ನವದೆಹಲಿ: ರಾಜ್ಯದಲ್ಲಿ ಈ ವರ್ಷ ಜಲ್ಲಿಕಟ್ಟು ಸ್ಪರ್ಧೆ ನಡೆಯುವುದು ಖಚಿತ ಎಂದು ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ ಸೆಲ್ವಂ ಹೇಳಿಕೆ ನೀಡಿದ್ದ ಬೆನ್ನಲ್ಲೇ ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ ಮೇಲಿನ ನಿಷೇಧ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿ ಕುರಿತ ತೀರ್ಪನ್ನು ಶನಿವಾರದೊಳಗೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಆದೇಶ ನೀಡಿದೆ. ಹಾಗಾಗಿ ಈ ಬಾರಿ ತಮಿಳುನಾಡಿನಲ್ಲಿ ಪೊಂಗಲ್ ಸಂದರ್ಭ ಜಲ್ಲಿಕಟ್ಟು ಸ್ಪರ್ಧೆ ಬಹುತೇಕ ನಡೆಯುವುದು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ.
ಜಲ್ಲಿಕಟ್ಟು ಸ್ಪರ್ಧೆ ಮೇಲಿನ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇದಕ್ಕೆ ಸಂಬಂಧಪಟ್ಟ ತೀರ್ಪು ಸಿದ್ಧವಾಗಿದೆ. ಆದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನ್ಯಾಯಾಧೀಶರು ಮುಂದಿನ 2 ದಿನದೊಳಗೆ ತಮ್ಮ ಆದೇಶ ನೀಡಬೇಕೆಂದು ಹೇಳುವುದು ಸಮಂಜಸವಾದ ಕ್ರಮವಲ್ಲ ಎಂದು ಹೇಳಿದೆ.
ಜಲ್ಲಿಕಟ್ಟು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಇದನ್ನು ಸಂಕ್ರಾಂತಿ ಹಬ್ಬದ ಪೊಂಗಲ್ ವೇಳೆ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಆದರೆ ಸುಪ್ರೀಂಕೋರ್ಟ್ ಜಲ್ಲಿಕಟ್ಟು ಸ್ಪರ್ಧೆ ಮೇಲೆ ನಿಷೇಧ ಹೇರಿದ್ದರಿಂದ ಕಳೆದ 2 ವರ್ಷಗಳಿಂದ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಗೆ ತಡೆ ಬಿದ್ದಿತ್ತು.
ಗೂಳಿಗಳಿಗೆ ಹಿಂಸೆ ನೀಡುವುದರಿಂದ ಜಲ್ಲಿಕಟ್ಟು ಸ್ಪರ್ಧೆಗೆ ನಿಷೇಧ ಹೇರಬೇಕೆಂದು ಕೋರಿ ಪ್ರಾಣಿ ದಯಾ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.
ಜಲ್ಲಿಕಟ್ಟು ಕ್ರೀಡೋತ್ಸವ ತಮಿಳುನಾಡಿನಲ್ಲಿ ನಡೆದೇ ತೀರುತ್ತದೆ; ಈ ಕ್ರೀಡೆಯನ್ನು ಪುನರಾರಂಭಿಸುವ ಯತ್ನಗಳನ್ನು ತಮಿಳು ನಾಡು ಸರಕಾರ ಕೈಬಿಡುವುದಿಲ್ಲ’ ಎಂದು ಪನ್ನೀರಸೆಲ್ವಂ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದರು.
ಸೋಮವಾರ ಪನ್ನೀರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪೊಂಗಲ್ ಸಂದರ್ಭದಲ್ಲಿ ನಡೆಸಲಾಗುವ ರಾಜ್ಯದ ಪ್ರಾಚೀನ ಮತ್ತು ಪಾರಂಪರಿಕ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದಕ್ಕಾಗಿ ಅಧ್ಯಾದೇಶವನ್ನು ತರುವಂತೆ ಕೇಳಿಕೊಂಡಿದ್ದರು.