Advertisement

ಬಂದರು ಮಂಡಳಿಯಿಂದ ನಿರ್ವಸಿತರಾದವರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ …

12:30 AM Sep 09, 2018 | |

ಸರಕಾರದ ಭರವಸೆಯನ್ನು ನಂಬಿ ಜನರು ಫ‌ಲವತ್ತಾದ ಎಕರೆ ಗಟ್ಟಲೆ ಜಾಗವನ್ನು ತ್ಯಜಿಸಿ, ಅತ್ತ ಜಾಗವೂ ಇಲ್ಲ , ಇತ್ತ ಭವಿಷ್ಯವೂ ಇಲ್ಲದ ಸ್ಥಿತಿಯಲ್ಲಿದ್ದಾರೆ. ಈಗ ಸರಕಾರ ಬಂದರು ಮಂಡಳಿಯನ್ನೇ ಖಾಸಗಿಯವರ ಉಸ್ತುವಾರಿಗೆ ಒಪ್ಪಿಸುವುದು ಯಾವ ನ್ಯಾಯ? ಖಾಸಗಿಯವರ ಒಡೆತನಕ್ಕೆ ಬಿಟ್ಟ ನಂತರ ಇಲ್ಲಿ ಹೊರರಾಜ್ಯದ ಜನರೇ ಕೆಲಸಕ್ಕೆ ಬಂದು ಸೇರಲಿದ್ದಾರೆ. ಕೆಲ ಸಮಯದ ಹಿಂದೆಯಷ್ಟೆ ಮೈನ್‌ ಸೆಕ್ಷನ್‌ನಲ್ಲಿ ಹೊರ ರಾಜ್ಯದ 28 ಜನರು ಕೆಲಸಕ್ಕೆ ಸೇರಿದ್ದಾರೆ.ಆದರೆ ನೌಕರಿ ಕೊಡಬೇಕೆನ್ನುವ ಸ್ಥಳೀಯರ ಮತ್ತು ನಿರ್ವಸಿತರ ಕೂಗಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ.

Advertisement

ಕರ್ನಾಟಕದ ಹೆಬ್ಟಾಗಿಲು ಎಂದೇ ಅರಿಯಲ್ಪಡುವ ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ)ಯು ಉಳ್ಳಾಲ ಶ್ರೀನಿವಾಸ ಮಲ್ಯರ ಕನಸಿನ ಕೂಸು. ಆಗ ಸಂಸತ್ತಿನಲ್ಲಿ ಮಂಗಳೂರನ್ನು (ಮಂಗಳೂರು, ಕೊಡಗು, ಉಡುಪಿ) ಪ್ರತಿನಿಧಿಸುತ್ತಿದ್ದ ಶ್ರೀನಿವಾಸ ಮಲ್ಯರು ಯಾವುದೇ ಮಂತ್ರಿ ಪದವಿಗೆ ಆಶೆ ಪಡದೆ ಕೇವಲ ತನ್ನ ಕ್ಷೇತ್ರದ ಪ್ರಗತಿಗಾಗಿ ಹಾತೊರೆಯುತ್ತಿದ್ದರು. ನವಮಂಗಳೂರು ಬಂದರು, ಮಂಗಳೂರು ವಿಮಾನ ನಿಲ್ದಾಣ, ಉಳ್ಳಾಲ ಸೇತುವೆ, ಸುರತ್ಕಲ್‌ನ ಎನ್‌ಐಟಿಕೆ ಕಾಲೇಜು ಅವರ ಕೊಡುಗೆ. ನವಮಂಗಳೂರು ಬಂದರು ಮಂಡಳಿಯು ಇಡೀ ಕರ್ನಾಟಕದ ಪ್ರಗತಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಎಂಸಿಎಫ್, ಕುದುರೆಮುಖ, ಎಂಆರ್‌ಪಿಎಲ್‌, ಬಿಎಎಸ್‌ಎಫ್, ಎಚ್‌ಪಿಸಿಎಲ್‌, ಪಡುಬಿದ್ರಿಯ ಅದಾನಿ ಕಂ. ಮಾತ್ರವಲ್ಲದೆ ಎಷ್ಟೋ ಸಣ್ಣ ಕೈಗಾರಿಕೆಗಳಿಗೆಲ್ಲ ಮೂಲ ನವಮಂಗಳೂರು ಬಂದರು ಮಂಡಳಿ. ಇಲ್ಲಿಂದಲೇ ಕಚ್ಚಾ ವಸ್ತುಗಳು ಆಮದು-ರಫ್ತು ಆಗುವುದು, ಅಲ್ಲದೆ ಉತ್ಪಾದಿಸಿದ ವಸ್ತುಗಳು ಇಲ್ಲಿಂದಲೇ ರಫ್ತು ಆಗುವುದು. 

