ನವದೆಹಲಿ: ಸೋಮವಾರವಷ್ಟೇ ಲೋಕಸಭೆಯಲ್ಲಿ ಅಂಗೀಕಾರಗೊಂಡ ಬಹುಚರ್ಚಿತ ಪೌರತ್ವ ತಿದ್ದುಪಡಿ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡಿಸಲ್ಪಟ್ಟಿದೆ. ಈ ತಿದ್ದುಪಡಿ ಮಸೂದೆ ಮೆಲಿನ ಚರ್ಚೆಗಾಗಿ ಬರೋಬ್ಬರಿ ಆರು ತಾಸುಗಳನ್ನು ಮೀಸಲಿರಿಸಲಾಗಿದೆ.
ಕಾಂಗ್ರೆಸ್, ಎ.ಐ.ಎಂ.ಐ.ಎಂ. ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ತೀವ್ರ ವಿರೋಧ ವ್ಯಕ್ತಪಡಿಸುವ ಸೂಚನೆ ಲಭಿಸಿದೆ. ಕಾಂಗ್ರೆಸ್ ಪಕ್ಷವು ಈಗಾಗಲೇ ತನ್ನ ಸಂಸದರಿಗೆ 3-ಲೈನ್ ವಿಪ್ ಅನ್ನು ಜಾರಿಗೊಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಈ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ. ಈಗಾಗಲೇ ಚರ್ಚೆ ಪ್ರಾರಂಭವಾಗಿರುವುದರಿಂದ ಭೋಜನ ವಿರಾಮ ಅವಧಿಯನ್ನು ರದ್ದುಪಡಿಸಲಾಗಿದೆ.
ಪಕ್ಷದ ಪ್ರಣಾಳಿಕೆ ಸಂವಿಧಾನಕ್ಕಿಂತ ಮಿಗಿಲಾದುದಲ್ಲ ಎಂಬ ಮಾತನ್ನು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರುವ ಆಶ್ವಾಸನೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ ಎಂಬ ಹಿನ್ನಲೆಯಲ್ಲಿ ಆನಂದ್ ಶರ್ಮಾ ಅವರು ಈ ಮಾತನ್ನು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನ ಡೆರೆಕ್ ಓಬ್ರಿಯಾನ್ ಅವರು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ‘ತಾನು ಈ ವಿಚಾರದ ಕುರಿತಾಗಿ ಮಾತನಾಡಲು ಕಳೆದ ನಾಲ್ಕು ವರ್ಷಗಳಿಂದ ತಯಾರಿ ನಡೆಸುತ್ತಿದ್ದೆ’ ಎಂದು ಹೇಳಿದ್ದಾರೆ. ಬಂಗಾಳಿಯಲ್ಲಿ ತಮ್ಮ ಮಾತನ್ನು ಪ್ರಾರಂಭಿಸಿದ ಓಬ್ರಿಯಾನ್ ಬಳಿಕ ಇಂಗ್ಲಿಷ್ ನಲ್ಲಿ ಮಾತನಾಡಿದರು.
ತಿದ್ದುಪಡಿ ಮಸೂದೆಯ ಪರವಾಗಿ ಮಾತನಾಡಿದ ಜೆ ಪಿ ನಡ್ಡಾ ಈ ತಿದ್ದುಪಡಿ ಮಸೂದೆ ರಾಷ್ಟ್ರೀಯ ಹಿತಾಸಕ್ತಿಯ ಪರವಾಗಿದೆ. ಮತ್ತಿದು ಯಾವುದೇ ಪಕ್ಷ ಅಥವಾ ಪ್ರದೇಶದ ಪರವಾಗಿಲ್ಲ ಎಂದು ಪ್ರತಿಪಾದಿಸಿದರು.