Advertisement

ಹೊಂದಾಣಿಕೆ ಪ್ರಶ್ನೆಯೇ ಇಲ್ಲ, ಸ್ಪರ್ಧೆ ಮಾಡಲು ಸಿದ್ಧ

12:02 PM Jan 21, 2018 | Team Udayavani |

ಮೈಸೂರು: ಮುಂಬರುವ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಬಂಡಾಯ ಅಭ್ಯರ್ಥಿ ಕೆ.ಹರೀಶ್‌ ಗೌಡ ಹೇಳಿದರು. ನಗರದಲ್ಲಿ ನಡೆದ ನಿಮ್ಮೊಳಗೊಬ್ಬ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಕಳೆದ 12 ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್‌ ಸಂಘಟನೆಯಲ್ಲಿ ತೊಡಗಿದ್ದ ನನಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್‌ ದೊರೆಯುವ ಭರವಸೆ ಇತ್ತು.

Advertisement

ಕ್ಷೇತ್ರದ ನಮ್ಮ ಕಾರ್ಯಕರ್ತರು ಹಾಗೂ ಹಿತೈಷಿಗಳಲ್ಲೂ ಅದೇ ಭಾವನೆ ಇತ್ತು. ಆದರೆ, ನಂತರ ನಡೆದ ಬೆಳವಣಿಗೆಗಳಿಂದಾಗಿ ಪಕ್ಷೇತರವಾಗಿಯೇ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ ಎಂದರು. 2013ರ ಚುನಾವಣೆಯಲ್ಲೇ ಚಾಮರಾಜ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ,

ಆದರೆ, ಎಚ್‌.ಎಸ್‌.ಶಂಕರಲಿಂಗೇಗೌಡ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್‌ ಸೇರ್ಪಡೆಯಾದದ್ದರಿಂದ ಮನಃಪೂರ್ವಕವಾಗಿ ಹಿಂದೆ ಸರಿದೆ, 2016ರ ಡಿಸೆಂಬರ್‌ ವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ವಿಶ್ರಾಂತ ಕುಲಪತಿ ಪೊ›.ರಂಗಪ್ಪರನ್ನು ಫೋಕಸ್‌ ಮಾಡಲು ಶುರು ಮಾಡಿದರು,

ಕ್ಷೇತ್ರ ವ್ಯಾಪ್ತಿಯಲ್ಲೇ ನಡೆದ ಕುಮಾರಪರ್ವ ಸಮಾವೇಶಕ್ಕೆ ನಗರ ಜೆಡಿಎಸ್‌ ಅಧ್ಯಕ್ಷನಾಗಿದ್ದ ನನಗೆ ಆಹ್ವಾನ ಇರಲಿಲ್ಲ. ಏಕಾಏಕಿ ನಗರ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಯಿತು. ಹೀಗಾಗಿ ನಾನು ಜೆಡಿಎಸ್‌ ಬಿಟ್ಟು ಬಂದಿಲ್ಲ. ಅವರೇ ನನ್ನನ್ನು ಹೊರಹಾಕಿರುವುದರಿಂದ ಪಕ್ಷೇತರವಾಗಿಯೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಈ ಮಧ್ಯೆ ಕಾಂಗ್ರೆಸ್‌ ಮತ್ತು ಬಿಜೆಪಿಯ ರಾಜ್ಯಮಟ್ಟದ ನಾಯಕರುಗಳು ತಮ್ಮೊಂದಿಗೆ ಮಾತುಕತೆ ನಡೆಸಿದ್ದು, ಟಿಕೆಟ್‌ ಭರವಸೆ ನೀಡಿದರೆ ಪಕ್ಷಕ್ಕೆ ಬರುವುದಾಗಿ ಹೇಳಿದ್ದೇನೆ. ಜೆಡಿಎಸ್‌ನ ಸ್ಥಳೀಯ ನಾಯಕರೂ ಸಹ ಅವಕಾಶ ದೊರೆಯುವ ಭರವಸೆ ನೀಡಿದ್ದಾರೆ.

Advertisement

ಹೀಗಾಗಿ ಯಾವುದೇ ಅವಕಾಶಗಳನ್ನೂ ಕೈಚೆಲ್ಲದೆ ಹಿತೈಷಿಗಳ ಸಲಹೆಯಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಪಕ್ಷೇತರ ಅಥವಾ ಬೇರೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಂತೂ ಸತ್ಯ ಎಂದರು. ಇತಿಹಾಸ ತಜ್ಞ ಪೊ›.ಪಿ.ವಿ.ನಂಜರಾಜ ಅರಸು,

ಬಸವಾನಂದ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮೊಹಮ್ಮದ್‌ ಇಬ್ರಾಹಿಂ, ಮುಖಂಡರಾದ ನಿಂಗೇಗೌಡ, ಕಪನಿಗೌಡ, ಅನಂತ್‌, ಚಿಕ್ಕತಮ್ಮಣ್ಣ, ಕಾಂತರಾಜು, ನಾರಾಯಣ, ಎಸ್‌.ಮಂಜುನಾಥ್‌, ಚಿಕ್ಕರಾಮಣ್ಣ, ಫಾಲ್ಕನ್‌ ಶಂಕರ್‌, ಮುಸ್ತಾಕ್‌ ಅಹಮದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next