Advertisement

ಹೊಸಂಗಡಿ ಪೇಟೆಯಲ್ಲಿ ಮತ್ತೆ ಕಗ್ಗತ್ತಲು!

11:20 AM May 10, 2022 | Team Udayavani |

ಹೊಸಂಗಡಿ: ಕುಂದಾಪುರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಹೊಸಂಗಡಿ ಪೇಟೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದೆ ಮತ್ತೆ ಕಗ್ಗತ್ತಲು ಆವರಿಸಿದೆ. ಕಳೆದ ವರ್ಷವೂ ಇದೇ ರೀತಿ ಬೆಳಕಿನ ವ್ಯವಸ್ಥೆಯಿಲ್ಲದೆ, ಕತ್ತಲಕೂಪದಂತಾಗಿತ್ತು.

Advertisement

ಕುಂದಾಪುರದಿಂದ ಶಿವಮೊಗ್ಗಕ್ಕೆ ಸಂಚರಿಸುವ ಬಾಳೆಬರೆ ಘಾಟಿ ಮಾರ್ಗದಲ್ಲಿ ಹೊಸಂಗಡಿಯು ಒಂದು ಪ್ರಮುಖ ಪೇಟೆಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾತ್ರ ಇಲ್ಲ. ಕಳೆದ ವರ್ಷವೂ ಇದೇ ರೀತಿ ಪೇಟೆಯಲ್ಲಿ ಕಗ್ಗತ್ತಲು ಆವರಿಸಿದ್ದು, ಆ ಬಳಿಕ ಹೈಮಾಸ್ಟ್‌ ದೀಪದ ವ್ಯವಸ್ಥೆಯನ್ನು ಕೆಪಿಸಿಯವರು ವ್ಯವಸ್ಥೆ ಮಾಡಿಕೊಟ್ಟಿದ್ದರು.

ಆದರೆ ಆಗಲೂ 10 ದೀಪದ ಈ ಹೈಮಾಸ್ಟ್‌ ಕಂಬದಲ್ಲಿ ಅಳವಡಿಸಿದ್ದು ಕೇವಲ 3 ದೀಪಗಳನ್ನು ಮಾತ್ರ. ಕೆಲವು ಸಮಯ 3 ದೀಪ ಉರಿಯುತ್ತಿತ್ತು. ಇದರಿಂದ ಕತ್ತಲಿನಿಂದ ಒಂದಷ್ಟು ಮುಕ್ತಿ ನೀಡಿದಂತಾಗಿತ್ತು. ಆದರೆ ಕಳೆದ 15 ದಿನಗಳ ಹಿಂದಿನ ಸಿಡಿಲಿನಿಂದ ಆ ಮೂರು ದೀಪಗಳಿಗೆ ಹಾನಿಯಾಗಿ, ಸಂಪೂರ್ಣ ಕೆಟ್ಟು ಹೋಗಿದೆ. ಈಗ ಒಂದೂ ಕೂಡ ದೀಪ ಉರಿಯುತ್ತಿಲ್ಲ.

ಪಾದಚಾರಿಗಳಿಗೆ ಅಪಾಯ

ಪೇಟೆಯಿಡೀ ಬೆಳಕಿನ ವ್ಯವಸ್ಥೆಯಿಲ್ಲದ ಕಾರಣ ಅಲ್ಲಿ ರಸ್ತೆ ದಾಟುವ ಪಾದಚಾರಿಗಳು ಮಾತ್ರ ಬಹಳಷ್ಟು ಎಚ್ಚರಿಕೆಯಿಂದಿರಬೇಕಾಗುತ್ತದೆ. ರಾಜ್ಯ ಹೆದ್ದಾರಿ ಆಗಿರುವುದರಿಂದ ನಿರಂತರವಾಗಿ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ರಾತ್ರಿ ವೇಳೆ ಪಾದಚಾರಿಗಳು ರಸ್ತೆ ದಾಟುತ್ತಿರುವುದು ದೂರದಿಂದ ವಾಹನಗಳ ಚಾಲಕರಿಗೆ ಕಾಣುವುದಿಲ್ಲ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಸುದಿನ ವರದಿ

ಹೊಸಂಗಡಿ ಪೇಟೆಯಲ್ಲಿ ಹಿಂದೆಯೂ ಬೆಳಕಿನ ವ್ಯವಸ್ಥೆಯಿಲ್ಲದ ಬಗ್ಗೆ “ಉದಯವಾಣಿ ಸುದಿನ’ವು ವರದಿ ಪ್ರಕಟಿಸಿ, ಗಮನಸೆಳೆದಿತ್ತು. ಆ ಬಳಿಕ ಹೊಸಂಗಡಿ ಗ್ರಾ.ಪಂ. ಮುತುವರ್ಜಿಯಲ್ಲಿ ಕೆಪಿಸಿಯವರು ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.

ವಾರದೊಳಗೆ ವ್ಯವಸ್ಥೆ

ಕೆಲವು ದಿನಗಳ ಹಿಂದೆ ಸಿಡಿಲಿಗೆ ಪೇಟೆಯ ಹೈಮಾಸ್ಟ್‌ ದೀಪಕ್ಕೆ ಹಾನಿಯಾಗಿದ್ದು, ಈ ಬಗ್ಗೆ ನಾನು ಕೆಪಿಸಿಯ ಮುಖ್ಯ ಅಧಿಕಾರಿಗಳ ಬಳಿ ಮಾತನಾಡಿದ್ದು, ವಾರದೊಳಗೆ ಹಾಕಿ ಕೊಡುವ ಭರವಸೆ ನೀಡಿದ್ದಾರೆ. – ಶಾರದಾ ಗೊಲ್ಲ, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next