ಮೈಸೂರು: ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಲೋಪವಾಗದೇ ಹಾಗೂ 18 ವರ್ಷ ತುಂಬಿರುವ ಯುವ ಮತದಾರರು ಹೆಸರು ನೋಂದಾಯಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನೀಡಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ.ಜಾಫರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವುದು, ನೋಂದಣಿ, ಹೊಸ ಮತದಾರರ ಸೇರ್ಪಡೆ, ಇತರೆ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಯಾವುದೇ ಭಾಗದಲ್ಲಿ ಗೊಂದಲಕ್ಕೆ ಅವಕಾಶವಾಗದಂತೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡು ಹೆಚ್ಚಿನ ಯುವ ಮತದಾರರನ್ನು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿ,
ಕಾಲೇಜುಗಳಲ್ಲಿ ಯುವ ಮತದಾರರು ಹೆಚ್ಚು ಇದ್ದು, ಅವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಿ. ಆನ್‌ಲೈನ್ ಮೂಲಕ ಕೂಡ ಅವರು ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ಬಂದಿರುವ ಅರ್ಜಿಗಳನ್ನು ಸಹ ಪರಿಷ್ಕರಿಸಿ ಅಂತಿಮಗೊಳಿಸುವಂತೆ ತಿಳಿಸಿದರು.
ಮೈಸೂರು ಮಹಾ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಜಿಲ್ಲೆಯಲ್ಲಿ ಚುನಾವಣಾ ಸಿಬ್ಬಂದಿ ಕೊರತೆ ಇದೆ ಎಂದು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಡಾ. ಪಿ.ಸಿ.ಜಾಫರ್ ಹೇಳಿದರು.
ರಾಜಕೀಯ ಪಕ್ಷಗಳು ಬೂತ್ ಲೆವಲ್ ಏಜೆಂಟ್‌ಗಳ ಪಟ್ಟಿಯನ್ನು ನೀಡಬೇಕಿದ್ದು, ರಾಜಕೀಯ ಪಕ್ಷಗಳ ಸಭೆ ನಡೆಸಿ ಪಟ್ಟಿ ಪಡೆದುಕೊಳ್ಳುವಂತೆ ತಿಳಿಸಿದರು. ಡಿ.ಜಿಲ್ಲಾಧಿಕಾರಿ ರಂದೀಪ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಪಂ ಸಿಇಒ ಪಿ. ಶಿವಶಂಕರ್, ಉಪವಿಭಾಗಾಧಿಕಾರಿಗಳಾದ ಶಿವೇಗೌಡ, ಕೆ.ನಿತೀಶ್ ಇತರರು ಇದ್ದರು.