರದ ಮೇಲೂ ಬಾಂಬ್ ದಾಳಿ ನಡೆಯುತ್ತದೆ ಎಂಬ ಸುದ್ದಿ ಬಂದಿತ್ತು. ಭಾರತೀಯ ರಾಯಭಾರಿಗಳು ನೀಡಿದ ಮಾಹಿತಿಯಂತೆ ನಾವು ಮತ್ತೆ ಸಂಜೆ ಮತ್ತೆ 12 ಕಿ.ಮೀ ಆಹಾರವಿಲ್ಲದೆ ನಡೆದುಕೊಂಡು ಪಿಸೊಚ್ಚಿನ ಸ್ಥಳಕ್ಕೆ ಭಾರತೀಯ ಕಾಲಮಾನದ ಪ್ರಕಾರ ಬುಧವಾರ ರಾತ್ರಿ 10.30 ಕ್ಕೆ ಬಂದು ತಲುಪಿದೆವು. ಇಲ್ಲಿ ನಮಗೆ ಯಾವುದೆ ಯುದ್ಧದ ಭಯವಿಲ್ಲ. ಅದರೆ ಬಾಂಬ್ ದಾಳಿಯ ಸದ್ದು ಕೇಳಿ ಬರುತ್ತಿದೆ. ಆದರೆ ಯಾವುದೆ ತೊಂದರೆ ಇಲ್ಲ. ಈಗ ನಾವು ಒಂದು ಹಾಸ್ಟೆಲನಲ್ಲಿ ವಾಸವಾಗಿದ್ದೇವೆ. ಇಂದಾದರೂ ರಾತ್ರಿ ಕಣ್ಮುತುಂಬ ನಿದ್ದೆ ಮಾಡುತ್ತೇವೆ. ಕಿರಣ ಸವದಿಯವರ ಜೊತೆಗ ಬೀದರ್‍ ನ ವಿವೇಕ ಮತ್ತು ಬ್ಯಾಡಗಿಯ ಕೌಶಲ ಇದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಉಕ್ರೇನ್ ಸಂಕಷ್ಟ: ಉಜಿರೆಯ ಹೀನಾ ಫಾತಿಮಾ ಹಂಗೇರಿ ಕಡೆಗೆ ರೈಲಿನಲ್ಲಿ ಪ್ರಯಾಣ

ಇಲ್ಲಿ ಯಾವುದೆ ರೀತಿಯ ಆಹಾರ ದೊರೆಯುತ್ತಿಲ್ಲ. ನಮಗೆ ಸಹಾಯ ಮಾಡಲು ಯಾವುದೆ ಜನರು ಮುಂದೆ ಬರುತ್ತಿಲ್ಲ. ನಾವು ಬಹಳಷ್ಟು ಜನರು ಇರುವುದರಿಂದ ನಮಗೆ ಆಹಾರ ಕೊಡಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ. ಭಾರತೀಯ ರಾಯಭಾರಿಗಳಿಂದ ಯಾವುದೆ ಮಾಹಿತಿ ಇಲ್ಲದಂತಾಗಿದೆ. ನಮಗೆ ಏನು ತೋಚುತ್ತಿಲ್ಲ. ಬಹಳಷ್ಟು ಕಷ್ಟದಲ್ಲಿದ್ದೇವೆ ಎಂಬ ಆತಂಕ ವ್ಯಕ್ತಪಡಿಸಿದರು.

Advertisement

ನಮ್ಮ ಮಕ್ಕಳ ಬಗ್ಗೆ ಬಹಳಷ್ಟು ಆತಂಕ ಉಂಟಾಗಿದೆ. ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದಾರೆ. ನಮ್ಮ ಮಕ್ಕಳನ್ನು ಆದಷ್ಟು ಬೇಗನೆ ರಕ್ಷಣೆ ಮಾಡಬೇಕು. ಅವರನ್ನು ಕೂಡಾ ಆದಷ್ಟು ಬೇಗನೆ ಭಾರತಕ್ಕೆ ಕರೆ ತರುವಂತೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಕಿರಣ ಸವದಿಯವರ ತಂದೆ ಲಕ್ಷ್ಮಣ ಸವದಿ ಮತ್ತು ಮಹಾದೇವಿ ಸವದಿ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next