ಭಟ್ಕಳ : ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಅನುದಾನ ನೀಡಿ ಹೊಸ ಆಂಬ್ಯುಲೆನ್ಸ್ ಖರೀದಿ ಮಾಡಿದ್ದು ಮೊಬೈಲ್ ಆರೋಗ್ಯ ತಪಾಸಣೆಯನ್ನು ಮಾಡಲು ಉಪಯೋಗಕ್ಕೆಂದು ನೀಡಲಾಗಿತ್ತು. ಸರಕಾರದ ನಿಯಮದಂತೆ ಈ ಮೊಬೈಲ್ ಹೆಲ್ತ್ ಚೆಕ್‌ಅಪ್‌ನ್ನು ಕಾರವಾರದ ಅಪೋಲೋ ಕ್ಲಿನಿಕ್ ಮಾಡಬೇಕಾಗಿದ್ದರೂ ಸಹ ಕಳೆದ ಕೆಲವು ತಿಂಗಳಿಂದ ವಾಹನ ಭಟ್ಕಳದಲ್ಲಿಯೇ ನಿಂತುಕೊಂಡಿದ್ದು ತುಕ್ಕು ಹಿಡಿಯುತ್ತಿದೆ.
ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಾರ್ಮಿಕರ ಹಿತದೃಷ್ಟಿಯಿಂದ ಆರಂಭಿಸಲಾದ ಯೋಜನೆ ಇಂದು ಸರಿಯಾದ ನಿರ್ವಹಣೆ ಇಲ್ಲದೇ ಹಳ್ಳ ಹಿಡಿಯುತ್ತಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದ ಅಂಬುಲೆನ್ಸ್ ತುಕ್ಕು ಹಿಡಿಯುತ್ತಿದೆ.
ಹಿಂದೆ ಸರಕಾರ ಕಾರ್ಮಿಕರಿಗಾಗಿ ಈ ಯೋಜನೆಯನ್ನು ಆರಂಭಿಸಿದಾಗ ಭಟ್ಕಳದಲ್ಲಿ ಕಾರ್ಮಿಕ ಇಲಾಖೆಯ ಇನ್ಸ್ ಪೆಕ್ಟರ್ ಆಗಿದ್ದ ಗುರುಪ್ರಸಾದ್ ಅವರು ಎರಡು ಅಂಬುಲೆನ್ಸ್ ತರಿಸಿ ಭಟ್ಕಳ ಹೊನ್ನಾವರದಲ್ಲಿ ಆರಂಭಿಸಿದ್ದರು. ಮೊದ ಮೊದಲು ಭಟ್ಕಳದಲ್ಲಿ ಕಾರ್ಮಿಕರಿಂದ ಉತ್ತಮ ಪ್ರತಿಕ್ರಿಯೆ ಬಾರದ್ದರಿಂದ ಸಾಕಷ್ಟು ಪ್ರಚಾರ ನೀಡಿದ್ದರು. ನಂತರ ಹೊನ್ನಾವರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಅಲ್ಲಿನ ಗ್ರಾಮೀಣ ಭಾಗದ ಕಾರ್ಮಿಕರು ಪ್ರಯೋಜನ ಪಡೆದಿದ್ದರು. ಆದರೆ ಭಟ್ಕಳದಲ್ಲಿ ಕುಂಟುತ್ತಾ ಸಾಗಿದ ಯೋಜನೆ ನಂತರ ಎಂ.ಎಲ್.ಸಿ. ಚುನಾವಣೆಯ ವೇಳೆಗೆ ನೀತಿ ಸಂಹಿತೆಯ ನೆಪವೊಡ್ಡಿ ನಿಂತು ಹೋಗಿತ್ತು. ಆಗ ನಿಂತುಕೊಂಡಿದ್ದ ಅಂಬುಲೆನ್ಸ್ ಇನ್ನೂ ತನಕ ನಿಂತುಕೊಂಡೇ ಇದೆ.
ಇದನ್ನೂ ಓದಿ : “ದಿವ್ಯ ಕಾಶಿ – ಭವ್ಯ ಕಾಶಿ”ಯನ್ನು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶಿಸಲಿ: ಸಿಎಂ
ಈಗಾಗಲೇ ಇನ್ನೊಂದು ಅಂಬುಲೆನ್ಸ್ ಮುಂಡಗೋಡಿಗೆ ಹೋಗಿ ಅಲ್ಲಿ ಆರೋಗ್ಯ ತಪಾಸಣೆಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ. ಆದರೆ ಭಟ್ಕಳದಲ್ಲಿ ಮಾತ್ರ ತುಕ್ಕು ಹಿಡಿಯುತ್ತಿರುವ ಅಂಬುಲೆನ್ಸ್ ತನ್ನ ಕಾರ್ಯವನ್ನು ಆರಂಭಿಸಿಯೇ ಇಲ್ಲ.
ಸರಕಾರದಿಂದ ಅಂಬುಲೆನ್ಸ್ ನಲ್ಲಿ ಆರೋಗ್ಯ ತಪಾಸಣೆಯ ಟೆಂಡರ್ ಅಪೋಲೋ ಹೆಲ್ತ್ ಕ್ಲಿನಿಕ್ ಎನ್ನುವ ಸಂಸ್ಥೆ ಪಡೆದುಕೊಂಡಿದ್ದು ಅಂಬುಲೆನ್ಸ್ ಮೇಲೆ ತಮ್ಮ ನಂಬರನ್ನು ಸಹ ನಮೂದಿಸಿಲ್ಲ. ಅಂಬುಲೆನ್ಸ್ ನಲ್ಲಿ ಅಪೋಲೋ ಕ್ಲಿನಿಕ್ ಕಾರವಾರ ಎಂದು ಬರೆದಿದ್ದರೂ ಕೂಡಾ ಕಾರವಾರದಲ್ಲಿ ಯಾವುದೇ ಅಸ್ತಿತ್ವ ಇಲ್ಲದೇ ಬೆಂಗಳೂರಿನಲ್ಲಿಯೇ ಕೇಂದ್ರೀಕೃತವಾಗಿದೆ ಎಂದು ತಿಳಿದು ಬಂದಿದೆ.
ನಾನು ಹೊಸದಾಗಿ ಚಾರ್ಜ್ ತೆಗೆದುಕೊಂಡಿದ್ದೇನೆ, ನನಗೆ ಅಂಬುಲೆನ್ಸ್ ಬಗ್ಗೆಯಾಗಲೀ, ಅದನ್ನು ನಿರ್ವಹಣೆ ಮಾಡುವ ಏಜೆನ್ಸಿಯ ಬಗ್ಗೆಯಾಗಲೀ ತಿಳಿದಿಲ್ಲ.
– ತೀರ್ಥಬಾಬು, ಕಾರ್ಮಿಕ ಇಲಾಖೆಯ ಇನ್ಸಪೆಕ್ಟರ್.