1962ರಲ್ಲಿ ಅಂದಿನ ಪ್ರಧಾನಮಂತ್ರಿ ಲಾಲ್‌ಬಹದ್ದೂರ್‌ ಶಾಸ್ತ್ರಿಯವರು ಈ ಬಂದರಿಗಾಗಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕಾಲದಲ್ಲಿಯೇ ಸರಿಸುಮಾರು 3,500ರಿಂದ 4,000 ಸಾವಿರ ಎಕರೆಯಷ್ಟು ಜಾಗವನ್ನು ಸರಕಾರ ಬಂದರಿಗಾಗಿ ವಶಪಡಿಸಿಕೊಂಡಿತ್ತು. ಇದರಿಂದಾಗಿ ಎಷ್ಟೋ ಜನರು ನಿರ್ವಸಿತರಾದರು. ಇದು ಕೃತಕ ಬಂದರು. ಬಂದರು ನಿರ್ಮಾಣಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವ್ಯಯ ಮಾಡಲಾಗಿತ್ತು. ನಿರ್ವಸಿತರಾದವರಿಗೆ ಕಾಟಿಪಳ್ಳ, ಕೃಷ್ಣಾಪುರ ಮುಂತಾದ ಕಡೆಗಳಲ್ಲಿ ಪುನರ್‌ವಸತಿ ಕಲ್ಪಿಸಲಾಗಿತ್ತು. 4 ಗ್ರಾಮದ(ಕುಳೂರು, ಪಣಂಬೂರು, ತಣ್ಣೀರುಬಾವಿ, ಕೋಡಿಕಲ್‌) ಮೀನುಗಾರರಿಗೆ ಸಮುದ್ರ ಬದಿಯ ಜಾಗವನ್ನು ಕೊಡಲಾಗಿತ್ತು. ನಿರ್ವಸಿತರಿಗೆ ಸಾಕಷ್ಟು ಮೂಲಭೂತ ಸೌಕರ್ಯಗಳು ಲಭಿಸಲಿಲ್ಲ. ಮಾತ್ರವಲ್ಲದೆ ನಿರ್ವಸಿತರು ಬಿಟ್ಟು ಕೊಟ್ಟ ಜಾಗಗಳಿಗೆ ಜುಜುಬಿ ಮೊತ್ತವನ್ನು ನೀಡಲಾಗಿತ್ತು. ನೌಕರಿ ಕನಸಿನ ಮಾತಾಗಿತ್ತು. ನಿರ್ವಸಿತರಲ್ಲಿ ಒಟ್ಟಾರೆ ಬರೀ ಶೇ.10ರಿಂದ ಶೇ.15ಜನರಿಗೆ ಮಾತ್ರ ಉದ್ಯೋಗ ನೀಡಲಾಗಿತ್ತು. 

ಈಗ ನವಮಂಗಳೂರು ಬಂದರನ್ನು ಹಂತಹಂತ ವಾಗಿ ಖಾಸಗೀಕರಣಗೊಳಿಸುವ ಹುನ್ನಾರದಲ್ಲಿದ್ದಾರೆ. ಜನರು ಕೊಟ್ಟ ಎಕರೆಗಟ್ಟಲೆ ಜಾಗಕ್ಕೆ ಬದಲಾಗಿ ಸರಕಾರ ನಿರ್ವಸಿತರಿಗೆ ಕೊಟ್ಟಿದ್ದು ಒಂದೊಂದು ಮನೆಯವರಿಗೆ ಹನ್ನೆರಡೂವರೆ ಸೆಂಟ್ಸ್‌ ಜಾಗ ಮಾತ್ರ. ಅದರಲ್ಲಿ ನಿರ್ವಸಿತರು ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿಕೊಂಡು ಜೀವಿಸಬೇಕಾಗಿತ್ತು. ನಿರ್ವಸಿತರ ಮಕ್ಕಳಿಗೆ ಸಿಗುವ ಶಾಲಾ ಸೌಲಭ್ಯ, ಆಸ್ಪತ್ರೆ ಸೌಲಭ್ಯ, ಮುಂತಾದ ಯಾವುದೇ ಸೌಲಭ್ಯವನ್ನು ನೀಡಿಲ್ಲ. ನವಮಂಗಳೂರು ಬಂದರು ಮಂಡಳಿಯ ಬೋರ್ಡ್‌ ಆಫ್ ಟ್ರಸ್ಟಿಯಲ್ಲಿ ನಿರ್ವಸಿತರಿಗೆ ಪ್ರಾತಿನಿಧ್ಯ ಕೊಡುತ್ತಿಲ್ಲ. ಬಂದರು ಮಂಡಳಿ ಆಗುವ ಸಂದರ್ಭ ಸರಿಸುಮಾರು 1200 ಕೆಲಸಗಾರರಿದ್ದರು. ಈಗ ಅದು 200-300ಕ್ಕಿಳಿದಿದೆ. ಅವರೂ ನಿವೃತ್ತರಾದರೆ ಉಳಿಯುವವರು ದಿನಕೂಲಿ ನೌಕರರು ಮಾತ್ರ. ಈಗ ಎಲ್ಲ ವಿಭಾಗಗಳಲ್ಲಿಯೂ ಗುತ್ತಿಗೆ ಆಧಾರದ ಮೇಲೆ ಜನರನ್ನು ಕೆಲಸಕ್ಕೆ ನೇಮಿಸುತ್ತಿದ್ದಾರೆ. ಬಂದರಿಗಾಗಿ ಜಾಗ ಬಿಡುವಾಗ ನಿರ್ವಸಿತರಿಗೆ ಫಿಶಿಂಗ್‌ ಬಂದರು ಮಾಡಿ ಕೊಡುವ ಪ್ರಸ್ತಾವ ಇಡಲಾಗಿತ್ತು. ಈ ಒಪ್ಪಂದದ ನನೆಗುದಿಗೆ ಬಿದ್ದಿದೆ. ಬಂದರು ಮಂಡಳಿಯ ಗಡಿಯ ಒಳಗೆ ಧಕ್ಕೆಯ ಹತ್ತಿರ ಒಮ್ಮೆ ಸರ್ವೆ ಮಾಡಿ ಫಿಶಿಂಗ್‌ ಬಂದರು ಮಾಡುವುದೆಂದು ಪ್ರಸ್ತಾಪ ಇತ್ತು. ಅದನ್ನು ಭದ್ರತೆ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಹತ್ತಿರದಲ್ಲೇ “ಶೀನಪ್ಪೆರೆ ದೆಂಬೆಲ್‌’ ಎಂಬ ಕಾಲುವೇ ಹರಿಯುತ್ತಿದೆ. ಅದನ್ನೊಮ್ಮೆ ನೋಡಿ ಫಿಶಿಂಗ್‌ ಬಂದರು ನಿರ್ಮಿಸುವುದೆಂದು ನಿಶ್ಚಯಿಸ ಲಾಯಿತು. ಅದು ಕರಾವಳಿ ರಕ್ಷಣಾ ಪಡೆ, ನೌಕಾನೆಲೆಗಾಗಿ ಇರುವ ಜಾಗ ಎಂಬ ನೆಲೆಯಲ್ಲಿ ಕೈಬಿಡಲಾಯಿತು. ಈಗ ಕುಳಾಯಿ ಚಿತ್ರಾಪುರದ ಹತ್ತಿರ ಸರಕಾರದ ಸ್ಥಳದಲ್ಲಿ ಫಿಶಿಂಗ್‌ ಬಂದರು ನಿರ್ಮಿಸುವುದೆಂದು 40 ಲಕ್ಷ ಖರ್ಚು ಮಾಡಿ ಸರ್ವೆ ಆಗಿದೆ. ಇದನ್ನು ನವಮಂಗಳೂರು ಬಂದರು ಮಂಡಳಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಅನುದಾನದೊಂದಿಗೆ ಮಾಡುವುದೆಂದು ತೀರ್ಮಾನಿಸಿ ಅಡಿಗಲ್ಲು ಹಾಕುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಇದು ಕಾರ್ಯಗತವಾದರೆ ಸ್ಥಳೀಯರ, ನಿರ್ವಸಿತರ ಬದುಕಿಗೆ ಆಸರೆ ಸಿಗಬಹುದೆಂಬ ದೂರದ ಆಸೆ. 

ಸರಕಾರದ ಭರವಸೆಯನ್ನು ನಂಬಿ ಜನರು ಫ‌ಲವತ್ತಾದ ಎಕರೆಗಟ್ಟಲೆ ಜಾಗವನ್ನು ತ್ಯಜಿಸಿ, ಅತ್ತ ಜಾಗವೂ ಇಲ್ಲ, ಇತ್ತ ಭವಿಷ್ಯವೂ ಇಲ್ಲದ ಸ್ಥಿತಿಯಲ್ಲಿ ದ್ದಾರೆ. ಈಗ ಸರಕಾರ ಬಂದರು ಮಂಡಳಿಯನ್ನೇ ಖಾಸಗಿಯವರ ಉಸ್ತುವಾರಿಗೆ ಒಪ್ಪಿಸುವುದು ಯಾವ ನ್ಯಾಯ? ಖಾಸಗಿಯವರ ಒಡೆತನಕ್ಕೆ ಬಿಟ್ಟ ನಂತರ ಇಲ್ಲಿ ಹೊರರಾಜ್ಯದ ಜನರೇ ಕೆಲಸಕ್ಕೆ ಬಂದು ಸೇರಲಿದ್ದಾರೆ. ಕೆಲ ಸಮಯದ ಹಿಂದೆಯಷ್ಟೆ ಮೈನ್‌ ಸೆಕ್ಷನ್‌ನಲ್ಲಿ ಹೊರ ರಾಜ್ಯದ 28 ಜನರು ಕೆಲಸಕ್ಕೆ ಸೇರಿದ್ದಾರೆ.ಆದರೆ ನೌಕರಿ ಕೊಡಬೇಕೆನ್ನುವ ಸ್ಥಳೀಯರ ಮತ್ತು ನಿರ್ವಸಿತರ ಕೂಗಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ . 

Advertisement

ನವಮಂಗಳೂರು ಬಂದರನ್ನು ಖಾಸಗೀಕರಣ ಗೊಳಿಸುವ ಬದಲು ನಾವು ಕೊಟ್ಟಿರುವ ಜಾಗವನ್ನು ನಮಗೆ ಮರಳಿ ಕೊಡಿ ಎನ್ನುವುದು ನಿರ್ವಸಿತರ ಅಹವಾಲು. ಅಲ್ಲಿ ಅವರು ತ್ಯಜಿಸಿ ಬಂದ ಗುಡಿ ಗೋಪುರ, ಭಜನಾ ಮಂದಿರ, ವ್ಯಾಯಾಮ ಶಾಲೆ, ನಾಗನ ಗುಡಿ, ದೈವದ ಗುಡಿ, ದೇವಸ್ಥಾನಗಳು ಇನ್ನು ಜೀವಂತ ಇದ್ದಂತೆ ಭಾಸವಾಗುತ್ತಿದೆ. ಆ ಎಲ್ಲವೂ ಅವಶೇಷಗಳ ಅಡಿಯಲ್ಲಿ ತನ್ನ ಗತವೈಭವವನ್ನು ಮೆಲುಕು ಹಾಕುತ್ತಿರುವಂತೆ ಅನ್ನಿಸುತ್ತಿದೆ.

ಯೋಗೀಶ್‌ ಕಾಂಚನ್‌ ಬೈಕಂಪಾಡಿ 

Advertisement

Udayavani is now on Telegram. Click here to join our channel and stay updated with the latest news.

Next